ಈಜುಕೊಳವಾಗಿದೆ ವೇಣೂರು ನಾಡಕಚೇರಿ!: ಕಡತಗಳ ಶೇಖರಣೆ ಕಷ್ಟ ಕಷ್ಟ; 32ವರ್ಷಗಳಿಂದ ಬಾಡಿಗೆ ಕೋಣೆಯೇ ಆಸರೆ!

Advt_NewsUnder_1
Advt_NewsUnder_1
Advt_NewsUnder_1

 

ವೇಣೂರು: 29 ಗ್ರಾಮಗಳಿಗೆ ಸಂಬಂಧಿತ ಕಂದಾಯ ಇಲಾಖೆಯ ವೇಣೂರು ನಾಡಕಚೇರಿಯ ಅವ್ಯವಸ್ಥೆಯನ್ನು ನೋಡಿಯೇ ತಿಳಿಯಬೇಕು.
ಸೋರುವ ಕಟ್ಟಡ, ಬಿರುಕುಬಿಟ್ಟ ಮೇಲ್ಮಮಹಡಿ. ಕೊಠಡಿ ತುಂಬಾ ಶೇಖರಣೆಯಾಗುವ ಮಳೆನೀರು. ಈ ಎಲ್ಲದರ ಮಧ್ಯೆ ಕಡತಗಳನ್ನು ಶೇಖರಿಸಿಡಲು ಸಿಬ್ಬಂದಿ ಪರದಾಡುವ ಕಷ್ಟ ಅಷ್ಟಿಷ್ಟಲ್ಲ.
1987ರಲ್ಲಿ ವೇಣೂರಿನಲ್ಲಿ ಪ್ರಾರಂಭಗೊಂಡ ನಾಡಕಚೇರಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಒದಗಿಬಂದಿಲ್ಲ. ಸರಿಸುಮಾರು 32 ವರ್ಷಗಳಿಂದ ಬಾಡಿಗೆ ಕೋಣೆಯಲ್ಲೇ ದಿನ ದೂಡುತ್ತಿದೆ. ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಿಂದ ಗ್ರಾಮಸ್ಥರ ಕಡತಗಳಿಗೆ ಸುರಕ್ಷತೆಯೇ ಇಲ್ಲವಾಗಿದೆ.
ಇಲ್ಲಿನ ಕಂದಾಯ ನಿರೀಕ್ಷಕರೇ ಉಪ ತಹಶೀಲ್ದಾರರ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ಒಬ್ಬನೇ ಗ್ರಾಮ ಸಹಾಯಕ ಇಡೀ ಕಚೇರಿ ಕೆಲಸವನ್ನು ನಿರ್ವಸುತ್ತಿದ್ದು, ಅವರು ರಜೆ ಮಾಡಿದರೆ ಆ ದಿನ ಕಚೇರಿ ಬಂದ್!
ಮಾಸಾಶನಗಳು, ತಕರಾರು ಕೊಟೇಶನ್, ಜಾತಿ-ಆದಾಯ ಪ್ರಮಾಣ ಪತ್ರ, ಜನನ-ಮರಣ ಪ್ರಮಾಣ ಪತ್ರ, ಸಹಿತ ಪ್ರಾಕೃತಿಕ ವಿಕೋಪದಡಿ ಪರಿಹಾರ, ಸರಕಾರ ಸೌಲಭ್ಯಗಳು ಹೀಗೆ ಹತ್ತಾರು ಸಮಸ್ಯೆಗಳನ್ನು ಹೋಬಳಿ ಮಟ್ಟದ ಜನರು ಹೊತ್ತು ತರುತ್ತಿದ್ದು, ನಾಡಕಚೇರಿಯ ಅವ್ಯವಸ್ಥೆಯಿಂದಾಗಿ ಜನ ಸಮರ್ಪಕ ಸೇವೆಯಿಂದ ವಂಚಿತರಾಗಿದ್ದಾರೆ.

ಠಿಕಾಣಿ ಹೂಡಿರುವ ಇಲಾಖೆ!
ನಾಡಕಚೇರಿಗೆ ಬಾಡಿಗೆ ಕೋಣೆಯನ್ನು ಪಡೆದುಕೊಂಡಾಗ ಕೊಠಡಿ ವ್ಯವಸ್ಥಿತವಾಗಿಯೇ ಇತ್ತು. ಆದರೆ ಇಂದು ಕಟ್ಟಡದ ಈ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಮೇಲ್ಚಾವಣಿಯ ಕಾಂಕ್ರಿಟ್ ತುಂಡು ತುಂಡಾಗಿ ಬೀಳುತ್ತಿದೆ. ಬಾಡಿಗೆ ನೀಡಿದವರೇ ಕಚೇರಿಯನ್ನು ತೆರವುಗೊಳಿಸುವಂತೆ ಹಲವು ಭಾರಿ ಸೂಚಿದ್ದರೂ ಠಿಕಾಣಿ ಹೂಡಿರುವ ಇಲಾಖೆ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ.
ಸಿಬ್ಬಂದಿ ನೇಮಕ ಇಲ್ಲ
ಬೆಳ್ತಂಗಡಿ ತಾಲೂಕಿನಲ್ಲಿ 3 ಹೋಬಳಿ ಕೇಂದ್ರಗಳಿವೆ. ವೇಣೂರು ಹೋಬಳಿ ಕೇಂದ್ರಕ್ಕೆ ಇರಬೇಕಾದ ಉಪತಹಶೀಲ್ದಾರರು, ಕ್ಲರ್ಕ್, ಬೆರಳಚ್ಚುಗಾರ, ಡಿದರ್ಜೆ ನೌಕರ ಹುದ್ದೆಯ ನೇಮಕವೇ ಆಗಿಲ್ಲ. ನಾಡಕಚೇರಿಯಲ್ಲಿ ಮೂವರು ನೌಕರರು ಮಾಡುವ ಕೆಲಸಗಳನ್ನು ಗ್ರಾಮ ಸಹಾಯಕರೊಬ್ಬರೇ ಮಾಡಿ ಇಡೀ ಜವಾಬ್ದಾರಿಯನ್ನು ನಿರ್ವಹಿಸುವಂತಾಗಿದೆ. ಈಗಾಗಿ ನಾಡಕಚೇರಿಯಲ್ಲಿ ಜನತೆ ತಮ್ಮ ಸೌಲಭ್ಯ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣ ಆಗಿದೆ.

ಜಾಗವಿದ್ದರೂ ಕಟ್ಟಡವಿಲ್ಲ
ವೇಣೂರು ಕಂದಾಯ ನಿರೀಕ್ಷಕರ ಕಚೇರಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದಾಗ ದುರಸ್ತಿ ಕಾರ್ಯ ಮಾಡುವ ಬದಲು ೨೦೦೪ಲ್ಲಿ ಬಾಡಿಗೆ ಕೋಣೆಗೆ ಸ್ಥಳಾಂತರ ಮಾಡಲಾಗಿದೆ. ನಾಡಕಚೇರಿಗೆ ಸಂಬಂಧಿಸಿ ೪೦ ಸೆಂಟ್ಸ್ ಜಾಗವಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣ ಆಗಬೇಕಿದೆ.

ಪ್ರಸ್ತಾವಣೆ ಕಳುಹಿಸಲಾಗಿದೆ
ವೇಣೂರು ನಾಡಕಚೇರಿಗೆ ಸ್ವಂತ ಜಾಗವಿದೆ. ಆದರೆ ಕಟ್ಟಡವಿಲ್ಲದೆ ಬಾಡಿಗೆ ಕೊಠಡಿಯಲ್ಲಿರಬೇಕಾಗಿದೆ. ಹೊಸಕಟ್ಟಡದ ಬಗ್ಗೆ ಕಳೆದ ಬಾರಿಯೂ ಸರಕಾರಕ್ಕೆ ಪ್ರಸ್ತಾವಣೆ ಕಳುಹಿಸಲಾಗಿದೆ. ಹೊಸಕಟ್ಟಡ ಅನುಮೋದನೆಗೊಂಡರೆ ಅನುಕೂಲ.
ಪಾವಡಪ್ಪ ದೊಡ್ಡಮನಿ, ಕಂದಾಯ ನಿರೀಕ್ಷಕರು, ವೇಣೂರು ಹೋಬಳಿ

ವೇಣೂರು ನಾಡಕಚೇರಿ ಸೋರುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಂದಾಯ ಇಲಾಖೆಗೆ ಸಂಬಂಧಿಸಿ ಜಾಗ ಇದ್ದು, ಹೊಸಕಟ್ಟಡಕ್ಕೆ ಅನುದಾನ ಸರಕಾರ ಬಿಡುಗಡೆ ಮಾಡಬೇಕಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರುತ್ತೇನೆ.
ಅರುಣ್ ಕ್ರಾಸ್ತ, ಉಪಾಧ್ಯಕ್ಷರು ವೇಣೂರು ಗ್ರಾ.ಪಂ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.