ತಣ್ಣೀರುಪಂತ: ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಮುಖಾಂತರ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಕಲ್ಲೇರಿ ಇದರ ಸದಸ್ಯರಾಗಿರುವ ಎಲ್ಲರ ನಿಯೋಗ ಕೃಷಿ ಅಧ್ಯಯನಕ್ಕಾಗಿ 1 ವಾರಗಳ ಅಂತರ್ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಕೆವಿಕೆ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ರಶ್ಮಿ ಮತ್ತು ಕಲ್ಲೇರಿ ರೈತ ಉತ್ಪಾದನಾ ಕಂಪೆನಿ ಅಧ್ಯಕ್ಷ, ಹಿರಿಯ ಕೃಷಿಕ ದುಗ್ಗಪ್ಪ ಗೌಡ ಪೊಸೊಂದೋಡಿ ಅವರ ನೇತೃತ್ವದಲ್ಲಿ ಈ ನಿಯೋಗ ಪ್ರವಾಸ ಕೈಗೊಂಡಿತು.
ಮಹಾರಾಷ್ಟ್ರ, ಸೋಲಾಪುರ ಎಫ್.ಪಿ.ಒ ರೈತರ ದ್ರಾಕ್ಷಿ ಬೆಳೆ ಸಂಸ್ಕರಣಾ ಕೇಂದ್ರ, ಎನ್. ಆರ್. ಸಿ ಕೇಂದ್ರಕ್ಕೆ ಭೇಟಿ ನೀಡಿದರು.
ವಿಶೇಷವಾಗಿ ದಾಳಿಂಬೆ ಕೃಷಿ ಮಾಹಿತಿ ಪಡೆದರು. ಬಾರಮತಿಕೆಯಲ್ಲಿ ನೀರು ಸಂಗ್ರಹಣೆ, ನೀರು- ಗೊಬ್ಬರ ಪೂರೈಕೆ, ಗಿಡಗಳ ನಿರ್ವಹಣೆಯ ಸಂಪೂರ್ಣ ಮಾಹಿತಿ ಪಡೆದರು.
ಪಶುಸಂಗೋಪನೆ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ಆಡು ಸಾಕಾಣಿಕೆ, ಕೋಳಿ – ಹಂದಿ ಸಾಕಾಣಿಕೆ, ವಿವಿಧ ಬಗೆಯ ಹಣ್ಣುಗಳ ಕಸಿ ವಿಧಾನಗಳ ಮಾಹಿತಿ ಪಡೆದರು. ಅಣ್ಣಾ ಹಜಾರೆಯವರ ಮಾದರಿ ಗ್ರಾಮಕ್ಕೂ ಭೇಟಿ ನೀಡಿ ಅವರ ಕಲ್ಪನೆಯ ಅನುಷ್ಠಾನದ ಕಾರ್ಯವೈಖರಿ ವೀಕ್ಷಿಸಿ ಪ್ರೇರಣೆ ಪಡೆದರು. ಸಹ್ಯಾದ್ರಿ ಎಫ್.ಪಿ.ಒ ಗೂ ಭೇಟಿ ನೀಡಲಾಯಿತು.
ಎಫ್.ಪಿ.ಓ ಕಂಪೆನಿಯಲ್ಲಿ 8ಸಾವಿರ ರೈತ ಸದಸ್ಯರಿಂದ ಯಶಸ್ವಿ ಕಾರ್ಯಾಚರಣೆ:
ಎಫ್.ಪಿ.ಒ ಕಂಪೆನಿ ಈಗಾಗಲೇ 8 ಸಾವಿರ ರೈತ ಸದಸ್ಯರನ್ನು ನೊಂದಾಯಿಸಿಕೊಂಡು ಅವರೇ ಬೆಳೆದ ಮಾವು, ಪೇರಳೆ, ಟೊಮೆಟೋ, ದ್ರಾಕ್ಷಿ ಇವುಗಳ ಬೆಳೆ ಬೆಳೆದು ಅದನ್ನು ಸಂಗ್ರಹಿಸಿ ಹೊರ ದೇಶಗಳಿಗೆ ಮಾರ್ಕೆಟಿಂಗ್ ಮಾಡುವ ಸಂಸ್ಥೆಯಾಗಿರುತ್ತದೆ. ತರಕಾರಿ, ಹಣ್ಣು ಹಂಪಲುಗಳನ್ನು ಮೌಲ್ಯವರ್ಧನಾ ಕೇಂದ್ರ ವೀಕ್ಷಿಸಿ, ರೈತರ ಬೆಳೆಗೆ ಕೋಟಿಗಟ್ಟಲೆ ವ್ಯವಹಾರ ಕುದುರಿಸಿ, ಅದರ ಲಾಭವನ್ನು ನೇರವಾಗಿ ರೈತರಿಗೆ ಹಂಚುವ ಕಾರ್ಯವಿಧಾನವನ್ನು ವೀಕ್ಷಿಸಲಾಯಿತು. ಬಳಿಕ ಕೃಷಿ ತಾಂತ್ರಿಕ ಕಾಲೇಜಿಗೂ ಭೇಟಿ ನೀಡಿ ಅಲ್ಲಿ ತರಕಾರಿ ಹಣ್ಣುಹಂಪಲು ಸಂಸ್ಕರಣೆಯ ಬಗ್ಗೆ ತಿಳಿದುಕೊಳ್ಳಲಾಯಿತು. ಬಳಿಕ ಬಾಗಲಕೋಟೆ ಕೆ.ವಿ.ಕೆ ವಿಶ್ವ ವಿದ್ಯಾಲಯಕ್ಕೂ ಭೇಟಿ ನೀಡಲಾಯಿತು.
*ಮಿಶ್ರ ಬೆಳೆಯಿಂದ ಪಡೆಯಬಹುದಾದ ಲಾಭದ ಬಗ್ಗೆ ಜ್ಞಾನವರ್ಧನೆಯಾಯಿತು: ರೈತ ಉತ್ಪಾದನಾ ಕಂಪೆನಿ ಪ್ರತಿಕ್ರಿಯೆ
*ಈ ನಿಯೋಗದಲ್ಲಿ ಪ್ರವಾಸ ಕೈಗೊಂಡು ಮರಳಿದ ಕಲ್ಲೇರಿ ರೈತ ಉತ್ಪಾದನಾ ಕಂಪೆನಿಯ ಅಧ್ಯಕ್ಷರು ಮತ್ತು ಸದಸ್ಯರ ನಿಯೋಗ ಪ್ರತಿಕ್ರಿಯಿಸಿ, ರೈತರಾದ ನಾವು ಕಂಪೆನಿಯ ಮತ್ತು ಕೆವಿಕೆಯ ಮುಖಾಂತರ ಸರಕಾರಿ ಅನುದಾನದಲ್ಲಿ ಕೃಷಿ ಅಧ್ಯಯನ ಪಡೆಯಲು ಸಾಧ್ಯವಾಯಿತು.
*ನಮ್ಮ ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಮಾಡುವ ಕೃಷಿಬೆಳೆಗಳಿಗೆ ದರ ಕಡಿಮೆಯಾದ ಸಂದರ್ಭ ಮಿಶ್ರ ಬೆಳೆ ಬೆಳೆಯುವುದರಿಂದ ರೈತರಿಗೆ ಆಗುವ ಲಾಭ, ಬಾಳೆ, ಇತರ ಹಣ್ಣು ಹಂಪಲು, ತರಕಾರಿ ಇವುಗಳ ಮೌಲ್ಯವರ್ಧನೆ ಮಾಡಿಕೊಳ್ಳಬಹುದಾದ ರೀತಿ, ಹೈನುಗಾರಿಕೆಯಿಂದ ಇನ್ನಷ್ಟು ಪ್ರಗತಿ ಸಾಧಿಸುವ ಪ್ರೇರಣೆ, ನಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ರೀತಿ, ನಾವು ಬೆಳೆಯುವ ಅಡಿಕೆ, ತೆಂಗು, ಭತ್ತ ಬೆಳೆಯ ಆದಾಯದೊಟ್ಟಿಗೆ ಈ ಬೆಳೆಗಳನ್ನು ಬೆಳೆಸಿ ಹೆಚ್ಚು ಆದಾಯ ಗಳಿಸಬಹುದಾದ ಸಾಧ್ಯತೆಗಳ ಬಗ್ಗೆ ತಿಳಿಯಲು ಈ ಪ್ರವಾಸದಿಂದ ನಮಗೆ ಸಾಧ್ಯವಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.