ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ ಈಗ ಇ ಆಡಳಿತ

ಬೆಳ್ತಂಗಡಿ ತಾಲೂಕು ಕಚೇರಿ ವ್ಯವಸ್ಥೆಗೆ ಮೇಜರ್ ಸರ್ಜರಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ತಹಶೀಲ್ದಾರರಾಗಿ ಮಾಜಿ ಸೈನಿಕರೂ ಆಗಿರುವ ಗಣಪತಿ ಶಾಸ್ತ್ರಿ ಅವರು ಅಧಿಕಾರ ಹಿಡಿದ ಬಳಿಕ ಅನೇಕ ಬದಲಾವಣೆಗಳನ್ನು ತಂದಿದ್ದು, ಜನಸ್ನೇಹಿ ಆಡಳಿತ ವೃದ್ಧಿಗೆ ಅನೇಕ ಪೂರಕ ಕ್ರಮಗಳನ್ನು ಅನುಷ್ಠಾನಿಸಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಪೇಪರ್‌ಲೆಸ್ ಎಡ್ಮಿನಿಸ್ಟ್ರೇಷನ್ ಇ ಆಡಳಿತ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ. ಆ ಮೂಲಕ ಜಡ್ಡು ಹಿಡಿದು ಹೋಗಿದ್ದ ಆಡಳಿತ ಶೈಲಿಗೆ ಮೇಜರ್ ಸರ್ಜರಿ ಮಾಡಿದ್ದು, ಮಹತ್ವದ ಬದಲಾವಣೆಗೆ ಹೆಜ್ಜೆ ಇಟ್ಟಿದ್ದಾರೆ. ಇದು ತಾಲೂಕು ಕಚೇರಿಯಲ್ಲಿ ಇ ಅಡಳಿತ ಜಾರಿಗೆ ತಂದಿರುವ ರಾಜ್ಯದಲ್ಲೇ ಮೊದಲ ತಾಲೂಕಾಗಿದೆ.  ಟಪ್ಪಾಲು ವಿಭಾಗದಲ್ಲಿ ಸ್ವೀಕರಿಸಲಾಗುವ ಎಲ್ಲಾ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ ಅದನ್ನು ಇ ಆಡಳಿತ ವ್ಯವಸ್ಥೆಯಡಿ ಫೈಲ್ ನೇಮ್, ಫೈಲ್ ನಂಬರ್ ಕೊಟ್ಟು ಸೇವ್ ಮಾಡಲಾಗು ತ್ತದೆ. ಅದಕ್ಕೆ ಅರ್ಜಿದಾರರಿಗೆ ಸ್ಥಳದಲ್ಲೇ ಸ್ವೀಕೃತಿ ಕೊಡಲಾಗುತ್ತದೆ.
     ಆ ಬಳಿಕ ಅದು ಪೇಪರ್‌ಲೆಸ್ ಆಡಳಿತದ ವ್ಯವಸ್ಥೆಯಲ್ಲಿ ಮುಂದಿನ ಅಧಿಕಾರಿಗೆ ದೊರೆಯುತ್ತದೆ. ಹೀಗೆ ಯಾವ ಫೈಲ್ ಟಪ್ಪಾಲ್‌ನಲ್ಲಿ ಸ್ವೀಕಾರವಾಗಿದೆ. ಅದರ ಕೇಸ್‌ವರ್ಕರ್ ಯಾರು, ಯಾವುದಕ್ಕೆ ಸಂಬಂಧಪಟ್ಟ ಅರ್ಜಿ, ಅದರ ಸ್ಥಿತಿ ಏನು, ಈಗ ಯಾರ ಟೇಬಲ್‌ನಲ್ಲಿ ಅರ್ಜಿ ಇದೆ. ಅದರ ಪ್ರಗತಿ ಏನು ಎಂಬುದು ಸ್ವತಃ ತಹಶೀಲ್ದಾರ್‌ಗೆ ಬೆರಳ ತುದಿಯಲ್ಲೇ ಗೊತ್ತಾಗಿಬಿಡುತ್ತದೆ.
ವಿಳಂಬ ತಪ್ಪಿಸಬಹುದು: ಇನ್ನು ಮುಂದೆ ಅರ್ಜಿಗಳನ್ನು ಸ್ವೀಕರಿಸುವ ಸಿಬ್ಬಂದಿ ಅದನ್ನು ಹಾಗೆ ಸುಮ್ಮನೆ ಟೇಬಲ್‌ಮೇಲೆ ಇಟ್ಟುಕೊಳ್ಳುವಂತಿಲ್ಲ. ಅಂದೇ ಫೀಡ್ ಮಾಡಿ ಮುಂದಿನ ಕ್ರಮಕ್ಕೆ ಮಂಡಿಸಲೇ ಬೇಕು.
ಇದರಿಂದಾಗಿ ಜನತೆಗೆ ನಿತ್ಯ ಕಛೇರಿಗೆ ಅಲೆದಾಟ ತಪ್ಪಲಿದೆ. ನಿಗದಿತ ದಿನದಲ್ಲೇ ಅರ್ಜಿ ವಿಲೇ ಕೂಡ ಆಗಲಿದೆ.
ಎಲ್ಲಾ ಅರ್ಜಿಗಳ ಸಂಖ್ಯೆ; ಎಲ್ಲಾ ವಿವರ ಲಭ್ಯ:
ಇ ಆಡಳಿತ ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಜಾರಿಯಲ್ಲಿದೆ. ಕೆಲವೆಡೆ ಸುಸೂತ್ರವಾಗಿ ನಡೆಯುತ್ತಿದ್ದು, ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ತಾಲೂಕು ಇದೇ ಮೊದಲ ಬಾರಿಗೆ ಮಿನಿ ವಿಧಾನ ಸೌಧ ಪ್ರವೇಶ ದ್ವಾರದಲ್ಲಿ ಪ್ರತ್ಯೇಕ ಮಾಹಿತಿ ಕೇಂದ್ರ ತೆರೆದು ಓರ್ವ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ. ಯಾರೇ ಹಳ್ಳಿಯಿಂದ ಬಂದರೂ ಈ ಕಚೇರಿ ಸಂಪರ್ಕಿಸಿದರೆ ಎಲ್ಲಾ ಮಾಹಿತಿ ದೊರೆಯುತ್ತದೆ. ಯಾವ ಕೆಲಸಕ್ಕೆ ಯಾವ ವಿಭಾಗಕ್ಕೆ ಹೋಗಬೇಕು ಎಂಬ ಮಾಹಿತಿ ಇಲ್ಲಿನ ಸಿಬ್ಬಂದಿ ನೀಡುತ್ತಾರೆ. ಜೊತೆಗೆ ಮೇಲಾಧಿಕಾರಿಗಳ ಲಭ್ಯತೆಯ ಬಗ್ಗೆಯೂ ಅವರಲ್ಲಿ ಮಾಹಿತಿ ಇದೆ. ಇಲ್ಲಿಗೆ ಇತ್ತೀಚೆಗೆ ಹೊಸದಾಗಿ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕ ಗೊಂಡಿರುವ ಎರಡೂ ಕಣ್ಣು ದೃಷ್ಟಿ ಕಳೆದುಕೊಂಡಿರುವ ಭೀಮಸೇನ ಎಂಬವರನ್ನು ಕರ್ತವ್ಯಕ್ಕೆ ನಿಯೋಜಿಸ ಲಾಗಿದೆ. ವಿಶೇಷ ಸಾಮರ್ಥ್ಯ ಹೊಂದಿರುವ ಅವರು ಸೂಕ್ಷ್ಮವಾಗಿ ಎಲ್ಲರಿಗೂ ಪ್ರತಿಕ್ರಿಯಿಸುವ ಕೆಲಸ ಮಾಡುತ್ತಿದ್ದಾರೆ.

ತಹಶೀಲ್ದಾರ್ ಮತ್ತು ಅಧಿಕಾರಿಗಳ ಭೇಟಿಗೆ ಅಪರಾಹ್ನ 3.30ರ ನಂತರ ಅವಕಾಶ:

ಸಾರ್ವಜನಿಕರಿಗೆ ತಮ್ಮ ಕೆಲಸಗಳಿಗೆ ಪೂರಕವಾಗಿ ಸಂಬಂಧ ಪಟ್ಟ ಅಧಿಕಾರಿಗಳ ಸಂದರ್ಶನಕ್ಕೆ ಅಪರಾಹ್ನ 3.30 ರ ನಂತರ ಸಮಯ ನಿಗದಿಗೊಳಿಸಿ ತಹಶೀಲ್ದಾರರು ಹೊಸ ಆದೇಶ ಜಾರಿಗೊಳಿಸಿದ್ದಾರೆ. ಗ್ರಾಮ ಕರಣಿಕರು, ಕಂದಾಯ ನಿರೀಕ್ಷಕರು, ಅಥವಾ ಸಂಬಂಧಿಸಿದ ಯಾವುದೇ ಅಧಿಕಾರಿಗಳನ್ನು ಸಾರ್ವಜನಿಕರು ಇಲಾಖಾ ಕೆಲಸಗಳಿಗೆ ಸಂಬಂಧಿಸಿ ಭೇಟಿ ಮಾಡುವುದಾದರೆ ಇನ್ನು ಇಡೀ ದಿನ ಅವಕಾಶವಿಲ್ಲ. ತಹಶೀಲ್ದಾರರ ಹೊಸ ಲಿಖಿತ ಆದೇಶದಂತೆ ಸಂಜೆ ೩.೩೦ರ ನಂತರ ಮಾತ್ರ ಭೇಟಿಗೆ ಅವಕಾಶ. ಯಾಕೆಂದರೆ ಕಚೇರಿ ಸಿಬ್ಬಂದಿ ಅಥವಾ ಅಧಿಕಾರಿಗಳು ಜನಸೇವೆಯ ಭಾಗವಾಗಿ ಕರ್ತವ್ಯದಲ್ಲಿ ಮಗ್ನರಾಗಿರುವ ವೇಳೆ ಜನಸಾಮಾನ್ಯರು ಬಂದು ತಮ್ಮ ತಮ್ಮ ಕಡತಗಳ ಬಗ್ಗೆ ಮಾತನಾಡಲು ಆರಂಭಿಸಿದರೆ ಸಮಯ ವ್ಯರ್ಥವಾಗುತ್ತದೆ. ಮತ್ತು ಆ ಕಾರಣದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಈ ಆದೇಶ ಎಂದು ತಹಶೀಲ್ದಾರರು ಪ್ರತಿಕ್ರಿಯಿಸುತ್ತಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.