ಬೆಳ್ತಂಗಡಿ: 1961 ರ ಬಳಿಕ ನಾಡುಕಂಡ ಭೀಕರ ಪ್ರವಾಹ ಎದುರಾಗಿದೆ. ದುರಂತಕ್ಕೆ ಕಾರಣ ಹಲವಾರು. ಆದರೆ ಮಲೆನಾಡಲ್ಲಿ ಇರುವವರು ತಾವು ಮಾಡದೆ ತಪ್ಪಿಗೆ ಹಾನಿ ಎದುರಿಸುವಂತಾಗಿದೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಅವರು ಆ. 18 ರಂದು ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವು ನೀಡಿದರು.
ಬೆಳ್ತಂಗಡಿ ಪ್ರದೇಶದಲ್ಲಿ ಸಾಕಷ್ಟು ಹಾನಿ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬೇರೆಯವರ ಮನೆಯಲ್ಲಿ ಆಶ್ರಯ ಪಡೆದು ಅವರ ಬದುಕನ್ನು ಕಂಡಾಗ ನೋವು, ದುಖಃವಾಗುತ್ತದೆ. ಇಂತಹಾ ಸಂದರ್ಭಗಳಲ್ಲಿ ಸಾಂತ್ವಾನ ಹಾಗು ಕೈಲಾದ ಮಟ್ಟದಲ್ಲಿ ಸಹಾಯ ನೀಡಬೇಕಿದೆ. ಈ ನಿಟ್ಟಿನಲ್ಲಿ ಮಠದಿಂದ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಭಕ್ತರ ಸ್ಥಿತಿ ನೋಡಿ ಹಾನಿ ತುಂಬಿಕೊಡುವ ಕೆಲಸ ಮಾಡಬೇಕಿದೆ ಎಂದು ಸ್ವಾಮೀಜಿಗಳು ಹೇಳಿದರು.
ಈ ಕಾರ್ಯದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಬೆಳ್ತಂಗಡಿ ಪುತ್ತೂರು, ಸುಳ್ಯ, ವಿಟ್ಲ ಈ ಭಾಗದ ಭಕ್ತರು ಕೈಜೋಡಿಸುವು ಅವಶ್ಯ. ಪ್ರತಿ ಜಾಗಕ್ಕೂ ಭೇಟಿ ನೀಡಿದ್ದೇವೆ. ಮುಖ್ಯವಾಗಿ ಸರಕಾರ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಆದಿಚುಂಚನಗಿರಿ ಸ್ವಾಮೀಜಿಗಳು ಹೇಳಿದರು.
ಸರಕಾರ ತಮ್ಮ ನಿರ್ಧಾರ ಪ್ರಕಟಿಸಿದೆ. ಈಗಿರುವ ಅನಾಹುತಗಳಿಗೆ ತಲುಪಬೇಕಾದ ಸವಲತ್ತು ಸರಕಾರದಿಂದ ತಲುಪುವ ಭರವಸೆ ನಮಗಿದೆ. ರಾಜ್ಯ ಸರಕಾರ ಮನೆ ಕಟ್ಟುವ ಭರವಸೆ ನೀಡಿದೆ.
ಮಕ್ಕಳಿಗೆ ಮಠದಿಂದ ಉಚಿತ ಶಿಕ್ಷಣ:
ತೊಂದರೆಗೀಡಾದ ಕುಟುಂಬದ ಮಕ್ಕಳಿಗೆ ಪೂರ್ಣ ವಿದ್ಯಾಭ್ಯಾಸ ಉಚಿತ ನೀಡಲಿದೆ. ಬಟ್ಟೆ ಬರೆ ಏನೇ ಸಮಸ್ಯೆ ಇದ್ದರು ಮಂಗಳೂರು ಶಾಖಾ ಮಠಕ್ಕೆ ಮಾಹಿತಿ ನೀಡಿದರೆ ಸಂಪೂರ್ಣವಾಗಿ ಸವಲತ್ತು ಒದಗಿಸಲಿದೆ. ತತ್ಕ್ಷಣ ಪರಿಹಾರಕ್ಕಾಗಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರದಂತೆ ಒದಗಿಸಿದ್ದೇವೆ, ಮುಂದೆ ತಹಶಿಲ್ದಾರರಿಂದ ಮಾಹಿತಿ ಪಡೆದು ಉಳಿದವರಿಗೂ ನೆರವು ನೀಡಲಾಗುವುದು. ನಾವು ಆಯಾಯ ಭಾಗಕ್ಕೆ ವಾಸ್ತವಕ್ಕೆ ಗೋಚರವಾದಂತೆ ಅಲ್ಲೆಲ್ಲ ಆರ್ಥಿಕ ಸಹಾಯ ಒದಗಿಸಿದ್ದೇವೆ ಎಂದರು. ಈ ಸಂದರ್ಭ ಕಾವೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಜತೆಗಿದ್ದರು.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ 2 ಲಕ್ಷ ರೂ. ದೇಣಿಗೆ
ಇದೇ ಸುಳ್ಯ ಗೌಡರ ಯುವ ಸೇವಾ ಸಂಘದ ಪ್ರವರ್ತಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ವತಿಯಿಂದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 2 ಲಕ್ಷ ರೂ. ಗಳ ದೇಣಿಗೆಯನ್ನು ಸ್ವಾಮೀಜಿಯವರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ಗಂಗಾಧರ ಗೌಡ, ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯಗೌಡ, ನಿತ್ಯಾನಂದ ಮುಂಡೋಡಿ ಸುಳ್ಯ, ಧನಂಜಯ ಅಡ್ಪಂಗಾಯ ಬೆಳ್ತಂಗಡಿ, ತಾ| ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್, ತಾ. ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಸೋಮೇಗೌಡ, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಕಾಲಭೈರವೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸಾಯಿಟಿ ಅಧ್ಯಕ್ಷ ರಂಜನ್ ಜಿ ಗೌಡ, ವಾಣಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹೆಚ್ ಪದ್ಮಗೌಡ ಬೆಳಾಲು, ಪ್ರಮುಖರಾದ ಮೋಹನ್ರಾಮ್ ಸುಳ್ಯ, ಚಿದಾನಂದ ಪುತ್ತೂರು, ಮೋಹನ ಗೌಡ ಕಾಯರ್ಮಾರ್ ಬಂಟ್ವಾಳ, ತಮ್ಮಯ್ಯ ಗೌಡ ಕಡಬ, ಪುಂಡರೀಕ ಆರಂಬೂರು ಮಂಗಳೂರು, ಎನ್ ಲಕ್ಷ್ಮಣ ಗೌಡ ಬಂಗಾಡಿ, ಭರತ್ಕುಮಾರ್ ಬಂಗಾಡಿ, ಎಂ ತುಂಗಪ್ಪ ಗೌಡ ಉಜಿರೆ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ದಿನೇಶ್ ಗೌಡ ಕುಲೆಂಜಿಲೋಡಿ, ಪಟ್ಟಣ ಪಂಚಾಯತ ಸದಸ್ಯ ಜಯಾನಂದ ಗೌಡ ಬೆಳ್ತಂಗಡಿ, ತಾ.ಪಂ ಸದಸ್ಯ ಪ್ರವೀಣ್ ಗೌಡ, ದಾಮೋಧರ ಗೌಡ ಸುರುಳಿ, ತಾ. ಕಾಲಭೈರವೇಶ್ವರ ಯುವ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಸುಧಾಕರ ಗೌಡ ಧರ್ಮಸ್ಥಳ, ನ್ಯಾಯವಾದಿ ಗೋಪಾಲಕೃಷ್ಣ ಗೌಡ, ಗೌಡರ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ಎನ್ ಗೌಡ, ಪ್ರಭಾಕರ ಗೌಡ ಪೊಸೊಂದೋಡಿ, ಕಿಶೋರ್ ಕುಮಾರ್ ವಳಂಬ್ರ, ಬಾಲಕೃಷ್ಣ ಬಿರ್ಮೊಟ್ಟು, ಪ್ರಸಾದ್ ಗೌಡ ವಳಂಬ್ರ, ಮೊದಲಾದವರು ಉಪಸ್ಥಿತರಿದ್ದರು.