ಬೆಳ್ತಂಗಡಿ: ಕರ್ನಾಟಕ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪರವರು ತಾಲೂಕಿನ ಪ್ರವಾಹಪೀಡಿತ ಕುಕ್ಕಾವು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹದಿಂದಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 275 ಕುಟುಂಬಗಳು ಮನೆಕಳೆದು ಕೊಂಡಿದ್ದು, ಸಂಪೂರ್ಣವಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಲಾ ಒಂದು ಮನೆಗೆ ರೂ.5ಲಕ್ಷ ದಂತೆ, ಒಟ್ಟು 321 ಮನೆಗಳು ಹಾನಿಗೊಂಡಿದ್ದು,ಮನೆ ದುರಸ್ಥಿಗೆ ತಲಾ ಒಂದು ಮನೆಗೆ ರೂ.1ಲಕ್ಷದಂತೆ ರಾಜ್ಯಸರ್ಕಾರದಿಂದ ಪರಿಹಾರನಿಧಿ ನೀಡುವುದಾಗಿ ಘೋಷಿಸಿದರು.ಅಲ್ಲದೆ ನೂತನಗೃಹ ನಿರ್ಮಾಣದ ಕಾಮಗಾರಿ ಪೂರ್ತಿಗೊಳ್ಳುವವರೆಗೆ ನಿರಾಶ್ರಿತರಿಗೆ ಬಾಡಿಗೆ ನೆಲೆಯಲ್ಲಿ ವಾಸಿಸಲು ತಿಂಗಳಿಗೆ ರೂ.5,000 ಸಹಾಯಧನ ನೀಡುವುದಾಗಿ ತಿಳಿಸಿದರು. ನಂತರ ಕೋಡಿಯಾಲಬೈಲು ಶಾಲೆಯ ಸಂತ್ರಸ್ಥರ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರಿಂದ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಹರೀಶ್ ಕುಮಾರ್, ಐವನ್ ಡಿಸೋಜಾ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ,ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್ , ದ.ಕ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಪುತ್ತೂರು ಸಹಾಯಕ ಕಮಿಷನರ್ ಹೆಚ್.ಕೆ ಕೃಷ್ಣಮೂರ್ತಿ, ಬೆಳ್ತಂಗಡಿ ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ , ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.