ಕೃಷಿ ಸಾಧಕ ನಿವೃತ್ತ ಪ್ರಾಚಾರ್ಯ ಸುಬ್ರಹ್ಮಣ್ಯ ಭಟ್ ಕೈಲಾರು

Advt_NewsUnder_1
Advt_NewsUnder_1
Advt_NewsUnder_1

ಇಂದಿನ ಆಧುನಿಕ ಕೃಷಿ ಪದ್ಧತಿಯಲ್ಲಿ ಅಧಿಕ ಇಳುವರಿಗಾಗಿ ರಸಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣು ಫಲವತ್ತತೆ ಕಳೆದುಕೊಂಡು, ಕೃಷಿ ಎಂದರೆ ನಷ್ಟ ಎನ್ನುತ್ತಿರುವ ಈ ಕಾಲಘಟ್ಟದಲ್ಲಿ ಕಾಂಪೋಸ್ಟ್, ಎರೆಹುಳಗೊಬ್ಬರ, ಪ್ರಕೃತಿಯಲ್ಲಿ ದೊರೆಯುವ ವಸ್ತುಗಳನ್ನು ಬಳಸಿ ಮಣ್ಣಿನ ಸ್ಥಿರತೆಯನ್ನು ಕಾಪಾಡಿ, ಕೃಷಿಯೂ ಲಾಭದಾಯಕ ಉದ್ಯಮ ಎಂದು ತೋರಿಸಿ ಕೊಟ್ಟವರು ನಿವೃತ್ತ ಪ್ರಾಚಾರ್ಯ ಕೈಲಾರು ಸುಬ್ರಹ್ಮಣ್ಯ ಭಟ್.

ಶ್ರಮ ಸಂಸ್ಕೃತಿಯಲ್ಲಿ ಕಾಯಕಕ್ಕೆ ಮೊದಲ ಆದ್ಯತೆ ನೀಡಿದ ಇವರು ತಾನು ತೊಡಗಿಸಿಕೊಂಡ ಉಪನ್ಯಾಸಕ ವೃತ್ತಿ ಬಳಿಕ ಪ್ರಾಚಾರ್ಯರ ಕರ್ತವ್ಯವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿ, ಉತ್ತಮ ಸಾಧನೆಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ನಾಯಕತ್ವ ಗುಣದಿಂದಾಗಿ ಕರ್ನಾಟಕ ಸರಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ ಮಂಗಳೂರು ವಲಯಾಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆಯ 30 ವರ್ಷಗಳ ಸೇವೆಯ ಬಳಿಕ 2014 ನವಂಬರ್‌ನಲ್ಲಿ ನಿವೃತ್ತರಾದರು.

ಕೃಷಿ ಕ್ಷೇತ್ರದತ್ತ ಆಕರ್ಷಣೆ:
ಉಪ್ಪಿನಂಗಡಿ ಸಮೀಪದ ಕೈಲಾರಿನ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಸುಬ್ರಹ್ಮಣ್ಯ ಭಟ್ ಅವರು ನಿವೃತ್ತಿಯ ಬಳಿಕ ಕೃಷಿ ಕ್ಷೇತ್ರದತ್ತ ಆಕರ್ಷಿತರಾದರು. ನಿವೃತ್ತಿಯ ಬಳಿಕ ಕೃಷಿಯನ್ನು ಪ್ರವೃತ್ತಿಯಾಗಿ ಮಾಡಿಕೊಂಡು, ಕೃಷಿಯಲ್ಲಿ ವಿವಿಧ ಪ್ರಯೋಗಗಳ ಮೂಲಕ ಪ್ರಗತಿಪರ ಕೃಷಿಕರಾಗಿ, ಕಳೆದ 5 ವರ್ಷಗಳಲ್ಲಿ ತನ್ನ 8 ಎಕ್ರೆ ಜಾಗದಲ್ಲಿ ಮಾಡಿರುವ ಕೃಷಿ, ಈಗ ಆಸಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಶೇ 70 ಸಾವಯವ ಗೊಬ್ಬರ ಹಾಗೂ ಶೇ.30 ರಸಗೊಬ್ಬರ ಜೊತೆಗೆ ಸೂಕ್ಷ್ಮ ಪೋಷಕಾಂಶ ವಾಣಿಜ್ಯ ಬೆಳೆಗಳಿಗೆ ಬಳಸುತ್ತಿದ್ದು, ತೋಟದ ಮಣ್ಣು ಪರೀಕ್ಷೆ ಮಾಡಿಯೇ ಗೊಬ್ಬರದ ನಿರ್ವಹಣೆ ಮಾಡುತ್ತಿದ್ದೇನೆ ಎಂದು ತಿಳಿಸುತ್ತಾರೆ.


ಅಡಿಕೆ ತೋಟಕ್ಕೆ ಮುಖ್ಯವಾಗಿ ಎರೆಹುಳ ಗೊಬ್ಬರ, ವೇಸ್ಟ್ ಕಂಪೋಸರ್, ಸುಡುಮಣ್ಣು, ಕಾಂಪೋಸ್ಟ್ ಗೊಬ್ಬರವನ್ನು ಬಳಸುತ್ತಾರೆ. ತೋಟಕ್ಕೆ ಕಳೆನಾಶಕವನ್ನು ಬಳಸದೆ, ಕಳೆಕೊಚ್ಚುವ ಯಂತ್ರದ ಮೂಲಕವೇ ಕಳೆ ತೆಗೆಯುವುದರಿಂದ ಹಸಿರುಗೊಬ್ಬರದ ಅವಶ್ಯಕತೆಯೇ ಬರುವುದಿಲ್ಲ. ಅಡಿಕೆ ಸೋಗೆ, ಹಾಳೆ, ತೆಂಗಿನ ಸೋಗೆ ಎಲ್ಲವೂ ಇಲ್ಲಿ ಮರದ ಬುಡಕ್ಕೆ ಹಾಕುವುದರಿಂದ ಮಣ್ಣಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದಲ್ಲದೆ ಎರೆಹುಳುಗಳಿಗೆ ಸಹಕಾರಿ ಎನ್ನುತ್ತಾರೆ. ಎರೆಗೊಬ್ಬರವನ್ನು ತಾನು ಉತ್ಪಾದಿಸುವುದಲ್ಲದೆ ಹೊರಗಿನಿಂದಲೂ ಖರೀದಿಸುತ್ತಾರೆ. ಕೃಷಿ ಅಭಿವೃದ್ಧಿಯ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಹಾಗೂ ಕೃಷಿ ವಿಜ್ಞಾನಿಗಳ ಸಹಕಾರವನ್ನು ನೆನಪಿಸಿಕೊಳ್ಳುತ್ತಾರೆ.


ಹಣ್ಣಿನ ಬೆಳೆಗಳು :
ಹಲವು ಬಗೆಯ ಮಾವು, ಸಪೋಟ, ರಂಬೂಟನ್, ಮಲಯನ್ ವಾಟರ್ ಆಪಲ್, ಅನಾನಾಸು, ಪಪ್ಪಾಯ, ಪೇರಳೆ, ಬಾಳೆ ಇವುಗಳಲ್ಲದೆ ಎಗ್‌ಫ್ರೂಟ್, ಬಟರ್‌ಫ್ರೂಟ್, ಮುಸುಂಬಿ, ಕಿತ್ತಳೆ, ನಿಂಬೆ, ರಾಮಫಲ, ಸೀತಾಫಲ ಇತ್ಯಾದಿ ಹತ್ತಾರು ಹಣ್ಣಿನ ಮರ, ಗಿಡಗಳು ತೋಟದಲ್ಲಿ ಕಂಗೊಳಿಸುತ್ತಿವೆ. ಬಹಳಷ್ಟು ಅಪರೂಪವಾದ ಬಿಳಿ ತುಳುವ ಹಲಸಿನ ಹಣ್ಣಿನ ಮರ ಇಲ್ಲಿರುವುದು ವಿಶೇಷ. ಸಿಹಿಯಾಗಿರುವ ಈ ಹಣ್ಣು ತಿನ್ನಲು ಹಾಗೂ ತಿಂಡಿಗೆ ಅತ್ಯುತ್ತಮವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನೆಟ್ಟಿರಬಹುದಾದ ಮರವಾಗಿದ್ದರೂ, ಮೂರು ವರ್ಷಗಳ ಮೊದಲು ಮಣ್ಣು ಹಾಕಿ, ನೀರು ಹಾಕಲು ಪ್ರಾರಂಭಿಸಿದ ನಂತರ ಈ ಮರ ಫಸಲು ಕೊಡುವುದಕ್ಕೆ ಪ್ರಾರಂಭಿಸಿದೆ.


ತರಕಾರಿ ಬೆಳೆ :
ಸುಬ್ರಹ್ಮಣ್ಯ ಭಟ್ ತರಕಾರಿಗಳಲ್ಲಿ ಸ್ವಾವಲಂಬಿ, ತೊಂಡೆ, ಬೆಂಡೆ, ಬದನೆ, ಮುಸುಕಿನ ಬದನೆ, ಸೌತೆ, ಹಾಗಲ, ಚೀನಿಕಾಯಿ, ಕುಂಬಳಕಾಯಿ ಇತ್ಯಾದಿ ಹತ್ತು ಹಲವು ತರಕಾರಿಗಳಲ್ಲದೆ, ಚಳಿಗಾಲದಲ್ಲಿ ಹೂಕೋಸು, ಎಲೆಕೋಸು, ಕ್ಯಾಪ್ಸಿಕಂಗಳನ್ನು ಬೆಳೆಸುತ್ತಾರೆ. ಹಣ್ಣು ಮತ್ತು ತರಕಾರಿಗಳು ಸಂಪೂರ್ಣವಾಗಿ ಸಾವಯವವಾಗಿದ್ದು, ಕ್ರಿಮಿನಾಶಕ ಹಾಗೂ ರಾಸಾಯನಿಕ ಮುಕ್ತವಾಗಿದೆ.


ಜೇನು ಕೃಷಿ:
ಭಾಗಮಂಡಲದಲ್ಲಿ ಜೇನು ಕೃಷಿಯಲ್ಲಿ 2 ತಿಂಗಳ ತರಬೇತಿಯನ್ನು ಪಡೆದಿರುವ ಇವರು ಹಂಗಾಮಿನಲ್ಲಿ ತಮ್ಮ ತೋಟದಲ್ಲಿ 10 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಜೇನು ಕುಟುಂಬದಿಂದ ಜೇನು ಸಿಗುವುದಲ್ಲದೆ ಹಣ್ಣಿನ ಗಿಡಗಳು ಮತ್ತು ಅಡಿಕೆ, ತೆಂಗಿನ ಮರಗಳಲ್ಲಿ ಪರಾಗ ಸ್ಪರ್ಶಕ್ಕೆ ಬಹಳ ಉಪಯುಕ್ತ, ಜೇನು ಪೆಟ್ಟಿಗೆಯಿದ್ದರೆ ಎಳೆ ಅಡಿಕೆ ಬೀಳುವುದಿಲ್ಲ ಎಂದು ತನ್ನ ಅನುಭವವನ್ನು ತಿಳಿಸುತ್ತಾರೆ. ಜೇನು ಗೂಡು ಇಟ್ಟವರು ಯಾವುದೇ ಕೀಟನಾಶಕ ಬಳಸಬಾರದು ಎಂದು ಸಲಹೆ ನೀಡಿದ್ದಾರೆ.


ಎರೆಹುಳ ಗೊಬ್ಬರ ಘಟಕ
ಇವರು ವೈಜ್ಞಾನಿಕ ರೀತಿಯಲ್ಲಿ ಎರೆಹುಳ ಗೊಬ್ಬರ ಘಟಕವನ್ನು ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ಎರೆಹುಳ ತಜ್ಞ ಡಾ| ಹರೀಶ್ ಜೋಷಿ ಇವರ ಮಾರ್ಗದರ್ಶನದಲ್ಲಿ ನಿರ್ಮಿಸಿದ್ದಾರೆ. ತೋಟದಲ್ಲಿರುವ ತರಗಲೆ, ಅಡಿಕೆ ಸೋಗೆ, ಬಾಳೆದಿಂಡು, ಅಡಿಗೆ ಕೋಣೆಯ ತರಕಾರಿ ತ್ಯಾಜ್ಯ ಮೊದಲಾದ ಕಚ್ಚಾ ವಸ್ತುಗಳೇ ಇಲ್ಲಿ ಬಳಕೆ. ಉತೃಷ್ಠವಾದ ಈ ಗೊಬ್ಬರದಲ್ಲಿ ೧೩ ಬಗೆಯ ಪೋಷಕಾಂಶಗಳು ಇದೆ.


ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್
ಅಡಿಕೆ ಸಿಪ್ಪೆಯನ್ನು ತೆಂಗು, ಅಡಿಕೆ ಮರದ ಬುಡಗಳಿಗೆ ಹಾಕುವ ಬದಲು ಇಲ್ಲಿ ಕಾಂಪೊಸ್ಟ್ ತಯಾರಿಸಲಾಗುತ್ತಿದೆ. ಅಡಿಕೆ ಸಿಪ್ಪೆಗೆ ವೆಸ್ಟ್ ಡಿಕಂಪೋಸರ್ ಮತ್ತು ಸ್ವಲ್ಪ ಸೆಗಣಿ ಮಿಶ್ರ ಮಾಡಿ ಕಾಂಪೋಸ್ಟ್ ತಯಾರಿಸುವ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಮಾರ್ಚ್ ತಿಂಗಳ ಬಳಿಕ ತೋಟಕ್ಕೆ ಇದನ್ನು ಬಳಸುವುದರಿಂದ ಗೊಬ್ಬರವಾಗಿ ಅಲ್ಲದೆ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ ಅಡಿಕೆ ಹಂಗಾಮು ಮುಗಿದಿರುವುದರಿಂದ ಅಡಿಕೆ ಮತ್ತು ಸಿಪ್ಪೆಯ ಗೊಂದಲವು ಇರುವುದಿಲ್ಲ ಎನ್ನುತ್ತಾರೆ.

ಇಂಗುಗುಂಡಿ ನಿರ್ಮಾಣ :
ತನ್ನ ತೋಟದ ಕೃಷಿಗಾಗಿ ಎರಡು ಕೊಳವೆಬಾವಿ ಕೊರೆಸಿದ್ದರು. ಒಂದು ಕೊಳವೆ ಬಾವಿಯಲ್ಲಿ ಬೇಸಿಗೆಯಲ್ಲಿ ನೀರು ಕ್ರಮೇಣ ಕಡಿಮೆಯಾಗಿ 10 ಸ್ಪ್ರಿಂಕ್ಲರ್ ಬದಲು 4 ಸ್ಪ್ರಿಂಕ್ಲರ್ ರನ್ ಆಗುವುದು ಕಷ್ಟವಾಯಿತು. ಒಮ್ಮೆ ಹೊಸ ಕೊಳವೆ ಬಾವಿ ಮಾಡುವ ಆಲೋಚನೆ ಬಂತು. ಆಗ ನೆನಪಾದುದು ಜಲತಜ್ಞ ಶ್ರೀ ಪಡ್ರೆ ಅವರ ನೀರಿಂಗಿಸುವ ವಿಚಾರ. ಇದರಿಂದ ಪ್ರೇರಣೆ ಹೊಂದಿ ಕೊಳವೆ ಬಾವಿ ಬಳಿ 22X15X2.5 ಅಳತೆಯ ಇಂಗು ಗುಂಡಿ ನಿರ್ಮಿಸಿದರು. ಅದಕ್ಕೆ ಮಳೆಗಾಲದಲ್ಲಿ ಎತ್ತರದಲ್ಲಿರುವ ತನ್ನ ಸಹೋದರನ ಕೆರೆಯಿಂದ ಮತ್ತು ಅಲ್ಲೇ ಸಮೀಪದಲ್ಲಿ ಮಳೆಗಾಲದಲ್ಲಿ ಮಾತ್ರ ಬರುವ ಅಡ್ಡ ಬೋರಿನ ನೀರನ್ನು ಪೈಪಿನ ಮೂಲಕ ಹಾಯಿಸಿದರು. ಇದರಿಂದ ನೀರು ಇಂಗಿ ಅಂತರ್ಜಲ ವೃದ್ಧಿಯಾಗಿ ಜೂನ್ ತನಕವೂ 10 ಸ್ಪ್ರಿಂಕ್ಲರ್‌ಗೂ ಈಗ ನೀರು ದೊರೆಯುತ್ತಿದೆ. ಜೊತೆಗೆ ಮಳೆಗಾಲದಲ್ಲಿ ಇನ್ನೊಂದು ಕೊಳವೆ ಬಾವಿಯ ಸುತ್ತಲೂ ಸುಮಾರು 40X80 ಅಡಿಯಲ್ಲಿ 3ರಿಂದ 4 ಇಂಚು ನೀರು ನಿಲ್ಲಿಸಿ ಭವಿಷ್ಯದ ನೀರಿನ ಅಭಾವವನ್ನು ನಿವಾರಿಸುವ ಯೋಜನೆ ಮಾಡುತ್ತಿದ್ದಾರೆ.
ಕೃಷಿ ಕೆಲಸಕ್ಕೆ ಕೂಲಿಗಳ ಸಮಸ್ಯೆ ಇರುವುದರಿಂದ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಇವರು ಕೃಷಿ ಯಂತ್ರೋಪಕರಣಗಳನ್ನು ಗರಿಷ್ಠ ಉಪಯೋಗಿಸುತ್ತಿದ್ದಾರೆ. ಮೋಟಾರು ಚಾಲಿತ ಕೈಗಾಡಿ, ಮೋಟಾರು ಚಾಲಿತ ಸ್ಪ್ರೇಯರ್, ಕಳೆಕೊಚ್ಚುವ ಯಂತ್ರಗಳು, ಚೈನ್‌ಸೋ, ಅಡಿಕೆ ಕೋಕಾ ಬೇರ್ಪಡಿಸುವ ಮೇಜು ಇತ್ಯಾದಿ ಮನೆಯಲ್ಲಿದೆ. ತನ್ನ ಜಮೀನಲ್ಲಿ ಪೂರ್ತಿ ರಸ್ತೆ ನಿರ್ಮಿಸಿ, ಅಡಿಕೆ, ಗೊಬ್ಬರ ಸಾಗಾಟಕ್ಕೆ ಓಮ್ನಿ ಕಾರನ್ನು ಬಳಸುತ್ತಿದ್ದಾರೆ.
ಮಳೆಗಾಲದಲ್ಲಿ ಅಡಿಕೆ ಒಣಗಿಸಲು ಕಡಿಮೆ ಖರ್ಚಿನಲ್ಲಿ ಸೋಲಾರ್ ಮನೆಯನ್ನು ನಿರ್ಮಿಸಿದ್ದಾರೆ. ಅಡಿಕೆಯನ್ನು ಅಂಗಳದಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಹಾಕಿ ಒಣಗಿಸಿದರೆ ಅಂಗಳದ ರಿಪೇರಿಯ ವೆಚ್ಚವೂ ಕಡಿಮೆ ಹಾಗೂ ಒಣಗಿದ ಅಡಿಕೆಯ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ತನ್ನ ಅನುಭವವನ್ನು ಹೇಳುವ, ಸುಬ್ರಹ್ಮಣ್ಯ ಭಟ್ ಅವರು ಪ್ರತಿ ಕೃಷಿಗೂ ಲೆಕ್ಕ ನಿರ್ವಹಣೆ ಮಾಡುತ್ತಿದ್ದಾರೆ. ಹವಾಮಾನ ವೈಪರೀತ್ಯದ ಸಮಸ್ಯೆ ಇಲ್ಲದಿದ್ದರೆ ತನ್ನ ತೋಟದ ಒಂದು ಅಡಿಕೆ ಮಾರುಕಟ್ಟೆ ತಲುಪುವಾಗ 80 ಪೈಸೆ ಖರ್ಚು ಬರುತ್ತದೆ ಎಂಬ ನಿಖರ ಲೆಕ್ಕ ಕೊಡುತ್ತಾರೆ. ಇವರ ಕೃಷಿ ತೋಟಕ್ಕೆ ಕೃಷಿ ವಿಜ್ಞಾನಿಗಳು, ಕೃಷಿಕರು, ಸ್ವಯಂ ಸೇವಾ ಸಂಸ್ಥೆಯವರು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಇವರು ಪತ್ನಿ ರಾಜೇಶ್ವರಿ, ಪುತ್ರ ಭಗವಾನ್, ಸೊಸೆ ಸೌರಭ, ಪುತ್ರಿ ಸಿಂಧೂ, ಅಳಿಯ ಶ್ರೀವತ್ಸ ಪುಟ್ಟ ಸಂಸಾರವನ್ನು ಹೊಂದಿದ್ದಾರೆ.
ಸುಬ್ರಹ್ಮಣ್ಯ ಭಟ್ ಕೈಲಾರ್ –9448501448 

  ಬಿ.ಎಸ್ ಕುಲಾಲ್      

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.