HomePage_Banner_
HomePage_Banner_

ಸೊಳ್ಳೆಗಳ ಉತ್ಪತ್ತಿಯ ತಾಣ: ಬೆಳ್ತಂಗಡಿ ಸಂತೆ ಮಾರುಕಟ್ಟೆ ಪ್ರಾಂಗಣ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತಿಗೆ ಒಳಪಟ್ಟ ಇಲ್ಲಿಯ ಸಂತೆಮಾರುಕಟ್ಟೆ ಯಾವುದೇ ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡಿದ್ದು, ನಾಗರಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.
ಬೆಳ್ತಂಗಡಿ ನಗರದ ಮಧ್ಯಭಾಗದಲ್ಲಿರುವ ದಿನವಹಿ ಹಾಗೂ ವಾರದ ಸಂತೆ ನಡೆಯುವ ಈ ಮಾರುಕಟ್ಟೆ ಪ್ರದೇಶದಲ್ಲಿ ಕೊಳಚೆ ನೀರು ಮತ್ತು ಅಲ್ಲಲ್ಲಿ ತ್ಯಾಜ್ಯ ನಿಂತು ಡೆಂಗ್ಯೂ, ಮಲೇರಿಯದಂತಹ ಮಾರಕ ಕಾಯಿಲೆಗಳನ್ನು ಹರಡುವ ಸೊಳ್ಳೆಗಳನ್ನು ಉತ್ಪಾದಿಸಿ, ಇತರ ಕಡೆಗಳಿಗೆ ಹರಡುವ ಕೇಂದ್ರವಾಗಿ ಪರಿವರ್ತನೆಯಾಗಿದೆ.
ಮಾರುಕಟ್ಟೆಯ ಶೌಚಾಲಯದ ಸುತ್ತಮುತ್ತ ಕೊಳಚೆ ತುಂಬಿದೆ. ಮಾಂಸ ಮಾರಾಟ ಕೇಂದ್ರದ ಪರಿಸರ ಹಾಗೂ ಇತರ ಕಡೆಗಳಲ್ಲಿ ಅಲ್ಲಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಮಾಂಸದ ಅಂಗಡಿ ಬಳಿ ಇರುವ ಪಿಟ್ ಮತ್ತು ಇಲ್ಲಿಯ ಹೊಟೇಲ್‌ನ ಹಿಂಭಾಗದ ಪಿಟ್ ತುಂಬಿ ಹೋಗಿದ್ದು, ಇದರ ನೀರು ಸಮೀಪದ ಅಂಗಡಿಗಳ ಮುಂಭಾದಲ್ಲೇ ಹರಿದು ಹೋಗುತ್ತಿದೆ.


ಸಂತೆ ದಿನ ತಾಲೂಕಿನಾದ್ಯಂತ ದಿಂದ ಜನರು ತರಕಾರಿ ಹಾಗೂ ಇತರ ದಿನಬಳಕೆ ವಸ್ತುಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಾರೆ. ಸಂತೆಮಾರುಕಟ್ಟೆಯ ಒಳಗೆ ಬರುವ ಮತ್ತು ಹೊರ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ ಆದರೆ ಇದನ್ನು ದುರಸ್ತಿ ಪಡಿಸಿಲ್ಲ. ತರಕಾರಿ ಸೇರಿದಂತೆ ಇತರ ವಸ್ತುಗಳನ್ನು ವ್ಯಾಪಾರಿಗಳು ನೆಲಕ್ಕೆ ಟರ್ಪಾಲು, ಗೋಣಿ ಚೀಲ ಹಾಕಿ ಮಾರಾಟ ಮಾಡುತ್ತಾರೆ. ಒಂದೆಡೆ ತ್ಯಾಜ್ಯ ನೀರು ನಿಂತು ದುರ್ವಾಸೆ ಬೀರುತ್ತಿದ್ದರೆ, ಇದರ ನಡುವೆಯೇ ಸಂತೆ ವ್ಯಾಪಾರ ನಡೆಯುತ್ತಿದೆ. ಇಲ್ಲಿಗೆ ಬರುವ ಜನರಿಗೆ, ವ್ಯಾಪಾರಿಗಳಿಗೆ ಇದು ಈಗ ಮಾಮೂಲಿ ಎಂಬಂತಾಗಿದೆ.
ಜಿಲ್ಲೆಯಲ್ಲಿ ವ್ಯಾಪಕ ಡೆಂಗ್ಯೂ ಕಾಯಿಲೆ ಹಬ್ಬುತ್ತಿದ್ದು, ಜಿಲ್ಲಾಡಳಿತ ಇದರ ವಿರುದ್ಧ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಬೆಳ್ತಂಗಡಿ ನಗರ ಪಂಚಾಯತು ಮಾತ್ರ ಇವುಗಳನ್ನೆಲ್ಲ ನಿರ್ಲಕ್ಷಿಸಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಪಂಚಾಯತು ಆಡಳಿತ ಮಂಡಳಿ ಸದಸ್ಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯತಕ್ಕೆ ಚುನಾಯಿತ ಆಡಳಿತ ಮಂಡಳಿಯ ಆಯ್ಕೆ ನಡೆದಿದ್ದರೂ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗದಿ ರುವುದರಿಂದ ಎಲ್ಲವೂ ಅಧಿಕಾರಿಗಳ ಹಿಡಿತದಲ್ಲೇ ನಡೆಯುತ್ತಿರುವುದು ಈ ಅವ್ಯವಸ್ಥೆಗಳಿಗೆ ಕಾರಣವಾಗಿದೆ. 14ನೇ ಹಣಕಾಸು ಯೋಜನೆಯಲ್ಲಿ ಸುಮಾರು 77 ಲಕ್ಷ ಅನುದಾನ ಬಂದರೂ ಇದರ ಸಮರ್ಪಕ ನಿರ್ವಹಣೆಯಾಗಿಲ್ಲ ಎಂಬ ಆರೋಪಗಳಿವೆ. ಇನ್ನಾದರೂ ಇದರ ಬಗ್ಗೆ ಪಂಚಾಯತು ಅಧಿಕಾರಿಗಳು ಗಮನ ಹರಿಸಿ, ತಾಲೂಕು ಕೇಂದ್ರದ ಸಂತೆಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.