ಹಠಾತ್ತನೆ ರಸ್ತೆಗೆ ಬಿದ್ದ ಬೃಹತ್ ಮರ

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಲಾಯಿಲ: ಶಂಕಿತ ಡೆಂಗ್ಯೂ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವೊಂದು ಹಠಾತ್ತನೆ ಬಿದ್ದ ಕಾರಣ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುವೊಂದು ತಪ್ಪಿದ ಘಟನೆ ಇಲ್ಲಿಯ ಪುತ್ರಬೈಲು ಎಂಬಲ್ಲಿ ಸೆ.18 ಮಧ್ಯಾಹ್ನ ಸಂಭವಿಸಿದೆ.
ಬಂಗಾಡಿಯ ಶಂಕಿತ ಡೆಂಗ್ಯೂ ಪೀಡಿತರಾದ ನೌಫಲ್ ಎಂಬವರನ್ನು ಅಪತ್ಬಾಂಧವ ಬೆಳ್ತಂಗಡಿಯ ಜಲೀಲ್(ಬಾಬಾ) ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ಈ ಘಟನೆ ನಡೆದಿದೆ. ಪುತ್ರಬೈಲು ಎಂಬಲ್ಲಿಗೆ ಅಂಬ್ಯುಲೆನ್ಸ್ ತಲುಪುತ್ತಿದ್ದಂತೆ ರಸ್ತೆ ಬದಿಯ ಅಪಾಯಕಾರಿ ಬೃಹತ್ ಮರವೊಂದು ವಾಲುತ್ತಿರುವುದನ್ನು ಕಂಡ ಜಲೀಲ್ ಅವರು ಅಂಬ್ಯುಲೆನ್ಸ್‌ನ್ನು ಹತೋಟಿಗೆ ತಂದು ತಕ್ಷಣ ನಿಲ್ಲಿಸಿದರು. ಆಗಲೇ ಇವರ ವಾಹನದ ಎದುರಲ್ಲೇ ಮರ ಬಿದ್ದರೆ, ಹಿಂಭಾಗಕ್ಕೆ ವಿದ್ಯುತ್ ಕಂಬ ಬಿದ್ದಿದೆ. ಜಲೀಲ್ ಅವರ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಮರ ತೆರವುಗೊಳಿಸಿದ ಬಳಿಕ ಅವರು ರೋಗಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಇತ್ತೀಚೆಗೆ ಉಜಿರೆ ಸಿದ್ಧವನದ ಬಳಿ ಅಪಾಯಕಾರಿ ಮರ ಹಠಾತ್ತನೆ ಕಾರಿನ ಮೇಲೆ ಬಿದ್ದು, ಇಬ್ಬರು ಯುವಕರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವುದನ್ನು ಇಲ್ಲಿ ನೆನಪಿಸಬಹುದು. ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.