ಬೆಳ್ತಂಗಡಿ: ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಗೆ ಇಡೀ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ವ್ಯಾಪಕವಾಗಿ ಅತೀ ಹೆಚ್ಚು ಕೃಷಿ, ಸೊತ್ತುಗಳಿಗೆಹಾನಿಯಾಗಿದೆ. ಮೂನ್ನೂರಕ್ಕೂ ಹೆಚ್ಚು ಮನೆಗಳು ಕುಸಿದು ಹೋಗಿದೆ. ಸೇತುವೆ, ರಸ್ತೆಗಳು ಕೊಚ್ಚಿ ಹೋಗಿದೆ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ರಾಜ್ಯ ಸರಕಾರ ಈ ಹಿಂದಿನ ಮೈತ್ರಿ ಸರಕಾರ ಕೊಡುಗು ಜಿಲ್ಲೆಗೆ ನೀಡಿದ ಪರಿಹಾರದಂತೆ ನೆರೆಪೀಡಿತ ಸಂತ್ರಸ್ತರಿಗೆ ಕೊಡಗು ಮಾದರಿಯಲ್ಲಿ ಪರಿಹಾರವನ್ನು ಒದಗಿಸುವಂತೆ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕರುಗಳಾದ ಹರೀಶ್ ಕುಮಾರ್ ಹಾಗೂ ಐವಾನ್ ಡಿ’ ಸೋಜ ಆಗ್ರಹಿಸಿದರು.
ಅವರು ಆ.12ರಂದು ಬೆಳ್ತಂಗಡಿ ಪ್ರೆಸ್ಕ್ಲಬ್ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ತಾಲೂಕಿನ ಚರಿತ್ರೆಯಲ್ಲೇ ಇಷ್ಟು ಮಳೆ ಬಂದಿಲ್ಲ. ಚಾರ್ಮಾಡಿ, ಕಿಲ್ಲೂರು, ಮಲವಂತಿಗೆ, ನೆರಿಯ, ಶಿಶಿಲ ಸೇರಿದಂತೆ ತಾಲೂಕಿನ ಆನೇಕ ಕಡೆಗಳಲ್ಲಿ ವ್ಯಾಪಕವಾಗಿ ಹಾನಿಯಾಗಿದೆ. ಉಟ್ಟ ಬಟ್ಟೆಯಲ್ಲೇ ಜನರು ತಮ್ಮ ಮನೆಗಳನ್ನು ತೊರೆದು ಬಂದಿದ್ದಾರೆ. ಅವರಿಗೆ ಗಂಜಿಕೇಂದ್ರ ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಜೂರು ಮಸೀದಿಯವರು ಸ್ಥಳೀಯ ಶಾಲೆಯಲ್ಲಿ 100ಮಂದಿಗೆ ಆಶ್ರಯ ಒದಗಿಸಿದ್ದಾರೆ. ಅಗರಿಮಾರಿನವರು ೮೦ ಮಂದಿಗೆ ಆಶ್ರಯ ನೀಡಿದ್ದಾರೆ. ಅವರಿಗೆ ಸರಕಾರದಿಂದ ಯಾವುದೇ ವ್ಯವಸ್ಥೆ ಆಗಿಲ್ಲ ಇದನ್ನು ತಹಶೀಲ್ದಾರರ ಗಮನಕ್ಕೆ ತಂದಿದ್ದೇನೆ ಎಂದರು.
ಕುಕ್ಕಾವು, ಚಾರ್ಮಾಡಿ, ಬಾಂಜಾರು, ಶಿಶಿಲ, ಅನಾರು ಸೇರಿದಂತೆ ಐದು ಸೇತುವೆಗಳಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಮೊಗ್ರುನಲ್ಲಿ ತೂಗು ಸೇತುವೆ ಕೊಚ್ಚಿ ಹೋದರೆ, ಶಿಶಿಲದಲ್ಲಿ ಹಾನಿಯಾಗಿದೆ. ತಾಲೂಕಿನ 242 ಕಡೆಗಳಲ್ಲಿ ಈ ರೀತಿಯಾಗಿದೆ 712 ಮಂದಿ ಗಂಜಿ ಕೇಂದ್ರದಲ್ಲಿದ್ದಾರೆ. ಆನೇಕ ಮಂದಿ ದನ, ಕರು. ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಕೃಷಿ, ಮನೆ ಸೊತ್ತುಗಳು ಸಂಪೂರ್ಣ ನಾಶವಾಗಿದೆ. ಸರಕಾರ ಕೂಡಲೇ ಜಿಲ್ಲೆಗೆ ವಿಶೇಷ ಪ್ಯಾಕೇಜನ್ನು ಘೋಷಿಸಬೇಕು. ಸಮ್ಮಿಶ್ರ ಸರಕಾರಿ ಕೊಡಗಿಗೆ ಕೊಟ್ಟ ಹಾಗೆ ವಿಶೇಷ ಪರಿಹಾರವನ್ನು ನೀಡಬೇಕು. ಮನೆ ನಿರ್ಮಾಣಕ್ಕೆ ರೂ.10 ಲಕ್ಷ, ಮನೆ ಕಳೆದು ಕೊಂಡವರಿಗೆ ತಿಂಗಳಿಗೆ ಬಾಡಿಗೆ ನೀಡಲು ರೂ.10ಸಾವಿರ, ಜಾಗ ಕಳೆದು ಕೊಂಡವರಿಗೆ ಮನೆ ನಿವೇಶನ ನೀಡುವಂತೆ ಬಂಗೇರ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಉಪಸ್ಥಿತರಿದ್ದರು.