ಶಿಶಿಲ: ಶಿಶಿಲ ಗ್ರಾಮದ ಒಟ್ಲ ಎಂಬಲ್ಲಿನ ರಸ್ತೆ ವಿವಾದವೊಂದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಇಡೀ ಪ್ರಕರಣಕ್ಕೆ ಮೂಲ ಕಾರಣ ಎಂಬ ನೆಲೆಯಲ್ಲಿ ಶಿಶಿಲ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಜಾರಾಮ್ ಅವರನ್ನು ಅ.24 ರಂದು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಅವರು ಪುತ್ತೂರಿನ ಬುಳ್ಳೇರಿಕಟ್ಟೆ ಸಂಬಂಧಿಕರ ಮನೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅ.18 ರಂದು ನಡೆದ ಹಲ್ಲೆ ಘಟನೆಯಲ್ಲಿ ಗಾಯಗೊಂಡಿದ್ದ ಚಂದ್ರಾವತಿ ಮತ್ತು ಲಲಿತಾ ಅವರು ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನಲ್ಲಿ ರಾಜಾರಾಮ್ ಸಹಿತ ಇತರರಾದ ನಳಿನಾಕ್ಷಿ, ಅಕ್ಷಯ ಕುಮಾರ್, ಜಲಜಾ, ವಿಶ್ವನಾಥ, ಲಿಮೇಶ್ಚಂದ್ರ, ಪೂಜಾಶ್ರೀ, ರೇವತಿ ಮತ್ತು ಸುಬ್ಬಯ್ಯ ಎಂಬವರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಕರಾರು ಇರುವ ಜಾಗದಲ್ಲಿ ಕೈಯ್ಯಲ್ಲಿ ಕತ್ತಿ ಹಿಡಿದು ಬೇಲಿ ಹಾಕುತ್ತಿದ್ದಾಗ ಅಲ್ಲಿಗೆ ಬಂದ ಚಂದ್ರಾವತಿ ಅವರು, ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ಜಾಗದಲ್ಲಿ ಯಾಕೆ ಬೇಲಿ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಆರೋಪಿಗಳು ಏಕಾಏಕಿ ಅವರಿಗೆ ಕತ್ತಿಯಿಂದ ಹಲ್ಲೆ ನಡೆಸಲು ಮುಂದಾದಾಗ ಅವರು ಜೋರಾಗಿ ಬೊಬ್ಬೆ ಹಾಕಿ ಅಲ್ಲಿಂದ ತಪ್ಪಿಸಿಕೊಂಡಿದ್ದು, ಇವರ ಬೊಬ್ಬೆ ಕೇಳಿ ಲಲಿತಾ ಅವರು ಅಲ್ಲಿಗೆ ಬಂದಾಗ ರಾಜಾರಾಮ ಮತ್ತು ನಳಿನಾಕ್ಷಿ ಅವರು ಲಲಿತಾ ಮತ್ತು ಚಂದ್ರಾವತಿ ಇಬ್ಬರಿಗೂ ಕಲ್ಲಿನಿಂದ ಹೊಡೆದು ನೋವುಂಟು ಮಾಡಿದ್ದಲ್ಲದೆ ರಾಜಾರಾಮ ಅವರು ಚಂದ್ರಾವತಿ ಅವರ ಕೈಹಿಡಿದೆಳೆದು ಒಂದು ಪವನಿನ ಚಿನ್ನದ ಸರವನ್ನು ಕಿತ್ತುಕೊಂಡದ್ದಲ್ಲದೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿತ್ತು. ಪ್ರಕರಣದಲ್ಲಿ ರಾಜಾರಾಮ್ ಅವರಿಗೆ ಅ.30 ರಂದು ಜಾಮೀನು ಆಗಿದೆಯೆನ್ನಲಾಗಿದೆ.