ಕುತ್ಲೂರು ಶಾಲೆಯಲ್ಲಿ ಶಾಲಾ ಅಕ್ಷರ ಕೈ ತೋಟ, ವಾಚನಾಲಯ, ಕಂಪ್ಯೂಟರ್ ತರಗತಿ ಉದ್ಘಾಟನೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹೆಚ್ಚಿನ ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿದ್ದು ಅವುಗಳ ದುರಸ್ತಿಗಾಗಿ ಸರ್ಕಾರಕ್ಕೆ ೬೫ ಕೋಟಿ ರೂ. ವೆಚ್ಚದ ಕಾಮಗಾರಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕುತ್ಲೂರು ಬಳಿ ಇರುವ ಕುಕ್ಕಾಜೆ ಸೇತುವೆಯನ್ನು ಕೂಡಾ ದುರಸ್ತಿಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಹೇಳಿದರು.
ಅವರು ಆ.21 ರಂದು ಕುತ್ಲೂರು ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ ಶಾಲಾ ಅಕ್ಷರ ಕೈತೋಟ, ವಾಚನಾಲಯ ಮತ್ತು ಕಂಪ್ಯೂಟರ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.


ಮೊಬೈಲ್ ಫೋನ್ ಹಾಗೂ ಟಿ.ವಿ.ಯಿಂದಾಗಿ ಇಂದು ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಉತ್ತಮ ಶಾಲೆ ಮತ್ತು ದೇವಸ್ಥಾನ ಊರಿನ ಪ್ರಗತಿಯ ದ್ಯೋತವಾಗಿದ್ದು ಜನರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಶಾಲೆಯ ಆವರಣ ಗೋಡೆ ಕಾಮಗಾರಿ ಮತ್ತು ಮಳೆ ಕೊಯ್ಲು ತಕ್ಷಣ ಪ್ರಾಂಭಿಸಲು ಅವರು ಅನುಮತಿ ನೀಡಿ ಅನುದಾನ ಮಂಜೂರು ಮಾಡುವುದಾಗಿ ತಿಳಿಸಿದರು.
2018ರ ಡಿಸೆಂಬರ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಕುತ್ಲೂರು ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಶಾಲೆಯನ್ನು ಸರ್ವತೋಮುಖ ಪ್ರಗತಿಗಾಗಿ ದತ್ತು ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಈ ವರ್ಷ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಶಿಕ್ಷಕರ ನೇಮಕಾತಿಯೂ ಆಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ ಮಾತನಾಡಿ, ಈ ವರ್ಷ ಶಾಲೆಯಲ್ಲಿ 66 ವಿದ್ಯಾರ್ಥಿಗಳು ಕಲಿಯುತ್ತಿದ್ದು ಪೂರ್ಣಕಾಲಿಕ ಮುಖ್ಯೋಪಾಧ್ಯಾಯರನ್ನು ನೇಮಕ ಮಾಡಲಾಗಿದೆ. ಅತಿಥಿ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಶಾಲೆಗೆ ನೀಡುತ್ತಿರುವ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.


ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದ್ರಾಜೆ, ಜಿಲ್ಲಾ ವಾರ್ತಾ ಅಧಿಕಾರಿ ಖಾದರ್ ಷಾ, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಯನ್,. ಪೂವಣಿ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಕುತ್ಲೂರು ಶಾಲೆಯ ಅಭಿವೃದ್ಧಿಗೆ ಪತ್ರಕರ್ತರು ನೀಡಿದ ಸಕ್ರಿಯ ಸಹಕಾರವನ್ನು ಧನ್ಯತೆಯಿಂದ ಸ್ಮರಿಸಿದರು.
ರಾಮಚಂದ್ರ ಭಟ್ ಕುಕ್ಕುಜೆ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಗೆ ಬೇಕಾದ ಮೂಲಭೂತ ಸವಲತ್ತುಗಳನ್ನು ನೀಡುವಂತೆ ಕೋರಿದರು.
ನಾರಾವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ, ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್, ಸಮನ್ವಯಾಧಿಕಾರಿ ಗಣೇಶ್ ಐತಾಳ್, ಪ್ರಭಾಕರ ನಾರಾವಿ ಹಾಗೂ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಪುಷ್ಪರಾಜ ಶೆಟ್ಟಿ, ಜಿತೇಂದ್ರ ಕುಂದೇಶ್ವರ ಮತ್ತು ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಸ್ವಾಗತಿಸಿದರು. ಶಾಲೆಯ ಸಹಾಯಕ ಶಿಕ್ಷಕಿ ರೂಪಾ ಕುಮಾರಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.