ಮುಂಡಾಜೆ ಬಾಲಕೃಷ್ಣ ಶೆಟ್ಟಿಯವರಿಗೆ ಮಂಡೆಚ್ಚ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಬೆಳ್ತಂಗಡಿ ತಾಲೂಕು ಮುಂಡಾಜೆಯ ಬಾಲಕೃಷ್ಣ ಶೆಟ್ಟಿಯವರು 2019ನೇ ಸಾಲಿನ ದಿ| ಮಂಡೆಚ್ಚ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಗಿರ್ಕಿ ವೀರನೆಂದೇ ಪ್ರಸಿದ್ಧಿ ಪಡೆದ ಬಾಲಕೃಷ್ಣ ಶೆಟ್ಟಿಯವರು ಪುಂಡುವೇಷ ಧಾರಿಯಾಗಿ ಕರ್ನಾಟಕ ಮೇಳವೊಂದರಲ್ಲೇ 25 ವರ್ಷಗಳ ಸುದೀರ್ಘ ಕಾಲ ತಿರುಗಾಟ ಮಾಡಿ ಭಾಗವತ ದಿ| ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪಳಗಿ ತುಳು ಯಕ್ಷಗಾನ ಪ್ರಸಂಗಗಳಿಗೆ ಜೀವ ತುಂಬಿದವರು.
ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ದಿ| ವಿಠಲ ಶಾಸ್ತ್ರಿ ಮತ್ತು ದಿ| ಪಡ್ರೆಚಂದು ಅವರಿಂದ ನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ ಕರ್ನಾಟಕ ಮೇಳ ಸೇರಿದರು. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಿಂದ ರಂಗದಲ್ಲಿ ಮಿಂಚಿದ ಅವರು ಬೋಳಾರರ ಹಿರಣ್ಯಕಶಿಪುಗೆ ಪ್ರಹ್ಲಾದನಾಗಿ, ಕೋಳ್ಯೂರರ ಚಂದ್ರಮತಿಗೆ ಲೋಹಿತಾಶ್ವನಾಗಿ ಬಹುಬೇಗನೆ ಪ್ರಸಿದ್ಧಿಗೆ ಬಂದರು. ಪುಂಡುವೇಷಗಳಲ್ಲಿ ಅವರು ಮಾಡದ ಪಾತ್ರಗಳಿಲ್ಲವೆನ್ನಬಹುದು. ಯಾವುದೇ ಪಾತ್ರಕ್ಕೂ ತನ್ನದೇ ಸ್ವಂತಿಕೆಯಿಂದ ಪಾತ್ರಕ್ಕೆ ಜೀವ ತುಂಬಿದವರು. ದೈವದತ್ತಾವಾಗಿ ಒದಗಿ ಬಂದ ಶರೀರ, ಶಾರೀರ, ಲವಲವಿಕೆಯ ಚುರುಕುನಡೆ ಅವರಲ್ಲಿ ವಿಶೇಷವಾಗಿ ಗಮನಿಸಬಹುದಾಗಿತ್ತು. ಕುಣಿತದಲ್ಲೇ ಅವರಿಗೆ ವಿಶೇಷ ಒಲವು, ಆಸಕ್ತಿ, ತುಳುಪ್ರಸಂಗದಲ್ಲಿ ಕೋಟಿ ಚೆನ್ನಯ ದ ಚೆನ್ನಯನಾಗಿ ಪಟ್ಟದ ಪದ್ಮಲೆಯ ರಾಜಶೇಖರನಾಗಿ, ಕಾಡಮಲ್ಲಿಗೆಯ ಶಾಂತ ಕುಮಾರನಾಗಿ, ರಾಜಮುದ್ರಿಕೆಯ ವೀರಸೇನನಾಗಿ, ಮಾಯಾಜುಮಾದಿಯ ಕರ್ಣಗೆಯಾಗಿ ಅವರ ಪಾತ್ರ ನಿರ್ವಹಣೆ ಕಲಾಭಿಮಾನಗಳಲ್ಲಿ ಚಿರಸ್ಥಾಯಿಯಾಗುಳಿದಿದೆ.
ಪ್ರಸಿದ್ಧಿಯ ಉತ್ತುಂಗ ಸ್ಥಿತಿಯಲ್ಲೆ ಅನಾರೋಗ್ಯ ಕಾಡತೊಡಗಿ ಕಾಲುನೋವಿನಿಂದ ಮೇಳ ಬಿಡುವ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಆದರೂ ಎದೆಗುಂದದೆ ಪ್ರಸಾದನ ಕಲಾವಿದರಾಗಿ ಬಳಿಕ ಯಕ್ಷಗಾನ ವೇಷಭೂಷಣದ ಪ್ರಸಾದನ ಉದ್ಯಮವನ್ನೇ ಆರಂಭಿಸಿದರು. ಅನೇಕ ಕಡೆ ಯುವಕರಿಗೆ ಯಕ್ಷಗಾನ ವಿದ್ಯಾಭ್ಯಾಸವನ್ನು ಮಾಡಿಸಿ, ತನ್ಮೂಲಕ ಯಕ್ಷ ಮಾತೆಯ ಸೇವಾ ಕೈಂಕರ್ಯವನ್ನು ಮುನ್ನಡೆಸಿಕೊಂಡು ಬಂದರು. ಅವರ ಸುದೀರ್ಘ ಯಕ್ಷಕಲಾ ಸೇವೆಯನ್ನು ಪರಿಗಣಿಸಿ ಈ ವರ್ಷದ ದಿ| ಮಂಡೆಚ್ಚ ಪ್ರಶಸ್ತಿಗೆ ಮುಂಡಾಜೆ ಬಾಲಕೃಷ್ಣ ಶೆಟ್ಟಿಯವರನ್ನು ಅರ್ಹವಾಗಿಯೇ ಆಯ್ಕೆ ಮಾಡಲಾಗಿದೆ. ಸೆ.25 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವ ಭಾಗವತ ಕುಬಣೂರು ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.