ಖಾಸಗಿ ಉದ್ಯಮಿಗಳ ನೇತೃತ್ವದಲ್ಲಿ ಕೊಳಂಬೆ ನವನಿರ್ಮಾಣ ಆರಂಭ

ಮಳೆನಿಂತು ಹೋದ ಮೇಲೆ….

ಉಜಿರೆ: ಉಜಿರೆ ಲಕ್ಷ್ಮೀ ಗ್ರೂಪ್ಸ್, ಉಜಿರೆ ಸಂಧ್ಯಾ ಟ್ರೆಡರ್‍ಸ್ ಹಾಗೂ ಖಾಸಗಿ ಉದ್ಯಮಿಗಳ ನೇತೃತ್ವದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಭಾಗಿತ್ವದಲಿ, 330ಸ್ವಯಂ ಸೇವಕರ ಸಹಕಾರದಲ್ಲಿ ಪ್ರವಾಹಪೀಡಿತ ಚಾರ್ಮಾಡಿ ಗ್ರಾಮದ ಕೊಳಂಬೆ ಪರಿಸರದ ಪುನರ್‌ನಿರ್ಮಾಣ ಕಾರ್ಯ ಇಂದು(ಆ.15)ಜರುಗಿತು.


ಉದ್ಯಮಿ, ಗುರುವಾಯನಕೆರೆ ನವಶಕ್ತಿ ಹಾರ್ಡ್‌ವೇರ್‍ಸ್ ಮಾಲಕ ರಾಜೇಶ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಕರ ಸೇವಾಯೋಜನೆಯ ಪರಿಕಲ್ಪನೆ ಮಾಡಿರುವ ಉಜಿರೆ ಲಕ್ಷ್ಮೀ ಗ್ರೂಪ್ಸ್‌ನ ಮಾಲಕ ಮೋಹನ್ ಕುಮಾರ್, ಉಜಿರೆ ಸಂಧ್ಯಾ ಗ್ರೂಪ್ಸ್‌ನ ಮಾಲಕ ರಾಜೇಶ ಪೈ, ಉಜಿರೆ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಉದ್ಯಮಿ ರಾಘವೇಂದ್ರ ಬೈಪಾಡಿತ್ತಾಯ, ದುರ್ಗಾ ಟೆಕ್ಸ್‌ಟೈಲ್ಸ್ ಮಾಲಕ ಮೋಹನ ಚೌದರಿ, ಆರ್.ಎಂ ಅರ್ಥ್ ಮೂವರ್‍ಸ್‌ನ ರವಿ ಚಕ್ಕಿತ್ತಾಯ, ಕೃಷಿಕ ಪ್ರಕಾಶ ಗೌಡ, ಜಯಪ್ರಕಾಶ್ ಶೆಟ್ಟಿ ಉಜಿರೆ, ಅರವಿಂದ ಕಾರಂತ್, ಕೆ.ವಿ ಶ್ರೀಧರ ರಾವ್, ತಾ.ಪಂ ಸದಸ್ಯ ಶಶಿಧರ ಎಂ ಕಲ್ಮಂಜ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಈ ಸಂದರ್ಭಲ್ಲಿ 350ಕ್ಕೂ ಹೆಚ್ಚು ಸ್ವಯಂಸೇವಾ ಕಾರ್ಯಕರ್ತರು ಪ್ರವಾಹ ಪೀಡಿತ ಚಾರ್ಮಾಡಿ ಗ್ರಾಮದ ಕೊಳಂಬೆ ಪ್ರದೇಶದಲ್ಲಿ ಮನೆ, ತೋಟ, ಗದ್ದೆಗಳ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಜೆಸಿಬಿಗಳು, ಹಿಟಾಚಿಗಳು, ಸುಮಾರು ನೂರರಷ್ಟು ಹೊಸ ಹಾರೆಗಳು, 250ಕ್ಕೂ ಹೆಚ್ಚು ಪ್ಲ್ಲಾಸ್ಟಿಕ್ ಬುಟ್ಟಿ, 150ಕ್ಕೂ ಹೆಚ್ಚು ಫೈಬರ್ ಬಕೆಟ್ಸ್, ಮೊದಲಾದ ಪರಿಕರಗಳೊಂದಿಗೆ, ಕಾರ್ಯಾಚರಣೆ ಪ್ರಾರಂಭಿಸಿದರು. ಮೊದಲ ಹಂತದಲ್ಲಿ ವಾಸದ ಮನೆಗಳ ಸ್ವಚ್ಛತೆ ಆರಂಭಿಸಿದರು.2 ಹೊಸ ಪಂಪುಗಳ ಮೂಲಕ ಜನರೇಟರ್ ಅಳವಡಿಸಿ ನೀರೆತ್ತುವ ಮೂಲಕ ಮನೆ ಮತ್ತು ಅಂಗಳಗಳ ಸ್ವಚ್ಛತೆ ಕೈಗೊಂಡರು.


10 ತಂಡಗಳಾಗಿ ವಿಂಗಡಿಸಿ ಗದ್ದೆ, ತೋಟಗಳ ಮರಳು ತೆಗೆಯುವುದು, ಯಂತ್ರಗಳ ಮೂಲಕ ಮುರಿದು ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ಸಮಾರೋಪಾದಿಯಲ್ಲಿ ಪ್ರಾರಂಭಿಸಿದರು. ಮುಂದೆ ಪ್ರತೀ ಆದಿತ್ಯವಾರ ಈ ಸ್ವಯಂ ಸೇವಾತಂಡ ಸದ್ರಿ ಸ್ಥಳಗಳಲ್ಲಿ, ಸಂಪೂರ್ಣ ಪುನರ್ನಿರ್ಮಾಣ ಕೆಲಸಗಳಲ್ಲಿ ಭಾಗಿಯಾಗುವುದಾಗಿ ಪ್ರಕಟಿಸಲಾಯಿತು.


ಸುಮಾರು 60ಕ್ಕೂ ಅಧಿಕ ಖಾಸಗಿ ಉದ್ಯಮಿಗಳ ಧನಸಹಕಾರದೊಂದಿಗೆ, ನಾಶವಾಗಿ ಹೋಗಿರುವ ತೋಟಗಳ ಸ್ವಚ್ಛತೆ ಮತ್ತು ನಿರ್ಮಾಣ, ಜಾನುವಾರು ಕಳೆದುಕೊಂಡಿರುವವರಿಗೆ ಹೊಸ ಜಾನುವಾರು, ಗದ್ದೆ ಸ್ವಚ್ಛಗೊಳಿಸಿ ಉತ್ತು, ಬಿತ್ತಿ ಮತ್ತೆ ಗದ್ದೆ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದರು.


ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ತಾ.ಪಂ ಮಾಜಿ ಸದಸ್ಯೆ ಮಂಜುಳಾ ಕಾರಂತ್, ದಯಾಕರ್ ಗೌಡ ಕೊಳಂಬೆ, ನಾರಾಯಣ ಗೌಡ ಕೊಳಂಬೆ ಮತ್ತಿತರ ಪ್ರಮುಖರು ಭೇಟಿ ನೀಡಿದರು. ಸ್ಥಳದಲ್ಲಿ ವೀಕ್ಷಣೆಗೆ ತಾಲೂಕಿನ ವಿವಿಧ ಮೂಲೆಗಳಿಂದ ಸಾವಿರಕ್ಕೂ ಮಿಕ್ಕಿ ಜನಸೇರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.