ವೇಣೂರು: ಇಲ್ಲಿಯ ವೇಣೂರು ಗ್ರಾಮ ಪಂಚಾಯತದ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ಗ್ರಾ.ಪಂ ನಲ್ಲಿ ವ್ಯಾಪಕ ಭ್ರಷ್ಟಾಚಾರ ಸಹಿತ ಅವ್ಯವಹಾರ ನಡೆದ ಬಗ್ಗೆ ಹಲವಾರು ಆರೋಪಗಳು ನಡೆದಿರುತ್ತದೆ. ಗ್ರಾ.ಪಂ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗ ಸಹಿತ ಆಡಳಿತ ವರ್ಗ ಪಂಚಾಯತ್ ರಾಜ್ ನಿಯಮಾವಳಿಗಳನ್ನು ಮೀರಿ ಸ್ವೇಚ್ಛಾಚಾರವಾಗಿ ವರ್ತಿಸುತ್ತಿದ್ದಾರೆ, ಗ್ರಾ.ಪಂ ಸದಸ್ಯರ ಹಕ್ಕುಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅನೂಪ್ ಜೆ ಪಾಯಸ್ ಆರೋಪಿಸಿದರು.
ಅವರು ಇಂದು( ಆ.22) ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದರು.
ಆ.15 ರಂದು ವೇಣೂರು ಗ್ರಾ.ಪಂ.ನ ನೂತನ ಧ್ವಜಸ್ಥಂಭದ ಉದ್ಘಾಟನಾ ಸಮಾರಂಭವು ನಡೆದಿದ್ದು, ಈ ವೇಳೆ ಆಮಂತ್ರಣ ಪತ್ರಿಕೆಯಲ್ಲಿ ಎಂಎಲ್ಸಿ ಹರೀಶ್ ಕುಮಾರ್ ಹಾಗೂ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಯವರ ಹೆಸರನ್ನು ಮುದ್ರಿಸದೆ ಅಗೌರವ ತೋರಿರುತ್ತಾರೆ. ಇದು ಸರಕಾರದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘಣೆ ಮಾಡಲಾಗಿದೆ.
ಉದ್ಯೋಗ ಖಾತರಿಯ ವ್ಯವಹಾರದಲ್ಲಿ ನಾಮಫಲಕ ಅಳವಡಿಕೆಯಲ್ಲಿ ಭೃಷ್ಟಾಚಾರದ ಆರೋಪವಿದ್ದು, ದೂರು ನೀಡಿದ್ದರೂ ತನಿಖೆ ನಡೆಸಿ ಯಾವುದೇ ಕ್ರಮಕೈಗೊಂಡಿಲ್ಲ. ಮೂಡುಕೋಡಿ 1ನೇ ಬ್ಲಾಕಿನ ವಾರ್ಡ್ ಸಭೆಯ ಆಮಂತ್ರಣದಲ್ಲಿ 2019 ಮಾರ್ಚ್ 3 ರಂದು ಸಭೆ ನಡೆಸುವುದೆಂದು ಕರಪತ್ರ ಮುದ್ರಿಸಿ, ವಾರ್ಡ್ ಸಭೆ ನಡೆಸುವ ಮೊದಲೇ ಗ್ರಾಮಸಭೆ ನಡೆಸಿ ಪಂ.ರಾಜ್ ನಿಯಮಗಳ ಸಂಪೂರ್ಣ ಉಲ್ಲಂಘಣೆಯಾಗಿರುತ್ತದೆ. ಕೃಷಿ ಮಾರುಕಟ್ಟೆ ಕಟ್ಟಡವನ್ನು ಸ್ಟಾಲ್ಗಳಾಗಿ ವಾಣಿಜ್ಯೀಕರಣಕ್ಕೆ ಬಳಸಿ ಕೃಷಿಕರ ಹಕ್ಕುಗಳನ್ನು ಕಸಿಯಲಾಗಿದೆ. ವೇಣೂರು ಮೆಸ್ಕಾಂನಿಂದ ಆದಿಶಕ್ತಿ ಭಜನಾ ಮಂಡಳಿಯವರೆಗೆ ಚರಂಡಿ ದುರಸ್ತಿ ಕಾಮಗಾರಿಗೆ ಆಕ್ಷೇಪಣೆ ಪತ್ರ ನೀಡಿದ್ದರೂ, ಪೂರ್ಣಗೊಳಿಸದೇ ಇರುವ ಕಾಮಗಾರಿಗೆ ಬಿಲ್ ಪಾವತಿಸಿರುವುದು. ಗ್ರಾ.ಪಂ ಉಪಾಧ್ಯಕ್ಷರು ಸಾಮಾನ್ಯ ಸಭೆಯ ನಿರ್ಣಯಗಳನ್ನು ತಿರುಚಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ, ಪಂಚಾಯತ್ನ ಎಲ್ಲಾ ವ್ಯವಹಾರಗಳಲ್ಲಿ ಮೂಗು ತೂರಿಸಿ ಸದಸ್ಯರ ಹಕ್ಕುಗಳಿಗೆ ಧಕ್ಕೆ ತರುತ್ತಿರುವುದು.
ಈ ಎಲ್ಲಾ ವಿಚಾರಗಳನ್ನು ಪಿಡಿಒ ಹಾಗೂ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ನಿಡಿದ್ದು, ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದುದರಿಂದ ಆ.28 ರಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರ ಕಛೇರಿಯಲ್ಲಿ ಸಂಬಮದಪಟ್ಟವರ ಮೇಲೆ ಕ್ರಮ ಜರುಗಿಸುವರೇ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸೇರಿ ಧರಣಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇಣೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ ಗುತ್ತು, ಗೌರವಾಧ್ಯಕ್ಷ ವಿ.ಪ್ರಭಾಕರ ಹೆಗ್ಡೆ ಹಟ್ಟಾಜೆ ಗುತ್ತು, ಗ್ರಾ.ಪಂ ವೇಣೂರು ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.