ತಾಲೂಕು ಪುನರ್‌ನಿರ್ಮಾಣಕ್ಕೆ ರಾಜ್ಯ ಸರಕಾರ ತಕ್ಷಣ 600 ಕೋಟಿ ಬಿಡುಗಡೆಗೊಳಿಸಲಿ: ರೈತ ಸಂಘ ಆಗ್ರಹ

ಬೆಳ್ತಂಗಡಿ: ನೆರೆ ಮತ್ತು ಮಳೆಹಾನಿಯಿಂದ ಭಾರೀ ಅನಾಹುತಕ್ಕೆ ಸಾಕ್ಷಿಯಾದ ತಾಲೂಕಿನ ಪುನರ್ ನಿರ್ಮಾಣಕ್ಕೆ ವೈಜ್ಞಾನಿಕ ಅಧ್ಯಯನ ನಡೆಸಿ ಅಂದಾಜು 600 ಕೋಟಿ ರೂ. ತುರ್ತಾಗಿ ರಾಜ್ಯ ಸರಕಾರ ಬಿಡುಗಡೆಗೊಳಿಸಬೇಕು. ಈಗಾಗಲೇ ನಾವು ಪರಿಶೀಲನೆ ನಡೆಸಲಾದಂತೆ ಬಾಂಜಾರು ಕಾಲನಿಗೆ ಪರ್ಯಾಯ ರಸ್ತೆ ನಿರ್ಮಾಣದ ಯೋಜನೆಗೆ ಪೂರ್ಣರೂಪ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರ. ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಆಗ್ರಹಿಸಿದ್ದಾರೆ.
ಆ. 22 ರಂದು ತಾಲೂಕಿನ ನೆರೆ ಮತ್ತು ಮಳೆಹಾನಿ ಪೀಡಿತ ಪ್ರದೇಶಗಳಿಗೆ ತಮ್ಮ ನಿಯೋಗದೊಂದಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ನಷ್ಟಕ್ಕೊಳಗಾಗಿರುವ ಪ್ರದೇಶದ ಶೇ. 60 ರಷ್ಟು ಜನರು ಆದಿವಾಸಿ ಸಮುದಾಯದವರಾಗಿದ್ದಾರೆ. ಕೆಲವರು 4-5  ಎಕ್ರೆಯಷ್ಟು ಕೃಷಿ ಕೃತಾವಳಿ ಮಾಡಿಕೊಂಡಿದ್ದಾರೆ. ಆದರೆ ಅವರ ಬಳಿ ಜಾಗದ ದಾಖಲೆ ಇರುವಂತಹದ್ದು ೪೦-೫೦ ಸೆಂಟ್ಸ್‌ಗಳಷ್ಟು ಮಾತ್ರ. ಇದು ಕಂದಾಯ ಇಲಾಖೆ ಪರಿಹಾರ ಕೊಡುವ ವ್ಯವಸ್ಥೆಯಲ್ಲಿ ಜುಜುಬಿ ಮೊತ್ತವಾಗಲಿದ್ದು, ನಷ್ಟಕ್ಕೊಳಗಾದವರ ಜಾಗದ ಮಿತಿ ನೋಡದೆ ಅವರು ಅನುಬೋಗಿಸುತ್ತಿರುವ ಜಾಗದ ಕೃಷಿ ನಷ್ಟಕ್ಕೆ ಪೂರ್ತಿ ಪರಿಹಾರ ಕೊಡುವಂತಾಗಬೇಕು. ಅದಕ್ಕಾಗಿ ತಾಲೂಕು ಮಟ್ಟದಲ್ಲಿ ರೈತ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳನ್ನೊಳಗೊಂಡ ಸಮಿತಿ ರಚಿಸಿಕೊಂಡು ಪರಿಹಾರದ ಅಂದಾಜು ಮೊತ್ತವನ್ನು ರೂಪಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಕೆ ಕೃಷ್ಣಪ್ಪ ಸಾಲ್ಯಾನ್, ಕೋಶಾಧಿಕಾರಿ ವಾಸುದೇವ ಉಚ್ಚಿಲ್, ರಾಜ್ಯ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ, ನಿರ್ದೇಶಕ ವಸಂತ ಆಚಾರಿ, ತಾಲೂಕು ಮುಖಂಡರಾದ ಶೇಖರ್ ಲಾಯಿಲ ಮತ್ತು ಶಿವಕುಮಾರ್ ಎಂ.ಎಸ್ ಇವರುಗಳು, ಬೆಳ್ತಂಗಡಿ ನರೆ ಪ್ರಕರಣವನ್ನು ಸಾಮಾನ್ಯ ನೆರೆ ಎಂದು ಪರಿಗಣಿಸದೆ ಮೇಘ ಸ್ಪೋಟ ಎಂದು ಪರಿಗಣಿಸಬೇಕು. ರೈತರು ಕಳೆದುಕೊಂಡಿರುವ ಕೃಷಿಭೂಮಿಯಲ್ಲಿ ಮರ ಮತ್ತು ಮರಳು  ಮಾತ್ರ ತುಂಬಿದ್ದು ದೀರ್ಘ ಕಾಲದ ಬದುಕಿಗೆ ಪೆಟ್ಟುಕೊಟ್ಟಿದೆ. ಈ ಸನ್ನಿವೇಶದ ಬಗ್ಗೆ ವೈಜ್ಞಾನಿಕ ಸರ್ವೆ ಆಗಬೇಕು. ಜಾಗದ ಮಣ್ಣು- ಮರಳು ತೆರವುಗೊಳಿಸಿ ಸದ್ರಿ ಜಾಗವನ್ನು ಸುಸ್ತಿಗೆ ತರಬೇಕಾದರೆ ಇಡೀ ತಾಲೂಕೇ ಎದ್ದು  ನಿಲ್ಲಬೇಕಾಗುತ್ತದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ನಮ್ಮ ಸಮಿತಿ ಸದಸ್ಯರು ಆದಿವಾಸಿಗಳು ನೆಲೆಸಿರುವ ಸ್ಥಳಗಳಿಗೆ ಭೇಟಿ ನೀಡಿದ್ದು ಎಸ್‌ಸಿ ಎಸ್‌ಟಿ ಆಯೋಗದಿಂದಲೂ ಪರಿಹಾರಕ್ಕೆ ಆಗ್ರಹಿಸಲಾಗಿದೆ ಎಂದು ವಿವರ ನೀಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.