ಬೆಳ್ತಂಗಡಿ: ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದು, ಭಾರತವನ್ನು ಪರಿಪೂರ್ಣ ಗಣರಾಜ್ಯಾವನ್ನಾಗಿಸಿದೆ. ಇಂತಹ ಐತಿಹಾಸಿಕ ಕ್ಷಣಕ್ಕೆ ಇಡೀ ರಾಷ್ಟ್ರವೇ ಕಳೆದ ಏಳು ದಶಕಗಳಿಂದ ಕಾತರಿಸುತ್ತಿದ್ದು, ದೇಶದ ಸಮಗ್ರತೆ ಹಾಗೂ ಏಕತೆಗೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಈ ತೀರ್ಮಾನ ಸ್ವಾಗತಾರ್ಹ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ.
75 ವರ್ಷಗಳ ಹಿಂದೆ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಅಮೇರಿಕಾದ ಅಣು ದಾಳಿಯಿಂದ ಇಡೀ ಮನುಕುಲವೇ ಸಂಕಷ್ಟಕ್ಕೆ ಒಳಗಾಗಿ ವಿನಾಶದ ಅಂಚಿಗೆ ಬಂದಿತ್ತು ಆದರೆ ಇಂದಿನ ಕೇಂದ್ರ ಸರಕಾರದ ಈ ನಿರ್ಧಾರದಿಂದ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಾಶವಾಗಿ, ನಾಡು ಸುಭೀಕ್ಷೆಗೊಳ್ಳಲಿದೆ. ಇಂದಿನ ಐತಿಹಾಸಿಕ ಕ್ರಮದಿಂದ ಕಾಶ್ಮೀರದ ಉಳಿವಿಗಾಗಿ ಬಲಿದಾನಗೈದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಆಶಯ ಈಡೇರಿದೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಕಲ್ಪನೆ ಅಕ್ಷರಶಃ ನಿಜವಾಗಿದೆ. ಮಂದಿನ ದಿನಗಳಲ್ಲಾದರೂ ವಿರೋಧಿಸುವ ವಿಪಕ್ಷಗಳು ಹಾಗೂ ಸ್ವಘೋಷಿತ ಬುದ್ಧಿಜೀವಿಗಳು ಪ್ರಧಾನಮಂತ್ರಿಯವರ ಈ ಸತ್ಕಾರ್ಯದಲ್ಲಿ ಸಹಕರಿಸಿ, ಕಾಶ್ಮೀರದ ಐತಿಹಾಸಿಕ ಗತವೈಭವವನ್ನು ಮರಳಿ ಸ್ಥಾಪಿಸುವಲ್ಲಿ ನೆರವಾಗಲಿ ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.