ಹಿರಿಯ ಉಪವಿಭಾಗಾಧಿಕಾರಿಯಾಗಿ ಹೆಚ್.ಕೆ ಕೃಷ್ಣಮೂರ್ತಿ ನೇಮಕ

3ನೇ ಬಾರಿ ಪುತ್ತೂರಿನಲ್ಲಿ ಅಧಿಕಾರ ಸ್ವೀಕಾರ


ಬೆಳ್ತಂಗಡಿ: ಈ ಹಿಂದೆ ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ, ಜನಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ ಹೆಚ್.ಕೆ. ಕೃಷ್ಣ ಮೂರ್ತಿಯವರು ಪುತ್ತೂರು ವಿಭಾಗದ ಹಿರಿಯ ಉಪ ವಿಭಾಗಾಧಿಕಾರಿಯಾಗಿ ಅ.31 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ 3ನೇ ಬಾರಿಗೆ ಅವರು ಪುತ್ತೂರಿನಲ್ಲಿ ಅಧಿಕಾರ ವಹಿಸಿ ಕೊಂಡಂತಾಗಿದೆ.
ಮುಂಭಡ್ತಿ ಹೊಂದಿ ಹಿರಿಯ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಕೆ ಕೃಷ್ಣಮೂರ್ತಿ ಯವರಿಗೆ ಮಂಡ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖಾ ಉಪನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿತ್ತಾದರೂ, ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ರದ್ದು ಪಡಿಸಿ, ಪುತ್ತೂರು ವಿಭಾಗದ ಹಿರಿಯ ಉಪ ವಿಭಾಗಾಧಿಕಾರಿಯಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದ್ದು ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಸರಕಾರಿ ಕಛೇರಿಯನ್ನು ಮುಕ್ತವಾಗಿ ತೆರೆದಿಟ್ಟು ಸಮಾಜದ ತಳಮಟ್ಟದ ಜನರೊಂದಿಗೂ ಒಡನಾಟ ಹೊಂದಿರುವ ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಅಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಕೃಷ್ಣಮೂರ್ತಿಯವರು, ಪಾರದರ್ಶಕ ಆಡಳಿತದ ಮೂಲಕ ಸರಕಾರಿ ಯೋಜನೆಗಳು ಸರ್ವರಿಗೂ ಸಿಗುವಂತೆ ಮಾಡುವ ಹಾಗೂ ಇತ್ತೀಚೆಗೆ ನಡೆದ ನೆರೆಯ ಸಂದರ್ಭದಲ್ಲಿ ಅವಘಡ ಸಂಭವಿಸಿದ ಸ್ಥಳಗಳಲ್ಲಿ ಖುದ್ದಾಗಿ ಮೊಕ್ಕಾಂ ಹೂಡಿ ಗಮನ ಸೆಳೆದಿದ್ದರು.
ಅವರು ಸೇವಾ ಮುಂಭಡ್ತಿ ಹೊಂದಿ ಹಿರಿಯ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಡುವೆಯೇ ಸರಕಾರ ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ 2017ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಯಾಗಿರುವ ಮಹಾರಾಷ್ಟ್ರ ಪುಣೆ ಮೂಲದ ಸ್ನೇಹಲ್ ಸುಧಾಕರ್ ಲೊಖಾಂಡರವರನ್ನು ನೇಮಿಸಿತ್ತು. ಹೆಚ್.ಕೆ. ಕೃಷ್ಣಮೂರ್ತಿಯವರು ಲೊಖಾಂಡೆಯವರಿಗೆ ಅ.12 ರಂದು ಅಧಿಕಾರ ಹಸ್ತಾಂತರಿಸಿ ಊರಿಗೆ ತೆರಳಿದ್ದರು. ಜನಸ್ನೇಹಿ ಅಧಿಕಾರಿ ಯಾಗಿದ್ದ ಹೆಚ್.ಕೆ ಕೃಷ್ಣಮೂರ್ತಿ ಅವರನ್ನು ಪುತ್ತೂರಿನಲ್ಲಿಯೇ ಮತ್ತೆ ಮುಂದುವರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿತ್ತು. ಈ ಮಧ್ಯೆ ನೂತನ ಸಹಾಯಕ ಆಯುಕ್ತರಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದ ಲೊಖಾಂಡೆ ಅವರನ್ನು ಅಧಿಕಾರ ವಹಿಸಿಕೊಂಡ ಮೂರೇ ದಿನದೊಳಗೆ ಸರಕಾರ ಬಿಜಾಪುರ ಜಿಲ್ಲೆಯ ಇಂಡಿ ಉಪವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆ ಮಾಡಿತ್ತು. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಪುತ್ತೂರಿನಲ್ಲಿ ಉಪ ವಿಭಾಗಾಧಿಕಾರಿ ಹುದ್ದೆ ತೆರವಾಗಿತ್ತು. ಇದೀಗ ಹೆಚ್.ಕೆ ಕೃಷ್ಣ ಮೂರ್ತಿಯವರೇ ಮತ್ತೆ ಪುತ್ತೂರಿಗೆ ಆಗಮಿಸಿದ್ದಾರೆ. ಈಗಾಗಲೇ ಅವರು ಸೇವಾ ಮುಂಭಡ್ತಿ ಹೊಂದಿರುವುದರಿಂದ ಹುದ್ದೆಯನ್ನು ಹಿರಿಯ ಉಪವಿಭಾಗಾಧಿಕರಿ ಎಂದು ಸರಕಾರ ಉನ್ನತೀಕರಿಸಿದ್ದು, ಉನ್ನತೀಕರಿಸಿದ ಈ ಹುದ್ದೆಗೆ ವರ್ಗಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಅ.31 ರಂದು ಆದೇಶ ಹೊರಡಿಸಿದ್ದಾರೆ.
2006ರಲ್ಲಿ ಸೇವೆಗೆ ಸೇರ್ಪಡೆ ಗೊಂಡು ಬಳಿಕ ಶಿರಸಿ, ಹೊಸನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹೆಚ್.ಕೆ ಕೃಷ್ಣಮೂರ್ತಿಯವರು 2014 ರಲ್ಲಿ ಮೊದಲ ಬಾರಿ ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ, ಬಳಿಕ ಶಿವಮೊಗ್ಗಕ್ಕೆ ವರ್ಗಾವಣೆ ಗೊಂಡು, ಮತ್ತೆ ಪುತ್ತೂರಿಗೆ ವರ್ಗಾವಣೆಗೊಂಡು2ನೇ ಬಾರಿಗೆ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಈ ಅವಧಿಯಲ್ಲಿ ಅವರು ಸೇವಾ ಮುಂಭಡ್ತಿ ಹೊಂದಿದ್ದರು. ಇದೀಗ 3ನೇ ಬಾರಿ ಅವರು ಪುತ್ತೂರಿನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.