ಮುಂಡಾಜೆಯಿಂದ ಮೂಡಬಿದ್ರೆ ಪುತ್ತಿಗೆಗೆ ನೂತನ ಕೊಡಿ ಮರ ಸಾಗಾಟ

ಉಜಿರೆ: ಮೂಡಬಿದಿರೆಯ ಹದಿನೆಂಟು ಮಾಗಣೆಗಳಿಗೆ ಸೇರಿದ ಮಹೊತೋಭಾರ ಶ್ರೀ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಧ್ವಜಸ್ತಂಭ ನಿರ್ಮಿಸಲು ಬೆಳ್ತಂಗಡಿ ತಾಲೂಕಿನ ಮುಂಡಾಜೆಯಿಂದ 63 ಅಡಿ ಉದ್ದದ ತೇಗದ ಕೊಡಿಮರವನ್ನು ನ.14ರ ಮದ್ಯಾಹ್ನ ವಿಶೇಷ ವಾಹನದಲ್ಲಿ ನೂರಾರು ಭಕ್ತರ ಜಯಕಾರದೊಂದಿಗೆ ಸಾಗಿಸಲಾಯಿತು.
ಪುತ್ತಿಗೆ ಕ್ಷೇತ್ರದ ತಂತ್ರಿ ವರ್ಮರಾದ ಎಡಪದವು ವೆಂಕಟೇಶ ತಂತ್ರಿ, ಮರಲೀಧರ ತಂತ್ರಿ, ಅರ್ಚಕರಾದ ಅಡಿಗಳ್ ಶ್ರೀನಿವಾಸ ಭಟ್ ಮತ್ತು ಅನಂತಕೃಷ್ಣ ಭಟ್ ನೇತೃತ್ವದಲ್ಲಿ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ ಎಂ ಉಪಸ್ಥಿತಿಯಲ್ಲಿ ಮುಂಜಾನೆ 9.10ರ ಶುಭ ಮುಹೂರ್ತದಲ್ಲಿ ಮುಂಡಾಜೆ ಕಾಪಿನ ಬಾಗಿಲು ಕೃಷಿಕ ಶರಶ್ಚಂದ್ರ ಖಾಡಿಲ್ಕರ್ ಅವರ ಸ್ವಂತ ತೋಟದಲ್ಲಿ ಬೆಳೆದ ತೇಗದ ಮರಕ್ಕೆ ಕ್ಷೇತ್ರದ ಪ್ರಸಾದ ಹಾಕಿ ಪೂಜೆ ನೆರವೇರಿಸಿ ಮರ ಕಡಿಯಲಾಯ್ತು.
ಮೂಲತಃ ಪುತ್ತಿಗೆಯವರಾದ ಡಾ| ಪದ್ಮನಾಭ ಉಡುಪರು ಸೇವಾ ರೂಪವಾಗಿ ಸಮರ್ಪಿಸಲಿರುವ ನೂತನ ಕೊಡಿಮರ ಕಡಿಯುವ ಮೊದಲು ಉಜಿರೆ ಶ್ರೀ ಜನಾರ್ಧನ ದೇವರಿಗೆ ಸರ್ವ ಸೇವೆ ಹಾಗೂ ಮುಂಡಾಜೆ ಸಬ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮರಕಡಿದು ಕ್ರೇನ್ ಮೂಲಕ ಹೆದಾರಿ ಬದಿಗೆ ತರಲಾಯಿತು. ಮಂಗಳೂರಿನ ಗಣೇಶ ಶಿಪ್ಪಿಂಗ್ ಏಜೆನ್ಸಿಯ ವಿಶೇಷ ವಾಹನಕ್ಕೆ ಕ್ರೇನ್ ಮೂಲಕ ಏರಿಸಿ ಕೊಡಿಮರವನ್ನು ಪುಪ್ಪಾಲಂಕಾರಗಳಿಂದ ಶೃಂಗರಿಸಲಾಯಿತು.
ಮದ್ಯಾಹ್ನ ಒಂದು ಗಂಟೆಗೆ ಹೊರಟ ಕೊಡಿಮರದ ವಾಹನದ ಮುಂದೆ ಕೊಂಬು, ವಾದ್ಯ, ಚೆಂಡೆ ಮೇಳ, ಸಿಡಿಮದ್ದು, ೫೦ಕ್ಕೂ ಹೆಚ್ಚು ಕಾರು ಬೈಕ್‌ಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಕುಲದೀಪ ಎಂ ತೆಂಗಿನ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಆಗಮಿಸಿ ಸಾಗಾಟಕ್ಕೆ ಶುಭಕೋರಿದರು. ಪುತ್ತಿಗೆ ಶಿವಪ್ರಸಾದ ಆಚಾರ್ಯ, ದುರ್ಗಾಪ್ರಕಾಶ ಉಡುಪ, ವಾದಿರಾಜ ಮಡ್ಮಣ್ಣಾಯ, ಈಶ್ವರ ಮುಚ್ಚಿಂತಾಯ, ಮುಂಡಾಜೆಯ ಜಿ.ಎನ್ ಭಿಡೆ, ನಾಮದೇವ್ ಪುತ್ತಿಗೆಯ ಅರ್ಚಕ ವೃಂದ, ಜೀರ್ಣೋದ್ದಾರ ಸಮಿತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಕ್ಷೇತ್ರಕ್ಕೆ ಈ ಮೊದಲು 1927ರಲ್ಲಿ ಕೊಡಿಮರ ಅಳವಡಿಸಲಾಗಿದ್ದು ಜೀರ್ಣೋದ್ದಾರ ಸಂದರ್ಭದಲ್ಲಿ ನೂತನ ಕೊಡಿಮರ ಅಳವಡಿಸುತ್ತಿರುವುದಾಗಿ ಕುಲದೀಪ್ ಎಂ ತಿಳಿಸಿದ್ದಾರೆ. ಕೊಡಿಮರ ಹೊತ್ತ ವಾಹನ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ವೇಣೂರು ಮಾರ್ಗವಾಗಿ ಮೂಡಬಿದ್ರೆಗೆ ತೆರಳಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.