ಉಜಿರೆ: ಆಸರೆ ಉದ್ಯಮಿಗಳ ಸಮಾವೇಶ

ಉಜಿರೆ: ಧೈರ್ಯ ಮತ್ತು ವಿಶ್ವಾಸವಿದ್ದಲ್ಲಿ ಯಶಸ್ವಿ ಉದ್ಯಮಿಗಳಾಗಬಹುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಆ.4 ರಂದು ಉಜಿರೆಯಲ್ಲಿ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ರುಡ್‌ಸೆಟ್ ಯಶಸ್ವೀ ಉದ್ಯಮಿಗಳ ಸಂಘ ಆಸರೆ ಆಶ್ರಯದಲ್ಲಿ ಆಯೋಜಿಸಿದ ಉದ್ಯಮಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾವಂತ ಯುವಜನತೆಗೆ ನೌಕರಿ ಸಿಗುವುದು ಕಷ್ಟ ಸಾಧ್ಯ. ಆದುದರಿಂದ ಕಠಿಣ ಪರಿಶ್ರಮದೊಂದಿಗೆ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದು. ತನ್ಮೂಲಕ ಯುವಜನತೆ ಸಾಮಾಜಿಕ ಪರಿವರ್ತನೆಯ ರೂವಾರಿಗಳಾಗಬೇಕು. ಈ ದಿಸೆಯಲ್ಲಿ ರುಡ್‌ಸೆಟ್ ಸಂಸ್ಥೆ ನೀಡುತ್ತಿರುವ ತರಬೇತಿ ಮತ್ತು ಮಾರ್ಗದರ್ಶನ ಶ್ಲಾಘನೀಯವಾಗಿದೆ ಎಂದು ಹೇಳಿ ಅವರು ಅಭಿನಂದಿಸಿದರು.


ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ, ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಧೃತಿಗೆಡದೆ ಧೈರ್ಯದಿಂದ ಎದುರಿಸಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ರುಡ್‌ಸೆಟ್ ಸಂಸ್ಥೆ ಇಂದು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದುವ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಗುರುವಾಯನಕೆರೆ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ್ ಮತ್ತು ಆಸರೆ ಸಂಘಟನೆಯ ಸಕ್ರಿಯ ಕಾರ್ಯಕರ್ತ ಗೋಪಾಲಕೃಷ್ಣ ಅವರನ್ನು ಗೌರವಿಸಲಾಯಿತು.
ಸಿಂಡಿಕೇಟ್ ಬ್ಯಾಂಕಿನ ಪ್ರಾಂತೀಯ ಪ್ರಬಂಧಕ ಆರ್. ರಾಘವೇಂದ್ರ, ಮತ್ತು ಪುತ್ತೂರು ಶಾಖಾ ಪ್ರಬಂಧಕ ಕುಮಾರ್, ರುಡ್‌ಸೆಟ್‌ನ ಹಿರಿಯ ಉಪನ್ಯಾಸಕರಾದ ಜೇಮ್ಸ್ ಅಬ್ರಾಹಂ ಮತ್ತು ಅನಸೂಯ, ಸುನಿಲ್ ರೈ ಬೆಳ್ಳಾರೆ ಉಪಸ್ಥಿತರಿದ್ದರು.
ಆಸರೆ ಅಧ್ಯಕ್ಷ ವೆಂಕಟ್ರಮಣ ಪುಣಚ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಕುದ್ಯಾಡಿ ಧನ್ಯವಾದವಿತ್ತರು. ಕಡಬದ ನಾಗರಾಜ, ಎನ್.ಕೆ. ಮತ್ತು ಪ್ರಶಾಂತ್ ಲಾಲ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.