HomePage_Banner_
HomePage_Banner_
HomePage_Banner_

ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡ ಹೆಂಡೇಲು ಆದಿವಾಸಿ ಮಲೆಕುಡಿಯ ಸಮುದಾಯ

ಅದೊಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಊರು. ಹೆಸರು ಹೆಂಡೇಲು. ಇಲ್ಲಿ ಎಲ್ಲವೂ ಇಲ್ಲಗಳೇ. ರಸ್ತೆನೂ ಇಲ್ಲ , ಕರೆಂಟೂ ಇಲ್ಲ. ಸೇತುವೆ , ಮೋರಿಗಳೂ ಇಲ್ಲ. ಜನಪ್ರತಿನಿಧಿಗಳಿಗಂತೂ ಈ ಊರಿನ ಪರಿಚಯನೂ ಇಲ್ಲ. ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಪ್ರಯೋಜನವಂತೂ ಇಲ್ಲವೇ ಇಲ್ಲ.
ಇಂತಹ ವಿಚಿತ್ರ ಪ್ರದೇಶ ಇರುವುದು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ. ಆದಿವಾಸಿ ಮಲೆಕುಡಿಯ ಸಮುದಾಯ ವಾಸಿಸುವ ಪ್ರದೇಶ ಶತಮಾನಗಳಿಂದ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿ ಸುಮಾರು ನೂರೈವತ್ತು ವರ್ಷಗಳಿಗೂ ಮೊದಲೇ ವಾಸಿಸುತ್ತಿದ್ದರು. ಶತಮಾನಗಳಿಂದ ಇವರು ಇಲ್ಲಿರುವ ಬಗ್ಗೆ ಇವರ ಜಮೀನಿನ ದಾಖಲೆಗಳು ಸಾಕ್ಷಿ ನುಡಿಯುತ್ತದೆ. ಮತದಾರರ ಚೀಟಿ , ಪಡಿತರ ಚೀಟಿ , ಆಧಾರ್ ಕಾರ್ಡ್ ಇದ್ದರೂ , ರಸ್ತೆ, ವಿದ್ಯುತ್ ಮಾತ್ರ ಇವರ ಪಾಲಿಗೆ ದೂರದ ಮಾತಗಿದೆ.
ಇಲ್ಲಿರುವುದು ಕೇವಲ 9 ಮಲೆಕುಡಿಯ ಕುಟುಂಬಗಳು. ಸುತ್ತಲೂ ದಟ್ಟ ಅರಣ್ಯವಾದರೂ ಕಂಗು-ತೆಂಗಿನ ತೋಟ , ಗದ್ದೆಗಳೂ ಇದೆ. ರಸ್ತೆ, ವಿದ್ಯುತ್ ಇದ್ದರೆ ಇವರದು ಸಂತೃಪ್ತ ಜೀವನ. ಶಿರ್ಲಾಲು ಗ್ರಾಮ ಪಂಚಾಯತ್‌ನಿಂದ ಕೇವಲ ಆರೇಳು ಕಿಮೀ ದೂರದಲ್ಲಿದೆ ಈ ತಂಪಾದ ಊರು.

ಇಲ್ಲಿನ ರಸ್ತೆ ಕಲ್ಲು, ಕೆಸರು ಮಣ್ಣು, ಮರದ ಬೇರುಗಳಿಂದ ಕಂಗೊಳಿಸುತ್ತಿದೆ. ಮನೆಗಳೆಲ್ಲವೂ ಚಿಮಿಣಿ ದೀಪಗಳಿಂದ ಪ್ರಕಾಶಮಾನವಾಗಿ ಕಾಣುತ್ತದೆ. ಹತ್ತು ವರ್ಷಗಳ ಹಿಂದೆ ಯಾವುದೋ ಸಂಸ್ಥೆಯೊಂದು ಸೋಲಾರ್ ಲೈಟ್ಸ್ ನೀಡಿದರೂ ತಿಂಗಳೊಳಗೆ ಕೆಟ್ಟು ಗುಜುರಿ ಅಂಗಡಿ ಸೇರಿವೆ. ಇತ್ತೀಚಿಗೆ ಇಲ್ಲಿಗೆ ಸೌಭಾಗ್ಯ ಯೋಜನೆಯಡಿಯಲ್ಲಿ ಸೋಲಾರ್ ಸಂಪರ್ಕ ನೀಡಿದರೂ ಕೆಲವೊಂದು ಮನೆಗಳ ಬಲ್ಬುಗಳು ಉರಿಯುವುದೇ ಇಲ್ಲ. ಇಲ್ಲಿನ ಮಕ್ಕಳು ಸೇರಿದಂತೆ ನಿವಾಸಿಗಳು ಶಾಲಾ ಕಾಲೇಜುಗಳಿಗೆ ಏಳೆಂಟು ಕಿಮೀ ದೂರ ಈ ಹೈವೆಯಲ್ಲಿಯೇ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ.

ಮಹತ್ವಾಕಾಂಕ್ಷಿ ಅರಣ್ಯ ಹಕ್ಕು ಕಾಯಿದೆ ಇಲ್ಲಿನ ನಿವಾಸಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ. ಕಾಯ್ದೆ ಪುಸ್ತಕದ ಬದನೆಕಾಯಿಯಂತಾದರೆ ಏನು ಪ್ರಯೋಜನ? ಜನರಿಗೆ ಉಪಯೋಗ ಇಲ್ಲದಿರುವ ಕಾಯ್ದೆಗಳು ಇದ್ದರೇನು? 2006 ರಲ್ಲಿ ಕಾಯ್ದೆ ಜಾರಿಯಾದಗ ನಾವು ತುಂಬಾ ಖುಷಿ ಪಟ್ಟಿದ್ದೇವೆ. ಆದರೆ ಇದೀಗ ಅದೂ ನಮ್ಮ ಪಾಲಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿ ಕೇವಲ 100 ಮೀಟರ್ ಗಳಷ್ಟು ಮಾತ್ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವುದಾದರೂ ಅಭಿವೃದ್ಧಿಗಾಗಿ ಅರಣ್ಯ ಎಂಬ ಮೂರುಅಕ್ಷರದ ಪದ ಅಡ್ಡಿಯಾಗಿದೆ ಎಂದು ಅತ್ಯಂತ ನೋವಿನಿಂದ ನುಡಿಯುತ್ತಾರೆ ಇಲ್ಲಿನ ನಿವಾಸಿಗಳು.

ಅರಣ್ಯವಾಸಿಗಳ ಅಭಿವೃದ್ಧಿಗಾಗಿ 12 ವರ್ಷಗಳ ಹಿಂದೆ ಜ್ಯಾರಿ ಬಂದಿರುವ ಅರಣ್ಯ ಹಕ್ಕು ಕಾಯ್ದೆಯನ್ನು ನಿರ್ಲಕ್ಷಿಸಿದ ಅಧಿಕಾರಿಗಳ ಬೇಜವಾಬ್ಧಾರಿ ಈ ಪ್ರದೇಶ ಅಭಿವೃದ್ಧಿ ಹೊಂದದಿರಲು ಕಾರಣ. ಅರಣ್ಯ ಹಕ್ಕು ಕಾಯ್ದೆ ಜಾರಿಗಾಗಿ ಉಗ್ರ ಸ್ವರೂಪದ ಹೋರಾಟಕ್ಕೆ ಮುನ್ನುಗ್ಗಬೇಕಾದ ಅಗತ್ಯವಿದೆ
ಜಯಾನಂದ ಪಿಲಿಕಲ ಪ್ರಧಾನ ಕಾರ್ಯದರ್ಶಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಬೆಳ್ತಂಗಡಿ ತಾಲೂಕು ಸಮಿತಿ.

ರಸ್ತೆ, ವಿದ್ಯುತ್ ಇಲ್ಲದೆ ನಾವು ನರಕಯಾತನೆಯಿಂದ ಜೀವಿಸುತ್ತಿದ್ದೇವೆ. ಚಿಮಿಣಿ ದೀಪಗಳಿಂದ ವಿದ್ಯಾಭ್ಯಾಸ ಮಾಡಲು ಅಸಾಧ್ಯವಾಗಿದೆ. ರೋಗಿಗಳನ್ನು ಹೊತ್ತೊಯ್ಯಬೇಕಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ನಮ್ಮ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದಾರೆ
ಮಮತಾ ಹೆಚ್ ಹೆಂಡೇಲು, ಖಾಸಗಿ ಉದ್ಯೋಗಿ.

ವಿದ್ಯುತ್, ರಸ್ತೆಗಾಗಿ ಇಲಾಖೆ,ಜನಪ್ರತಿನಿಧಿಗಳ ಬಾಗಿಲು ಬಡಿದರೂ ನಮಗೆ ಭಾಗ್ಯದ ಬಾಗಿಲು ತೆರೆಯಲಿಲ್ಲ. ಅಧಿಕಾರಿಗಳು ಕಾನೂನಿನ ಜೊತೆಗೆ ಮಾನವೀಯತೆ ಬೆಳೆಸಿಕೊಂಡರೆ ಅಭಿವೃದ್ಧಿ ಕಷ್ಟವೇನೂ ಅಲ್ಲ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಅರಣ್ಯ ಹಕ್ಕು ಕಾಯ್ದೆಯಡಿ ಅಭಿವೃದ್ಧಿ ಸಾಧ್ಯವಿದೆ
ಮೋನಪ್ಪ ಮಲೆಕುಡಿಯ,ಹೆಂಡೇಲು ಶಿರ್ಲಾಲು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.