ಸವಣಾಲಿನ ಹಿರಿಯಾಜೆ ನಿವಾಸಿ ಸುರೇಶ್‌ರ ಬದುಕು ಕಟ್ಟುವವರ್‍ಯಾರು?!

       

ಸವಣಾಲು: ಅದೊಂದು ಇಂದೋ ನಾಳೆಯೋ ಕುಸಿಯುವ ಹಂತದಲ್ಲಿರುವ ಗುಡಿಸಲು. ಕೇವಲ ಒಂದೇ ಒಂದು ಕೋಣೆ. ಕೋಣೆ ತುಂಬಾ ಕೆಸರುಮಯ. ಆ ಗುಡಿಸಲಿಗೆ ತೆಂಗಿನ ಗರಿಯ ಹೊದಿಕೆ. ಆ ಗುಡಿಸಲಿನಲ್ಲಿ ಸನ್ಯಾಸಿಯಂತೆ ಗಡ್ಡ ಕೂದಲು ಬಿಟ್ಟ ವ್ಯಕ್ತಿಯೊಬ್ಬರು ಅತ್ಯಂತ ನರಕಯಾತನೆಯಿಂದ ವಾಸಿಸುತ್ತಿರುವ ಘಟನೆ…
ಇದು ಯಾವುದೇ ಸಿನಿಮಾದ ಕಥೆಯಲ್ಲ. ಬದಲಾಗಿ ಸವಣಾಲು ಗ್ರಾಮದ ಹಿರಿಯಾಜೆ ಲಕ್ಷ್ಮಿಬೆಟ್ಟು ಎಂಬಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುರೇಶ ಎಂಬವರ ಬದುಕಿನ ನೈಜ ವರದಿ. ಇವರಿಗೆ ಸರಿಸುಮಾರು 40 ವರ್ಷ ಆಗಿರಬಹುದು. ಮದುವೆಯಾಗಿ ಹೆಂಡತಿ, 3  ಮಕ್ಕಳೊಂದಿಗೆ ನೆಮ್ಮದಿಯಾಗಿದ್ದರು. ಯಾವುದೋ ಕಾರಣದಿಂದಾಗಿ ಸುರೇಶ್‌ರವರು ಮಾನಸಿಕ ಖಿನ್ನತೆಗೊಳಗಾದಾಗ ಪತ್ನಿ ಮಕ್ಕಳು ತವರು ಮನೆ ಸೇರಿದರು.
ಕಳೆದ ಏಳೆಂಟು ವರ್ಷಗಳಿಂದ ಸುರೇಶ್ ಅವರದು ಒಬ್ಬಂಟಿ ಬದುಕು. ಅದು ಈ ಮುರುಕಲು ಗುಡಿಸಲಿನಲ್ಲಿ. ಆ ಗುಡಿಸಲಿನ ಸುತ್ತಮುತ್ತಲೂ ಕೆಸು ಸೇರಿದಂತೆ ಎತ್ತರವಾಗಿ ಬೆಳೆದು ನಿಂತಿರುವ ಗಿಡಗಂಟಿಗಳು. ಯಾವುದೇ ಸರಿಸೃಪಗಳು ಮನೆಯೊಳಗೆ ಸೇರಿದರೂ ಗೊತ್ತಾಗದ ರೀತಿಯ ಜೀವನ ಈ ಸುರೇಶ್ ಅವರದು.
ಇವರ ಈ ಗುಡಿಸಲು ಸರ್ಕಾರಿ ಜಮೀನಿನಲ್ಲಿದ್ದು, ಇವರ ಬಳಿ ದಾಖಲೆ ಪತ್ರಗಳಿಲ್ಲ. ಪಡಿತರ ಚೀಟಿಯಾಗಲೀ, ಆಧಾರ್ ಕಾರ್ಡ್ ಆಗಲೀ, ಚುನಾವಣಾ ಗುರುತು ಚೀಟಿಯಾಗಲೀ ಯಾವುದೂ ಇಲ್ಲದ ಬದುಕು ಇವರದ್ದು. ಮಾನಸಿಕ ಖಿನ್ನತೆಗೆ ಸೂಕ್ತ ಚಿಕಿತ್ಸೆ ಮಾಡಲು ಹಣಕಾಸಿನ ಸಮಸ್ಯೆಯೂ ಇದೆ.
ಸುರೇಶ್ ಅವರ ಗುಡಿಸಲಿಗೆ ಅ. 23 ರಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೇಲಂತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ನಳಿನಿ, ಸಾಮಾಜಿಕ ಕಾರ್ಯಕರ್ತ ರಾಜೇಶ್ ಭಟ್ ಸವಣಾಲು, ನ್ಯಾಯವಾದಿ ಕಿರಣ್ ಕುಮಾರ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಜಿಲ್ಲಾ ಸಹ ಸಂಚಾಲಕ ಶೇಖರ್ ಎಲ್, ಡಿಎಸ್‌ಎಸ್ ಗ್ರಾಮ ಸಮಿತಿ ಸಂಚಾಲಕ ಚಂದ್ರಶೇಖರ ನೇರಮೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.