HomePage_Banner_
HomePage_Banner_
HomePage_Banner_

ವಾಲಿಬಾಲ್: ಬಂದಾರು ಸರಕಾರಿ ಶಾಲಾ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ

ಬಂದಾರು: ನ. 9 ರಂದು ಕುಣಿಗಲ್‌ನಲ್ಲಿ ನಡೆದ 14ರ ವಯೋ ಮಾನದ ಬಾಲಿಕೆಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದ ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಂದಾರು ಸರಕಾರಿ ಶಾಲಾ 6 ಮಂದಿ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅವರು ಕ್ರಮವಾಗಿ ಬೆಳಗಾಂ, ಬೆಂಗಳೂರು ಮತ್ತು ಅಂತಿಮವಾಗಿ ಗುಲ್ಬರ್ಗ ವಿಭಾಗವನ್ನು ಸೋಲಿಸುವುದರೊಂದಿಗೆ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಮುಂದಕ್ಕೆ ಕರ್ನಾಟಕ ತಂಡದ ಕಪ್ತಾನೆಯಾಗಿ ಬಂದಾರಿನ ಅನ್ವಿತಾ ಅವರು ತಂಡವನ್ನು ಮುನ್ನಡೆಸಲಿದ್ದು, ಅವರ ತಂಡದಲ್ಲಿ ಇದೇ ಶಾಲೆಯ ವಿದ್ಯಾರ್ಥಿನಿಯರಾದ ಅಶ್ವಿನಿ, ಸಹನಾ, ಮೋಹಿನಿ, ವರ್ಷಾ ಮತ್ತು ರಕ್ಷಿತಾ ಅವರು ಅತ್ಯುತ್ಕೃಷ್ಟ ಕ್ರೀಡಾ ಪ್ರದರ್ಶನ ತೋರುವ ಮೂಲಕ ರಾಷ್ಟ್ರಮಟ್ಟದ ಪಂದ್ಯಾಟದ ಅರ್ಹತೆ ಪಡೆದಿದ್ದಾರೆ.
ಮುಂದಕ್ಕೆ ಆಂಧ್ರಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಅವರು ತರಬೇತಿ ನೀಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕ ಮಂಜನಾಯ್ಕ ಸಿ ಮತ್ತು ಶಿಕ್ಷಕ ವೃಂದದವರು ಸಹಕಾರ ನೀಡುತ್ತಿದ್ದಾರೆ. ಶಾಸಕ ಹರೀಶ್ ಪೂಂಜ, ಡಿಸಿಪಿಐ ವಾಲ್ಟರ್ ಡಿಮೆಲ್ಲೋ, ಬಿಇಒ ಸತೀಶ್, ಎಸ್‌ಡಿಎಂಸಿ, ಹಳೆವಿದ್ಯಾರ್ಥಿ ಸಂಘ ಪೂರಕ ಪ್ರೋತ್ಸಾಹ ನೀಡುತ್ತಿದ್ದಾರೆ.
ಸರಕಾರಿ ಶಾಲಾ ಮಕ್ಕಳ ರಾಷ್ಟ್ರಮಟ್ಟದ ಸಾಧನೆ:
ಬಂದಾರು ಗ್ರಾಮ ಬೆಳ್ತಂಗಡಿ ತಾಲೂಕಿನ ದೂರದ ಒಳನಾಡು ಗ್ರಾಮವಾಗಿದ್ದು, ಇಲ್ಲಿನ ಸರಕಾರಿ ಶಾಲಾ ಮಕ್ಕಳು ರಾಷ್ಟ್ರಮಟ್ಟದ ಸಾಧನೆ ಮೆರೆದಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಮೂಲಸೌಕರ್ಯಗಳ ಕೊರತೆ, ಪೇಟೆ ಪಟ್ಟಣದ ವಿದ್ಯಾರ್ಥಿಗಳಂತೆ ಸೂಕ್ತ ಪ್ರಾಯೋಜಕರ ಕೊರತೆ ಸಹಿತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಸರಕಾರದಿಂದ ಬರುತ್ತದೆಯಾದರೂ ಅಷ್ಟೂ ದೂರಕ್ಕೆ ಕ್ರೀಡೆಗೆ ಕರೆದುಕೊಂಡು ಹೋಗುವುದಕ್ಕೆ ಊರ ದಾನಿಗಳಿಂದ ದೇಣಿಗೆ ಸಂಗ್ರಹಿಸುವ ಸ್ಥಿತಿ ಇದೆ. ತೀರಾ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಂದ ಬಂದಿರುವ ಗ್ರಾಮಾಂತರ ಭಾಗದ ಈ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಶೂ ಮತ್ತು ಇತರ ನೈತಿಕ ಬೆಂಬಲ ತುಂಬುವವರ ಅವಶ್ಯಕತೆ ಇದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.