ಉಜಿರೆಯಲ್ಲಿ ಬೃಹತ್ ಪುಸ್ತಕ ಮೇಳ

ಉಜಿರೆ: ಪುಸ್ತಕ ಪ್ರೀತಿಯೊಂದಿಗೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಮನೆಯಲ್ಲಿಯೂ ಸಣ್ಣ ಗ್ರಂಥಾಲಯವಿರಬೇಕು ಎಂದು ಹಿರಿಯ ಸಾಹಿತಿ ಪ.ರಾ.ಶಾಸ್ತ್ರಿ ಮಚ್ಚಿನ ಹೇಳಿದರು.
ಅವರು ಆ.8ರಂದು  ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಬೃಹತ್ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.


ಎಲ್ಲರೂ ಪುಸ್ತಕಗಳನ್ನು ಕೊಂಡು ಓದಬೇಕು. ದೇಶದಲ್ಲಿ ಒಂಬತ್ತು ಸಾವಿರ ಪ್ರಕಾಶಕರು ಇದ್ದಾರೆ. ಎಲ್ಲರೂ ಪುಸ್ತಕ ಸಂಗ್ರಹ ಮಾಡಿ ಓದುವ ಹವ್ಯಾಸ ಬೆಳೆಸಿಕೊಂಡು ಪ್ರಕಾಶಕರನ್ನೂ, ಲೇಖಕರನ್ನೂ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳ ಜ್ಞಾನ ಪಠ್ಯಕ್ಕೆ ಮಾತ್ರ ಸೀಮಿತವಾಗಬಾರದು. ಹೆಚ್ಚು ಓದಿದರೆ ಜ್ಞಾನ ಕ್ಷಿತಿಜ ವಿಸ್ತಾರವಾಗುತ್ತದೆ ಎಂದು ಅವರು ಹೇಳಿದರು.
ಮನೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡುವುದು ಕಷ್ಟದ ಕಾಯಕವಾಗಿದ್ದು ತಾನು ಸಂಗ್ರಹಿಸಿದ ಎರಡು ಸಾವಿರ ಪುಸ್ತಕಗಳನ್ನು ಮಡಂತ್ಯಾರು ಗ್ರಾಮ ಪಂಚಾಯಿತಿಗೆ ಕೊಡುಗೆಯಾಗಿ ನೀಡಿರುವುದಾಗಿ ಅವರು ತಿಳಿಸಿದರು.


ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ನಿರಂತರ ಓದು ನಮ್ಮಲ್ಲಿ ಸೃಜನಾತ್ಮಕ ಚಿಂತನ-ಮಂಥನಕ್ಕೆ ಪ್ರೇರಣೆ ನೀಡುತ್ತದೆ. ಪುಸ್ತಕಗಳನ್ನು ಓದುವುದು ಅಕ್ಷಯ ಜ್ಞಾನ ಸಂಪಾದನೆಯ ಪ್ರಬಲ ಮಾಧ್ಯಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಶುಭಾಶಂಸನೆ ಮಾಡಿದರು.


ಕನ್ನಡ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾಲ್ಲೂಕು ಘಟಕದ ಕಾರ್ಯದರ್ಶಿ ಆಶ್ರಫ್ ಆಲಿಕುಂಞ ಉಪಸ್ಥಿತರಿದ್ದರು. ಡಾ. ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ರಾಮಕೃಷ್ಣ ಭಟ್ ಬೆಳಾಲು ಧನ್ಯವಾದವಿತ್ತರು. ಪೃಧ್ವೀಶ್ ಕಾರ್ಯಕ್ರಮ ನಿರ್ವಹಿಸಿದರು.
ಗುರುವಾರ, ಶುಕ್ರವಾರ ಮತ್ತು ಶನಿವಾರ ಪ್ರತಿ ದಿನ ಬೆಳಿಗ್ಗೆ ಗಂಟೆ ಒಂಬತ್ತರಿಂದ ಸಂಜೆ ಐದರ ವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.