ಇಳಂತಿಲ: ಮನೆ ನಿವೇಶನ ಮೀಸಲು ಜಾಗದಲ್ಲಿ ಅಕ್ರಮ ಶೆಡ್ ನಿರ್ಮಾಣ

ತೆರವು ಕಾರ್ಯಾಚರಣೆಗೆ ಮುಂದಾದ ಗ್ರಾಮ ಪಂಚಾಯಿತಿ, ಶಾಸಕರಿಂದ ತಡೆ
ಲೇಔಟ್ ಮಾಡಿದ ಬಳಿಕ ತೆರವು ಮಾಡುವಂತೆ ಸೂಚಿಸಿದ್ದೇನೆ-ಹರೀಶ್ ಪೂಂಜ
ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ-ಯೂಸುಫ್ ಪೆದಮಲೆ

ಉಪ್ಪಿನಂಗಡಿ: ಇಳಂತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರ್ಲಾಪು ಎಂಬಲ್ಲಿ ಗ್ರಾಮ ಪಂಚಾಯಿತಿಗೆ ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ಹಂಚಿಕೆ ಮಾಡುವ ಸಲುವಾಗಿ ಮಂಜೂರು ಆಗಿರುವ ಜಾಗದಲ್ಲಿ 4 ಮಂದಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿದ್ದು, ಗ್ರಾಮ ಪಂಚಾಯಿತಿ ಆಡಳಿತ ತೆಗೆದುಕೊಂಡಿರುವ ನಿರ್ಣಯದಂತೆ ತೆರವು ಕಾರ್‍ಯಾಚರಣೆಗೆ ಮುಂದಾಗಿ, ತೆರವು ಮಾಡುವುದಕ್ಕೆ ಶೆಡ್ ನಿರ್ಮಿಸಿರುವವರ ಆಕ್ಷೇಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸದಂತೆ ಸೂಚನೆ ನೀಡಿದ ಘಟನೆ ನಡೆಯಿತು.

ಇಳಂತಿಲ ಗ್ರಾಮದ ಸರ್ವೆ ನಂಬ್ರ 354/3ರಲ್ಲಿ 2.13 ಎಕ್ರೆ ಜಾಗವನ್ನು ಪುತ್ತೂರು ಉಪ ವಿಭಾಗಾಧಿಕಾರಿಯವರು ಮನೆ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಗ್ರಾಮ ಪಂಚಾಯಿತಿಗೆ ಮಂಜೂರು ಮಾಡಿದ್ದು, ಅದರಂತೆ ಗ್ರಾಮ ಪಂಚಾಯಿತಿ ನಿವೇಶನ ರಹಿತರ ಪಟ್ಟಿರುವ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಿದ್ದು, ಈ ಮಧ್ಯೆ ಈ ಜಾಗದಲ್ಲಿ ಇದೀಗ ಅನಿತಾ ತೋಮಸ್, ಶ್ರೀಮತಿ ಭಾರತಿ ಗಣೇಶ್, ಭಾಗ್ಯ ದೇವದಾಸ್, ಶ್ರೀಮತಿ ಧನ್ಯ ಪದ್ಮನಾಭ ಎಂಬವರು ಶೆಡ್ ನಿರ್ಮಿಸಿ ವಾಸ್ತವ್ಯ ಹೂಡಿದ್ದು, ಇದರ ಸಲುವಾಗಿ ಗ್ರಾಮ ಪಂಚಾಯಿತಿ ತೆರವು ಕಾರ್‍ಯಾಚರಣೆಗೆ ಮುಂದಾಗಿ ಬಳಿಕದ ಬೆಳವಣಿಗೆಯಲ್ಲಿ ಕಾರ್‍ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಿದರು.

ತೆರವಿಗೆ ಸೂಚನೆ:
ಗ್ರಾಮ ಪಂಚಾಯಿತಿ ಆಡಳಿತ ಅಕ್ರಮ ತೆರವು ಕಾರ್‍ಯಾಚರಣೆಗೆ ಉಪ್ಪಿನಂಗಡಿ ಪೊಲೀಸರ ನೆರವು ಪಡೆದು ಕೊಂಡು ಸ್ಥಳಕ್ಕೆ ತೆರಳಿದ್ದು, ಕಾರ್‍ಯಾಚರಣೆಗೆ ಮುಂದಾಯಿತು. ಆಗ ಸ್ಥಳದಲ್ಲಿ ಶೆಡ್ ನಿರ್ಮಿಸಿಕೊಂಡವರು ತೆರವು ಮಾಡುವುದಕ್ಕೆ ಆಕ್ಷೇಪ ಸೂಚಿಸಿ, ನಮಗೆ ಬೇರೆ ಮನೆ ಇಲ್ಲದ ಕಾರಣ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ ಸಾಲ್ಯಾನ್ “ಈ ಜಾಗ ಈಗಾಗಲೇ ನಿವೇಶನ ರಹಿತರ ಪಟ್ಟಿಯಲ್ಲಿ ಇರುವವರಿಗೆ ಹಂಚುವಂತದ್ದು, ಈ ಜಾಗವನ್ನು ನಿವೇಶನ ಮಾಡುವ ಸಲುವಾಗಿ ಸಮತಟ್ಟು ಮಾಡಬೇಕಾಗಿದೆ, ಆದ ಕಾರಣ ತಾತ್ಕಾಲಿಕವಾಗಿ ತಾವುಗಳು ಬೇರೆ ಕಡೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿ, ಅದಾಗ್ಯೂ ನಿಮ್ಮ ಅರ್ಜಿ ಇಲ್ಲದ ಕಾರಣ ಇದರಲ್ಲಿ ನಿಮಗೆ ಕೊಡುವುದಕ್ಕೆ ಬರುವುದಿಲ್ಲ, ಏನಿದ್ದರೂ ಆ ಬಳಿಕ ನಿಮಗೆ ಬೇರೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗುವುದು, ಈಗ ತಾವುಗಳು ಇಲ್ಲಿಂದ ತೆರವು ಆಗಬೇಕು” ಎಂದರು.
ಆಗ ಅಕ್ರಮವಾಗಿ ನೆಲೆಸಿರುವವರು ನಾವು ಇಲ್ಲಿಂದ ಹೋಗುವುದಿಲ್ಲ, ನಾವುಗಳು ಶಾಸಕರ ಗಮನಕ್ಕೆ ತಂದಿದ್ದೇವೆ, ಅವರು ಬಂದು ನಮಗೆ ಸೂಚಿಸಿದ ಬಳಿಕ ಅವರ  ತೀರ್ಮಾನದಂತೆ ಮಾಡುವುದಾಗಿ ಹೇಳಿದರು. ಇದಕ್ಕೆ ಸ್ಥಳೀಯರು ಸಮ್ಮತಿ ಸೂಚಿಸಿ ತೆರವು ಕಾರ್‍ಯಾಚರಣೆ ತಡೆ ನಿರ್ಮಿಸಿದರು. ಹೀಗಾಗಿ ತೆರವು ಕಾರ್‍ಯಾಚರಣೆ ಸ್ಥಗಿತಗೊಂಡಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗುಲಾಬಿ, ಸದಸ್ಯರಾದ ಮನೋಹರ್ ಕುಮಾರ್, ಯು.ಟಿ. ಫಯಾಝ್ ಅಹ್ಮದ್,  ಚಂದ್ರಾವತಿ, ಚಂದ್ರಕಲಾ ಭಟ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಯ್ಯ ಆಚಾರ್ಯ, ಕಾರ್ಯದರ್ಶಿ  ಶೀಲಾವತಿ, ಜಿಲ್ಲಾ ಪಂಚಾಯಿತಿ ಕಿರಿಯ ಸಹಾಯಕ ಇಂಜಿನಿಯರ್ ಗಫೂರ್ ಸಾಬ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಸತೀಶ್, ಶಶಿಧರ್, ಸುಂದರ ನಾಯ್ಕ, ತಿಮ್ಮಪ್ಪ, ಯಶೋಧರ, ಸ್ಥಳೀಯರಾದ ರವಿ, ರಮೇಶ್ ಅಂಬೊಟ್ಟು ಮೊದಲಾದವರು ಉಪಸ್ಥಿತರಿದ್ದರು.

ಲೇಔಟ್ ಮಾಡಿದ ಬಳಿಕ ತೆರವು ಮಾಡುವಂತೆ ಸೂಚಿಸಿದ್ದೇನೆ-ಹರೀಶ್ ಪೂಂಜ.
ಸ್ಥಳೀಯರ ಕೋರಿಕೆ ಮೇರೆಗೆ ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೆಡ್ ನಿರ್ಮಿಸಿರುವವರ ಜೊತೆ ಮಾತನಾಡಿ ಈ ಸಧ್ಯ ತೆರವು ಮಾಡುವುದು ಬೇಡ ಎಂದು ಸೂಚಿಸಿ, ಧೈರ್ಯ ತುಂಬಿ ಮಾತನಾಡಿದರು. ಅದಾಗ್ಯೂ ಪಿಡಿಓ ಜೊತೆ ತೆರವು ಕಾರ್‍ಯಾಚರಣೆ ಮಾಡದಂತೆ ತಾಕೀತು ಮಾಡಿದರು.

ಈ ಬಗ್ಗೆ ಪತ್ರಿಕೆ ಜೊತೆ ಮಾತನಾಡಿದ ಅವರು “ಗ್ರಾಮ ಪಂಚಾಯಿತಿ ಈ ಶೆಡ್ ಇರುವ ಜಾಗವನ್ನು ಬಿಟ್ಟು ಅದರ ಸುತ್ತ ಮೊದಲು ಸಮತಟ್ಟು ಮಾಡಿ ಲೇಔಟ್ ಮಾಡಬೇಕು, ಕೊನೆಯಲ್ಲಿ ಇದನ್ನು ತೆರವು ಮಾಡಬೇಕು, ಆಗ ಈ ಶೆಡ್ ನಿರ್ಮಿಸಿರುವವರನ್ನು ಎಬ್ಬಿಸಿ ಬೇರೆ ಕಡೆ ಅವರಿಗೆ ತಾತ್ಕಾಲಿಕ ನೆಲೆ ವ್ಯವಸ್ಥೆ ನಾನು ಮಾಡುವುದಾಗಿ ತಿಳಿಸಿದ್ದೇನೆ” ಎಂದು ಪ್ರತಿಕ್ರಿಯಿಸಿದರು.

ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ-ಅಧ್ಯಕ್ಷ
ಘಟನೆ ಬಗ್ಗೆ ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಜಿ ಯೂಸುಫ್ ಪೆದಮಲೆ ಪ್ರತಿಕ್ರಿಯಿಸಿ “ಈ ಜಾಗ ಗ್ರಾಮದಲ್ಲಿರುವ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಉಪ ವಿಭಾಗಾಧಿಕಾರಿಯವರು ಮಂಜೂರು ಮಾಡಿದ್ದು, ಅದನ್ನು ಸಮತಟ್ಟು ಮಾಡಲು ಅನುದಾನ ತೆಗೆದು ಇರಿಸಲಾಗಿದೆ. ಅದರಂತೆ ಗ್ರಾಮ ಪಂಚಾಯಿತಿ ನಿರ್ಣಯ ಅಂಗೀಕರಿಸಿದೆ. ಆದರೆ ಈ ಮಧ್ಯೆ ೪ ಮಂದಿ ಭಾರೀ ಮಳೆ, ನೆರೆ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಶೆಡ್ ನಿರ್ಮಿಸಿದರು.

ಆ ದಿನಗಳಲ್ಲಿ ವಿಪರೀತ ಮಳೆ, ನೆರೆ ಇದ್ದ ಕಾರಣ ಮಾನವೀಯ ನೆಲೆಯಲ್ಲಿ ತೆರವು ಮಾಡಲು ಮುಂದಾಗಿರಲಿಲ್ಲ, ಇದೀಗ ಅವರಿಗೆ ತಿಳುವಳಿಕೆ ನೀಡಲಾಗಿ ಗ್ರಾಮ ಪಂಚಾಯಿತಿ ತೆರವು ಮಾಡಲು ಮುಂದಾಗಿದ್ದು, ಆದರೆ ಶಾಸಕರು ತೆರವು ಮಾಡದಂತೆ ಸೂಚಿಸಿರುವುದರಿಂದಾಗಿ ತಾತ್ಕಾಲಿಕವಾಗಿ ತೆರವು ಕಾರ್‍ಯಾಚರಣೆಯನ್ನು ನಿಲ್ಲಿಸಿದ್ದೇವೆ. ಇಲ್ಲಿ ಈ ಬೆಳವಣಿಗೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ, ಆದ ಕಾರಣ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷ ಯೂಸುಫ್ ಪೆದಮಲೆ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.