ಕಲ್ಲೇರಿ ಹಲ್ಲೆ ಪ್ರಕರಣ; ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು

Advt_NewsUnder_1
Advt_NewsUnder_1
Advt_NewsUnder_1

ಕಲ್ಲೇರಿ: ವಾಹನಕ್ಕೆ ಸೈಡ್ ಕೊಡುವ ಕ್ಷುಲ್ಲಕ ವಿಚಾರದ ಬಗ್ಗೆ ನಡೆದ ಚರ್ಚೆ ಬಳಿಕ ಹಲ್ಲೆಯ ರೂಪ ಪಡೆದು ಇದೀಗ ಠಾಣಾ ಮೆಟ್ಟಿಲೇರಿದ ಪ್ರಸಂಗ ಕಲ್ಲೇರಿಯಲ್ಲಿ ನಡೆದಿದೆ. ಸದ್ರಿ ಪ್ರಕರಣದಲ್ಲಿ ಗಾಯಗೊಂಡವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಗಿದ್ದಾರೆ. ಬಳಿಕ ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶಾಸಕರು ಮತ್ತು ಬಿಲ್ಲವ ಸಮಾಜದ ವಿಚಾರ ಬೆರೆಸಿ ಭಾರೀ ಪರ ವಿರೋಧ ಅಭಿಪ್ರಾಯಗಳಿಗೆ ವೇದಿಕೆ ನಿರ್ಮಿಸಿದ ವಿದ್ಯಮಾನವೂ ನಡೆದಿದೆ.
ಕಲ್ಲೇರಿಯ ಉಮೇಶ್ ಸಾಲ್ಯಾನ್ ಅವರ ಪತ್ನಿ ಜ್ಯೋತಿ ಹಾಗೂ ಅವರ ಬಾವ ಪ್ರಶಾಂತ್ ಮೇಲೆ ಮೂವರ ತಂಡ ಸೆ. ೨೭ ರಂದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಪ್ಪೆಟ್ಟಿಯ ಅಶ್ವಥ್, ಹರಿಪ್ರಸಾದ್, ಅವಿನ್ ಅವರು ಹಲ್ಲೆ ನಡೆಸಿದವರು ಎಂದು ಉಮೇಶ್ ಸಾಲ್ಯಾನ್ ಅವರು ನೀಡಿದ ಪೊಲೀಸ್ ದೂರಿನಲ್ಲಿ ಆಪಾದಿಸಿದ್ದಾರೆ.
ಘಟನೆ ಬಗ್ಗೆ ಉಮೇಶ್ ಸಾಲ್ಯಾನ್ ಅವರು ದೂರಿನಲ್ಲಿ ವಿವರಿಸಿದ್ದು, ತಾನು ಕಲ್ಲೇರಿ ಪೇಟೆಯಲ್ಲಿ ತನ್ನ ಅಂಗಡಿ ಕಡೆಗೆ ಬೈಕ್ ತಿರುಗಿಸುವ ವೇಳೆ ದನವೊಂದು ಅಡ್ಡಬಂದಿತ್ತು. ಆಗ ಹಿಂಬದಿಯಲ್ಲಿ ಕಾರಿನಲ್ಲಿ ಬಂದಿದ್ದ ಕುಪ್ಪೆಟ್ಟಿಯ ಅಶ್ವಥ್ ನನಗೆ ಬೈದು ಹೋಗಿದ್ದರು. ಆದರೆ ಸಂಜೆ ಮತ್ತೆ ಅಶ್ವಥ್ ಅವರು ಅವರ ಸಂಗಡಿಗರೊಂದಿಗೆ ನನ್ನ ಅಂಗಡಿ ಬಳಿ ಬಂದು ನನ್ನ ಶಾಮಿಯಾನ ಅಂಗಡಿ ಬಳಿ ಬೊಬ್ಬೆ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬೊಬ್ಬೆ ಕೇಳಿ ಹೊರಬಂದ ನನ್ನ ಪತ್ನಿ ಜ್ಯೋತಿ ಅವರಿಗೂ ಕಬ್ಬಿಣದ ರೋಡ್‌ನಿಂದ ಹೊಡೆದು ಬಾವ ಪ್ರಶಾಂತ್ ಅವರಿಗೂ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
“ಶಾಸಕ ಪೂಂಜ ಬೆಂಬಗಲಿಗರಿಂದ ಕೊಲೆಯತ್ನ” ಎಂದು ಹರಿದಾಡಿದ ಮೆಸೇಜ್:
ಘಟನೆ ಬಳಿಕ ಈ ವಿಚಾರವನ್ನು ಮುಂದಿಟ್ಟು ಕೆಲವರು ಶಾಸಕ ಹರೀಶ್ ಪೂಂಜ ಬೆಂಬಲಿಗರು ಕೊಲೆಯತ್ನ ನಡೆಸಿದ್ದಾರೆ ಎಂದು ಟೈಟಲ್ ಹಾಕಿ ವಾಟ್ಸ್ ಆಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ ಭಾರೀ ಸದ್ದೆಬ್ಬಿಸಿದ್ದರು.
ಸೋಷಿಯಲ್ ಮೀಡಿಯಾ ನ್ಯೂಸ್‌ಗೆ ಪತ್ಯುತ್ತರ ನೀಡಿದ ಶಾಸಕರ ಅಭಿಮಾನಿಗಳು:
ಬೆಳ್ತಂಗಡಿ ತಾಲೂಕಿನಲ್ಲಿ ಎರಡು ತಂಡಗಳ ಮಧ್ಯೆ ನಡೆದ ಜಗಳಕ್ಕೆ ತಾಲೂಕಿನ ಶಾಸಕರ ಹೆಸರನ್ನು ಜೋಡಿಸಿ ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ಕೆಲವರು ನಡೆಸಿದ್ದಾರೆ. ವಾಹನಕ್ಕೆ ಸೈಡು ಕೊಡುವ ವಿಚಾರದಲ್ಲಿ ಸ್ಥಳೀಯ ಯುವಕರ ಮಧ್ಯೆ ವಾಗ್ವಾದ ನಡೆದು ಅದು ಜಗಳಕ್ಕೆ ತಿರುಗಿತ್ತು. ಇದು ಎರಡು ತಂಡಗಳ ಮಧ್ಯೆ ನಡೆದ ವೈಯಕ್ತಿಕ ಘಟನೆಯೇ ಹೊರತು ಇದರಲ್ಲಿ ಶಾಸಕರ ಪಾತ್ರವೇನೂ ಇಲ್ಲ. ಈ ಘಟನೆಗೆ ರಾಜಕೀಯ ಬಣ್ಣ ಬಳಿದು, ಜಾತಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ ಎಂದು ಶಾಸಕರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಪ್ರತ್ಯುತ್ತರ ರವಾನಿಸಿದ್ದಾರೆ.
ಸಂಘಟನೆಯ ಕಾರ್ಯಕರ್ತರನ್ನು ಕೆದಕದಿರಿ:
ಬೆಳ್ತಂಗಡಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಸಂಘಟನೆಯ ಹೆಸರು ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಯುವಕರ ಮಧ್ಯೆ ನಡೆದ ವೈಯಕ್ತಿಕ ಘಟನೆಗೂ ತಾಲೂಕಿನ ಶಾಸಕರನ್ನು, ಸಂಘಟನೆಯ ಕಾರ್ಯಕರ್ತರನ್ನು ಸುಖಾ ಸುಮ್ಮನೆ ಎಳೆದು ತರುವ ಪ್ರಯತ್ನ ಮಾಡಲಾಗುತ್ತಿದೆ. ಅಷ್ಟು ಸಾಲದೆಂಬಂತೆ, ಎರಡು ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕದಡಲು ಯತ್ನಿಸಲಾಗುತ್ತಿದೆ. ಸಂಘಪರಿವಾರದ ಕಾರ್ಯಕರ್ತರು ರಾಷ್ಟ್ರೀಯತೆ ಮತ್ತು ಧರ್ಮ ಶಿಕ್ಷಣ ಪಡೆದುಕೊಂಡು ಬಂದವರು. ಧರ್ಮದ ರಕ್ಷಣೆಗಾಗಿ ಯಾವ ಯುದ್ಧಕ್ಕೂ ಸೈ ಎಂದು ಎಚ್ಚರಿಕೆಯ ಸಂದೇಶದ ಮೆಸೇಜನ್ನೂ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಬಿಲ್ಲವ ಸಂಘದಿಂದ ಸಾಂಕೇತಿಕ ಪ್ರತಿಭಟನೆ: ಎಸ್.ಪಿ ಗೆ ದೂರು:
ಈ ಎಲ್ಲದರ ಮಧ್ಯೆ ಬಿಲ್ಲವ ಸಂಘ ಮತ್ತು ಯುವವಾಹಿನಿ ಸಂಘಟನೆಗಳು ಉಪ್ಪಿನಂಗಡಿ ಠಾಣೆಯ ಎದುರು ಜಮಾಯಿಸಿ, ನಮ್ಮ ಸಮುದಾಯ ಬಾಂಧವರಿಗೆ ಅನ್ಯಾಯವಾಗಿದೆ ಎಂದು ಸಾಂಕೇತಿಕ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.
ಜಿಲ್ಲೆಯಲ್ಲಿ ಬಿಲ್ಲವರನ್ನೇ ಗುರಿಯಾಗಿಸಿ ಕೊಲೆ, ಹಲ್ಲೆ, ದೌರ್ಜನ್ಯಗಳು ನಿರಂತರ ನಡೆಯುತ್ತಿದೆ. ನಮ್ಮ ಸಮಾಜದ ಮುಗ್ದತೆಯನ್ನು ದೌರ್ಬಲ್ಯ ಎಂದು ಮನಗಂಡಿರುವ ಆಡಳಿತ ವ್ಯವಸ್ಥೆ ತಪ್ಪಿತಸ್ಥರ ವಿರುದ್ದ ರಾಜಕೀಯ ಒತ್ತಡಗಳಿಗೆ ಒಳಗಾಗಿ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವುದನ್ನು ಸಮಾಜ ಬಂಧುಗಳಾದ ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ. ಮುಂದೆ ಇಂತಹ ಪ್ರತಿಭಟನೆಗಳಾದಲ್ಲಿ ಆ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾಧ್ಯಂತ ಹೋರಾಟ ನಡೆಸಬೇಕಾದೀತು ಎಂದು ಎಸ್‌ಪಿ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಾಂಕೇತಿಕ ಪ್ರತಿಭಟನೆಯ ವೇಳೆ ಬಿಲ್ಲವ ಸಂಘದ ಉಪಾಧ್ಯಕ್ಷ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್, ಬೆಳ್ತಂಗಡಿಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಸಚಿನ್ ನೂಜೋಡಿ, ನಿರ್ದೇಶಕರುಗಳಾದ ನ್ಯಾಯವಾದಿ ಮನೋಹರ ಕುಮಾರ್, ಜಯವಿಕ್ರಂ ಕಲ್ಲಾಪು, ಮಹೇಶ್ ಬೋಳೋಡಿ, ಗುಣಕರ ಅಗ್ನಾಡಿ, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಎಂ, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ| ರಾಜಾರಾಮ ಕೆ. ಬಿ, ಯುವವಾಹಿನಿ ಉಪ್ಪಿನಂಗಡಿ ಘಟಕದ ಅದ್ಯಕ್ಷ ಡಾ| ಆಶಿತ್ ಎಂ. ವಿ, ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ, ವೇಣೂರು ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ, ಯುವವಾಹಿನಿ ಕೇಂದ್ರ ಸಮಿತಿಯ ವಿವಿಧ ಸಮಿತಿಗಳ ಪದಾಧಿಕಾರಿಗಳು, ಘಟಕಗಳ ಸದಸ್ಯರು ಬಿಲ್ಲವ ಸಮಾಜದ ಮುಂದಾಳುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.