HomePage_Banner_
HomePage_Banner_

ಪಟ್ರಮೆ ಸರಕಾರಿ ಶಾಲಾ 3 ಕೊಠಡಿ, ಸಭಾಂಗಣ, ಧ್ವಜಸ್ತಂಭ ಉದ್ಘಾಟನೆ

3 ಕೋಟಿ ರೂ. ಅನುದಾನ ನನ್ನ ಪ್ರಯತ್ನ : ಹಾಲಿ-ಮಾಜಿ ಶಾಸಕರಿಂದ ಪ್ರತಿಪಾದನೆ


ಪಟ್ರಮೆ: ಪಟ್ರಮೆ ಗ್ರಾಮದ ಅನಾರು ಸ. ಉನ್ನತೀಕರಿಸಿದ ಹಿ. ಪ್ರಾಥಮಿಕ ಶಾಲೆಯಲ್ಲಿ ಅನಾರು ಶಾಲಾ ಸಭಾಂಗಣ ಸಮಿತಿ ಪಟ್ರಮೆ ಮತ್ತು ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸರಕಾರದ ವತಿಯಿಂದ ನಿರ್ಮಾಣಗೊಂಡಿರುವ ಮೂರು ತರಗತಿ ಕೊಠಡಿಗಳ ಉದ್ಘಾಟನೆ, ಶಾಲಾ ಹಿತೈಷಿಗಳ ಕೊಡುಗೆಗಳಿಂದ ನಿರ್ಮಿಸಿದ ಜನಾರ್ಪಣಾ ಸಭಾಭವನ ಮತ್ತು ಶಾಲಾ ನೂತನ ಧ್ವಜಸ್ತಂಭ ಉದ್ಘಾಟನಾ ಕಾರ್ಯಕ್ರಮ ನ. 13 ರಂದು ಜರುಗಿತು.
ಈ ಸಮಾರಂಭದಲ್ಲಿ ಗೋಳಿತೊಟ್ಟು-ಪಟ್ರಮೆ, ಧರ್ಮಸ್ಥಳ- ಪಟ್ರಮೆ ರಸ್ತೆಗೆ ಮಂಜೂರಾಗಿರುವ 3 ಕೋಟಿ ರೂ. ಅನುದಾನದ ವಿಚಾರವಾಗಿ, ಇದು ನಾನು ಮಾಡಿಸಿದ್ದೆಂದು ಮಾಜಿ ಶಾಸಕ ವಸಂತ ಬಂಗೇರ ವಾದ ಮಂಡಿಸಿದರೆ, ಇದು ನನ್ನ ಪ್ರಯತ್ನದಿಂದ ಆಗಿದೆ ಎಂದು ಶಾಸಕ ಹರೀಶ್ ಪೂಂಜ ಇಬ್ಬರೂ ತಮ್ಮ ಭಾಷಣದಲ್ಲಿ ಪ್ರತ್ಯುತ್ತರ ನೀಡಿದ್ದು, ದೇವರ ಹೆಸರಿನಲ್ಲಿ ಪ್ರಮಾಣ ಮಾಡಲೂ ಸಿದ್ಧ ಎಂದು ಸವಾಲು ಹಾಕಿಕೊಂಡ ವಿದ್ಯಮಾನ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ ವಹಿಸಿದ್ದರು.

ಸರಕಾರಿ ಶಾಲೆಗಳ ಸೌಂದರೀಕರಣದ ದೃಷ್ಠಿಯಿಂದ ಯೋಜನೆ ಇರಬೇಕು: ಹರೀಶ್ ಪೂಂಜ
ಗ್ರಾಮೀಣ ಭಾಗದ ಶಾಲೆಗಳಿಂದ ಸ್ವಾಮಿ ವಿವೇಕಾನಂದರಂತಹಾ, ಬಿ.ಆರ್ ಅಂಬೇಡ್ಕರ್‌ರಂತಹಾ, ಎಪಿಜೆ ಅಬ್ದುಲ್ ಕಲಾಂರಂತಹಾ, ನರೇಂದ್ರ ಮೋದಿಯಂತಹಾ ವ್ಯಕ್ತಿಗಳು ಹುಟ್ಟಿಬರಬೇಕು. ನಾನೂ ಕೂಡ ಸರಕಾರಿ ಶಾಲೆಯಲ್ಲಿ ಕಲಿತವನಾಗಿದ್ದು
ನಮಗೂ ಈ ಬಗ್ಗೆ ಕಾಳಜಿ ಇದೆ. ಆದ್ದರಿಂದ ಎಂಆರ್‌ಪಿಎಲ್ ಖಾಸಗಿ ಸಂಸ್ಥೆಯ ಸಿಎಸ್‌ಆರ್ ಅನುದಾನದಿಂದ ತಾಲೂಕಿನ ಸರಕಾರಿ ಶಾಲೆಗಳಿಗೆ ಶೌಚಾಲಯ, ಸೋಲಾರ್ ಅಳವಡಿಕೆಯಂತಹಾ ಕಾರ್ಯಕ್ಕೆ 10 ಕೋಟಿ ರೂ.ವರೆಗೆ ಅನುದಾನ ತಂದ ಶಾಸಕನಿದ್ದರೆ ಅದು ನಾನು ಮಾತ್ರ. ಸರಕಾರಿ ಶಾಲೆಗಳಲ್ಲಿ ಶಾಶ್ವತ ಕಾಮಗಾರಿ ನಡೆಸುವಾಗ ಅಲ್ಲಲ್ಲಿ ಕಟ್ಟಡಗಳನ್ನು ಕಟ್ಟುವ ಬದಲು ಶಾಲಾ ಸೌಂದರೀಕರಣಕ್ಕೆ ಧಕ್ಕೆಯಾಗದಂತೆ ಯೋಜನೆ ಇರಬೇಕು ಎಂದು ನಾನು ಶಾಸಕನಾದ ಪ್ರಥಮದಲ್ಲೇ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ನಾವು ಜನಪ್ರತಿನಿಧಿಗಳಾಗಿರುವುದು ಸಮಾಜದ ಉದ್ಧಾರಕ್ಕೆ ಎಂದರು. ನಿಡ್ಲೆ – ದೇವಸ್ಥಾನ ರಸ್ತೆಗೆ 25 ಲಕ್ಷ, ಇನ್ನೆರಡು ರಸ್ತೆಗಳಿಗೆ ತಲಾ 10 ಲಕ್ಷದಂತೆ ಒಟ್ಟು 45 ಲಕ್ಷ ಅನುದಾನ ನೀಡಿದ್ದೇನೆ. ಆವರಣ ಗೋಡೆ ರಚನೆಗೆ 2 ಲಕ್ಷ ರೂ. ನೀಡಲಿದ್ದೇನೆ. ವೈಯುಕ್ತಿಕ ನೆಲೆಯಿಂದ 2 ಕಂಪ್ಯೂಟರ್ ಒದಗಿಸಿಕೊಡುತ್ತೇನೆ ಭರವಸೆ ನೀಡಿದರು.

ಎಲ್ಲಾ ಶಿಕ್ಷಕರೂ ಮಕ್ಕಳ ಏಳಿಗೆಯ ಗುರಿಯಿಂದ ಕೆಲಸ ಮಾಡುತ್ತಾರೆ: ವಸಂತ ಬಂಗೇರ:
ಧ್ವಜಸ್ತಂಭ ಉದ್ಘಾಟನೆಗೊಳಿಸಿ ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಡುವ ವರ್ಗ ಇದ್ದರೆ ಅದು ಅಧ್ಯಾಪಕರು. ಎಲ್ಲಾ ಶಿಕ್ಷಕರೂ ತಾವು ಕಲಿಸುವ ಮಕ್ಕಳ ಬಗ್ಗೆ ಧ್ವೇಷ ಇಲ್ಲದೆ ಮಕ್ಕಳ ಅಭಿವೃದ್ಧಿ ಗುರಿಯಾಗಿಸಿ ಉತ್ತಮವಾಗಿ ಕೆಲಸ ಮಾಡುತ್ತಾರೆ. ವಿದ್ಯಾಸಂಸ್ಥೆಯ ಏಳಿಗೆಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅದು ನಮ್ಮ ಧರ್ಮ ಎಂದರು.

ನಾವು ಕೊಡುವ ಅನುದಾನ ನಿಮ್ಮದೇ ತೆರಿಗೆ ದುಡ್ಡು: ಹರೀಶ್ ಕುಮಾರ್
ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ಜನಾರ್ಪಣಾ ಕೊಠಡಿ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟ, ಪೂರಕ ವ್ಯವಸ್ಥೆಗಳು ಇದ್ದರೆ ಜನ ಆಕರ್ಷಿತರಾಗುತ್ತಾರೆ. ಅದಕ್ಕಾಗಿ ಸರಕಾರ ಕೂಡ ಸರಕಾರಿ ಶಾಲೆಯಲ್ಲಿ ಶಿಕ್ಷಕರನ್ನು ನೇಮಿಸಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭಿಸುವುದಾದರೆ ಅವಕಾಶ ನೀಡಿದೆ. ಜನಪ್ರತಿನಿಧಿಗಳಾಗುವ ಅವಕಾಶ ನಮಗೆ ದೇವರು ನೀಡಿದ್ದು. ನಾನು ಶಾಸಕರ ಮೂಲಕ ಆರಿಸಿಬಂದವನು. ನಾವು ನಿಮಗೆ ನೀಡುವ ಅನುದಾನ ನೀವೇ ತೆರಿಗೆ ಕಟ್ಟಿದ್ದು, ಅದರ ಸದ್ವಿನಿಯೋಗ ಮಾತ್ರ ನಮ್ಮ ಕೆಲಸ. ಈಗಾಗಲೇ ನಾನು 3 ಲಕ್ಷ ರೂ ಅನುದಾನ ನೀಡಿದ್ದು ಮುಂದಕ್ಕೆ ಪೀಠೋಪಕರಣ ಅಥವಾ ಪ್ರಯೋಗಾಗಲಯಕ್ಕೆ ಇನ್ನೂ 1 ಲಕ್ಷ ರೂ. ಅನುದಾನ ನೀಡುತ್ತೇನೆ. ಒಟ್ಟಾರೆ ಇಲ್ಲಿ ಒಳ್ಳೆ ಕೆಲಸಕ್ಕೆ ನೀವೆಲ್ಲಾ ಒಗ್ಗಟ್ಟಾಗಿದ್ದೀರಿ. ಈ ಒಗ್ಗಟ್ಟು ಮುಂದಕ್ಕೂ ಇರಲಿ ಎಂದರು.2 ಮತ್ತು 3 ನೇ ಕೊಠಡಿಗಳನ್ನು ಕ್ರಮವಾಗಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತು ತಾ.ಪಂ ಅಧ್ಯಕ್ಷ ದಿವ್ಯಜ್ಯೋತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ ಸದಸ್ಯ ಲಕ್ಷ್ಮೀನಾರಾಯಣ, ಗ್ರಾ.ಪಂ ಅಧ್ಯಕ್ಷ ನವೀನ್ ಕಜೆ, ಸದಸ್ಯೆ ಲೀಲಾವತಿ, ಮಾಲತಿ, ನೆಲ್ಯಾಡಿ ಸಾರ್ಥಕ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಅಶ್ವಿನಿ ಆಸ್ಪತ್ರೆಯ ಡಾ. ಮುರಳೀಧರ್, ಕೊಕ್ಕಡ ವಲಯದ ಸಿಆರ್‌ಪಿ ವಿಲ್ಫ್ರೆಡ್ ಪಿಂಟೋ ಇವರು ಭಾಗಿಯಾಗಿದ್ದರು. ಶಿಕ್ಷಕಿ ಮಹೇಶ್ವರಿ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ಶ್ಯಾಮರಾಜ್ ಪ್ರಸ್ತಾವನೆಗೈದರು. ಶಿಕ್ಷಕಿ ಗೀತಾ ಪಿ.ಡಿ ಮತ್ತು ಮಹಾಬಲ ಭಟ್ ಕಾರ್ಯಕ್ರಮ ನಿರೂಪಿಸಿ, ಮೋಹನ್ ಕುಮಾರ್ ವಂದಿಸಿದರು. ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ವರದಿ ವಾಚಿಸಿದರು. ಅನಾರು ಶಾಲಾ ಸಭಾಂಗಣ ಸಮಿತಿ ಗೌರವಾಧ್ಯಕ್ಷ ದೇವಪಾಲ್ ಅಜ್ರಿ, ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ವಿದ್ಯಾರ್ಥಿ ನಾಯಕರಾದ ಹಂಸೀಫಾ, ಚಿದಾನಂದ, ಚಂದ್ರಹಾಸ ಉಪಸ್ಥಿತರಿದ್ದರು.

ಸನ್ಮಾನ: ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತರಾದ ಶಿಕ್ಷಕರಾದ ಗಂಗಯ್ಯ ಗೌಡ, ಕೆ ಡೀಕಯ್ಯ ಗೌಡ, ವನಜಾ ಕುಮಾರಿ, ಭೀಮ್ ಭಟ್, ಶಿವರಾಮ ತೋಡ್ತಿಲ್ಲಾಯ ಇವರಿಗೆ ಸನ್ಮಾನ ನಡೆಸಲಾಯಿತು. ಶಾಲಾ ಸಭಾಂಗಣ ಸಮಿತಿ ವತಿಯಿಂದ ಶ್ಯಾಮರಾಜ್ ಬೋಳೋಡಿಯವರಿಗೆ ಸನ್ಮಾನ ನಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.