ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗೋವಿಂದೂರು ಎಂಬಲ್ಲಿಂದ ಪಾಕಿಸ್ತಾನಕ್ಕೆ ರಾಡಾರ್ ಮೂಲಕ ಕರೆ ಹೋಗಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಮೌಲ್ವಿಯೊಬ್ಬರನ್ನು ಎನ್ಐಎ ತಂಡ ವಶಕ್ಕೆ ಪಡೆದಿದೆ ಎಂಬ ಸುದ್ದಿ ನಿನ್ನೆಯಿಡೀ ಸಾಮಾಜಿಕ ತಾಣಗಳು ಮತ್ತು ಕೆಲ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು.
ಆದರೆ ಆ ಆರೋಪಕ್ಕೆ ಗುರಿಯಾಗಿದ್ದ ಮೌಲ್ವಿ ರವೂಫ್ ಅವರು ನಿನ್ನೆಯೇ ಜಿಲ್ಲಾ ಪೊಲೀಸ್ ಎಸ್ಪಿ ಮತ್ತು ಕಮಿಷನರ್ ಮುಂದೆ ಹಾಜರಾಗಿ, ನನ್ನ ತೇಜೋವಧೆ ನಡೆದಿದೆ. ನಾನು ಯಾವುದೇ ಪ್ರಕರಣದಲ್ಲಿ ಆರೋಪಿಯಲ್ಲ. ಒಂದು ವೇಳೆ ನನ್ನನ್ನು ತನಿಖೆಗೆ ಒಳಪಡಿಸುವುದಾದರೆ ಎಲ್ಲದಕ್ಕೂ ಸಿದ್ಧ ಎಂದು ಹೇಳಿದರು. ಅಂತೆಯೇ ಆ. 21 ರಂದು (ಇಂದು)ಮಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಮಾಜಿ ಸಚಿವ ಯು.ಟಿ.ಖಾದರ್ ಜೊತೆ ಆಗಮಿಸಿ ತನ್ನ ತೇಜೋವಧೆ ನಡೆಸಲಾಗಿದೆ. ಈ ಬಗ್ಗೆ ಮಾಧ್ಯಮಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತನಗಾದ ಸ್ಥಿತಿ ಬಗ್ಗೆ ಕಣ್ಣೀರಿಟ್ಟರು.
ಅಸಲಿಗೆ ಈ ರವೂಫ್ ಮೂಲತಃ ಗೋವಿಂದೂರು ವಾಸಿಯಾಗಿದ್ದು, ಕಳೆದ ೧೬ ವರ್ಷಗಳಿಂದ ಮಂಜನಾಡಿಯ ಅಲ್ ಮದೀನಾದಲ್ಲಿ ಧರ್ಮಗುರುವಿನ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಇವರ ಬಂಧನವಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ. ಸ್ವತಃ ರವೂಫ್ ಹೇಳುವಂತೆ, ನಿನ್ನೆ ಸುದ್ದಿಯಾದ ತಕ್ಷಣ ಹಲವು ಠಾಣೆಗಳಿಂದ ನನಗೆ ಕರೆ ಬಂದಿದೆ. ಅಲ್ಲದೇ ಹಲವರು ಕರೆ ಮಾಡಿ ವಿಚಾರಿಸಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಈ ಬಗ್ಗೆ ಎಸ್ಪಿಗೆ ದೂರು ನೀಡಿದ್ದೇನೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.