ಕೊಡೆ ರಿಪೇರಿಯಿಂದ ಬದುಕು ಕಟ್ಟಿಕೊಂಡ ಸೀತಾರಾಮ ಭೈರ

ಬೆಳ್ತಂಗಡಿ: ಮಳೆಗಾಲದಲ್ಲಿ ಕೊಡೆ ಇಲ್ಲದೆ ನಡೆದಾಡುವಂತಿಲ್ಲ, ಈ ದಿನಗಳಲ್ಲಿ ಕೊಡೆ ಎಲ್ಲರ ಸಂಗಾತಿ. ಇತ್ತಿಚೀನ ದಿನಗಳಲ್ಲಿ ವಿವಿಧ ವಿನ್ಯಾಸದ ಕೊಡೆಗಳು ಮತ್ತು ಬಣ್ಣದ ಕೊಡೆಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ಕೊಡೆಗಳನ್ನು ಮಾರಾಟ ಮಾಡುವ ಅಂಗಡಿಗಳು ಬೇಕಾದಷ್ಟಿವೆ. ಅದರೆ ಕೊಡೆಗಳನ್ನು ರಿಪೇರಿ ಮಾಡುವವರ ಸಂಖ್ಯೆ ವಿರಳವಾಗುತ್ತಿದೆ.
ಬೆಳ್ತಂಗಡಿ ಪೇಟೆಯಲ್ಲಿ ಹಿಂದೆ ನಾಲೈದು ಮಂದಿ ಕೊಡೆ ರೀಪೆರಿ ಮಾಡುವವರಿದ್ದು, ಈಗ ಇರುವುದು ಲಾಯಿಲ ಪುತ್ರಬೈಲು ನಿವಾಸಿ ಸೀತಾರಾಮ ಭೈರ  ಇವರೊಬ್ಬರು ಮಾತ್ರ. ಇವರು ಕಳೆದ 28 ವರ್ಷಗಳಿಂದ ಬೆಳ್ತಂಗಡಿ ಪೇಟೆಯಲ್ಲಿ ಕೊಡೆ ರಿಪೇರಿಯ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ 8 ವರ್ಷ, ಜಾರುಬಂಡಿಯ ಬಳಿ10 ವರ್ಷ ತನ್ನ ವೃತ್ತಿಯನ್ನು ನಡೆಸಿ ಈಗ ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ಈ ವೃತ್ತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಇವರಿಗೆ ವರ್ಷಪೂರ್ತಿ ಕೆಲಸವಿಲ್ಲ. ಮಳೆ ಬರುತ್ತಿದ್ದಂತೆ ಜನ ಹುಡುಕಿಕೊಂಡು ಬರಲು ಶುರು ಮಾಡುತ್ತಾರೆ. ಕಳೆದ ಮಳೆಗಾಲದಲ್ಲಿ ಮೂಲೆಗಿಟ್ಟ ಕೊಡೆ ಮುಂದಿನ ಮಳೆಗಾಲದಲ್ಲಿ ಹೊರಬರುವುದರಿಂದ ಹಳೆಯ ಕೊಡೆಯ ಕಡ್ಡಿ, ಸ್ವಿಚ್ ಹಾಗೂ ಇನ್ನಿತರ ಬಿಡಿ ಭಾಗಗಳು ಹಾಳಾಗಿರುವುದನ್ನು ನೋಡಿದಾಗ ಪಕ್ಕನೆ ನೆನಪಾಗುವುದು ಕೊಡೆ ರಿಪೇರಿ ಮಾಡುವವರು. ಅಂತವರನ್ನು ಹುಡುಕಿಕೊಂಡು ನಾವು ಪೇಟೆಗೆ ಬರುತ್ತೇವೆ.
ಸೀತಾರಾಮ ಭೈರಾ ಅವರು ಬೆಳ್ತಂಗಡಿ ಪೇಟೆಯಲ್ಲಿ ಹಲವು ವರ್ಷಗಳಿಂದ ಕೊಡೆ ರಿಪೇರಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿರುವುದರಿಂದ ಎಲ್ಲರಿಗೂ ಚಿರಪರಿಚಿತರು. ತನ್ನ ಗೂಡಂಗಡಿಯ ಜೊತೆಯಲ್ಲಿ ಮಳೆಗಾಲದಲ್ಲಿ ಕೊಡೆ ರಿಪೇರಿ ಕಾಯಕವನ್ನು ನಡೆಸುತ್ತಾರೆ. ಈ ವೃತ್ತಿಯಲ್ಲಿ ಇವರು ಪಳಗಿದ ಕೈ ಗ್ರಾಹಕರೊಂದಿಗೆ ಮಾತನಾಡುತ್ತಲೇ ತನ್ನ ಕೆಲಸವನ್ನು ಮಾಡಿ ಕೊಡುವ ಚಾಕಚಕ್ಯತೆಯನ್ನು ಇವರು ಹೊಂದಿದ್ದಾರೆ.
ಸೈಕಲ್ ಶಾಪ್, ಮೆಣಸಿನ ವ್ಯಾಪಾರ ಸೇರಿದಂತೆ ಹಲವು ಉದ್ಯಮವನ್ನು ನಡೆಸಿ ಎಲ್ಲದರಲ್ಲೂ ಲಾಸ್ ಆಗಿ ಕೊನೆಗೆ ಆರಂಭಿಸಿರುವುದೇ ಇವರು ಕೊಡೆ ರಿಪೇರಿ ವೃತ್ತಿ. ಈ ವೃತ್ತಿ ಅವರ ಬದುಕನ್ನು ಕಟ್ಟಿತು. ಇತರ ಸಮಯದಲ್ಲಿ ಸಣ್ಣ ಗೂಡಂಗಡಿ ವ್ಯಾಪಾರ ಇವರ ಜೀವನಕ್ಕೆ ಆಧಾರವಾಯಿತು. ಧಾರಾಕಾರ ಮಳೆ ಇದ್ದರೆ ಹೆಚ್ಚು ಜನರು ಬರುತ್ತಾರೆ. ಮಳೆ ಕಡಿಮೆಯಾಗದೆ ಕೆಲಸವೂ ಕಡಿಮೆ ಎನ್ನುತ್ತಾರೆ ಸೀತಾರಾಮ ಭೈರ. ನಾನಾ ತರದ ಕೊಡೆಗಳ ಬಿಡಿ ಭಾಗಗಳು, ಕಡ್ಡಿಗಳು, ಹೊಸ ಕೊಡೆಗಳು ಅವರ ಬಳಿ ಇದೆ. ದೂರದ ಊರುಗಳಿಂದಲೂ ಜನ ಇವರಲ್ಲಿಗೆ ಬರುತ್ತಾರೆ.

ಕೊಡೆ ಹಿಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ರಿಪೇರಿ ವೃತ್ತಿಯನ್ನು ಮಾಡುವವರು ಕಡಿಮೆಯಾಗುತ್ತಿದ್ದಾರೆ. ಕೊಡೆ ರಿಪೇರಿಯನ್ನು ಕಲಿಸಲು ನಾನು ರೆಡಿ ಇದ್ದೇನೆ. ಆದರೆ ಇದನ್ನು ಕಲಿಯಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವ ಸೀತಾರಾಮ ಭೈರ ಅವರು ಮುಂದೊಂದು ದಿನ ಕೊಡೆಯಲ್ಲಿಯೂ ಯೂಸ್ ಎಂಡ್ ತ್ರೋ ಕೊಡೆಗಳು ಬರುವುದಲ್ಲಿ ಆಶ್ಚರ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪಟ್ಟಣಗಳಲ್ಲಿ ಹಿಂದೆ ಸಂತೆ ದಿನ ರಸ್ತೆ ಬದಿ ಸಣ್ಣ ಸೂರು ಇಟ್ಟುಕೊಂಡು ಕೊಡೆ ರಿಪೇರಿ ಮಾಡುವವರು ಇದ್ದರು. ಮಳೆಗಾಲ ಮುಗಿಯುವಾಗ ಇವರ ಕಾಯಕ ಕೂಡಾ ಮುಗಿಯುತ್ತದೆ. ಕೊಡೆ ರಿಪೇರಿ ಕಾಯಕ ತಾತ್ಕಲಿಕ, ಮಳೆಗಾಲದ ದಿನಗಳಲ್ಲಿ ಆದಾಯಕ್ಕೊಂದು ದಾರಿ,ಇತರ ದಿನಗಳಲ್ಲಿ ಬೇರೆ ವೃತ್ತಿಯನ್ನು ಮಾಡಬೇಕು. ಕೊಡೆಯ ಕಡ್ಡಿ, ಹ್ಯಾಂಡಲ್, ಬಟ್ಟೆ ಮೊದಲಾದ ವಸ್ತುಗಳನ್ನು ಇವರು ಇಟ್ಟುಕೊಳ್ಳಬೇಕು. ಕೊಡೆ ರಿಪೇರಿ ವೃತ್ತಿಯವರು ಅಸಂಘಟಿತ ಕಾರ್ಮಿಕ ವರ್ಗ, ಮಳೆಗಾಲದ ದಿನಗಳಲ್ಲಿ ಮಾತ್ರ ಇವರಿಗೆ ಕೆಲಸ. ಇಂತಹ ವೃತ್ತಿಯನ್ನು ನಡೆಸುತ್ತಿರುವವರಲ್ಲಿ ಒಬ್ಬರು ಸೀತಾರಾಮ ಭೈರ.

ಬಿ.ಎಸ್ ಕುಲಾಲ್ ಬೆಳ್ತಂಗಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.