ಅಂತರ್ ಜಿಲ್ಲಾ ಗೋ ಕಳ್ಳರ ಬಂಧನ : ವೇಣೂರು ಪೊಲೀಸರ ಕಾರ್ಯಾಚರಣೆ

ಕಲಂದರ್ ಶಾಫಿ, ಅಹ್ಮದ್ ಫೈಜಲ್, ಅರಾಫತ್ ಅಲಿ

ವೇಣೂರು: ಹಲವು ದಿನಗಳಿಂದ ಅವಿಭಜಿತ ಜಿಲ್ಲೆಯಲ್ಲಿ ನಡೆದ ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿ, ನಾರಾವಿ ಹಾಗೂ ಕರಿಮಣೇಲು ಗ್ರಾಮದ ಗಾಂಧಿನಗರದಲ್ಲಿ ದನ ಕಳ್ಳತನವಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಡಬಿದಿರೆ ಮಾರೂರು ನಿವಾಸಿ ಹೆಚ್. ಅಬ್ದುಲ್ ಖಾದರ್ ಅವರ ಪುತ್ರ ಅಹ್ಮದ್ ಫೈಜಲ್ (42), ಮಂಗಳೂರಿನ ತೋಕೂರು ಬೊಟ್ಟುಮನೆ ನಿವಾಸಿ ಸಿದ್ದಿಕುಲ್ ಅಕ್ಬರ್ ಅವರ ಪುತ್ರ ಕಲಂದರ್ ಶಾಫಿ ಹಾಗೂ (32) ಮಂಗಳೂರು ಜೋಕಟ್ಟೆಯ ನ್ಯೂ ಮಸೀದಿ ಹಿಂಬಾಗದ ನಿವಾಸಿ ಜೆ. ಮಹಮ್ಮದ್‌ರವರ ಪುತ್ರ ಅರಾಫತ್ ಅಲಿ (32) ಬಂಧಿತರು. ಬಂಧಿತರಿಂದ ಒಂದು ಬ್ರೀಝಾ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿದ ಸೊತ್ತಿನ ಮೌಲ್ಯ ರೂ. 8 ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಪೈಕಿ ಆರೋಪಿ ಅಹ್ಮದ್ ಫೈಜಲ್ ಮೇಲೆ ಸುರತ್ಕಲ್, ಹೆಬ್ರಿ ಪೊಲೀಸ್ ಠಾಣೆಗಳಲ್ಲಿ, ಕಲಂದರ್ ಶಾಫಿ ಮೇಲೆ ಹೆಬ್ರಿ, ಪಣಂಬೂರು ಠಾಣೆಗಳಲ್ಲಿ ಹಾಗೂ ಅರಾಫತ್ ಅಲಿ ಮೇಲೆ ಹೆಬ್ರಿ, ಕಂಕನಾಡಿ, ಸುರತ್ಕಲ್, ಪಣಂಬೂರು, ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿರುವ ಬಗ್ಗೆ ಶಂಕಿಸಲಾಗಿದ್ದು, ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಎಎಸ್‌ಐ ಗಿರಿಯಪ್ಪ, ಹೆಡ್‌ಕಾನ್ಸ್‌ಟೇಬಲ್‌ಗಳಾದ ಹರೀಶ್ ನಾಯ್ಕ್, ದೇವರಾಜ್, ರಾಜೇಶ್, ವೃಷಭ, ಅಭಿಜಿತ್, ಹನುಮಂತಪ್ಪ, ಸಿಬ್ಬಂದಿಯವರಾದ ವಿಜಯ್ ಕುಮಾರ್, ಕೃಷ್ಣ ನಾಯ್ಕ್, ಪ್ರಶಾಂತ್, ರಮ್ಯ, ಶಿವರುದ್ರಪ್ಪ, ಶಶಿಕುಮಾರ್, ಮಂಜು ಒ ನಾಯಕ, ಸಲೀಂ ಪಟೇಲ್, ಮಂಜುನಾಥ್ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್‌ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

ಕಾರ್ಯಾಚರಣೆಗೆ ಎಸ್‌ಪಿ ಶ್ಲಾಘನೆ
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀಪ್ರಸಾದ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕ್ರಂ ಆಮ್ಟೆ, ಬಂಟ್ವಾಳ ಎ.ಎಸ್.ಪಿ. ಸೈದುಲ್ ಅಡಾವತ್ ಅವರ ಮಾರ್ಗದರ್ಶನದಲ್ಲಿ ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಸಂದೇಶ ಪಿ.ಜಿ.ಯವರ ಮುಂದಾಳತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೇಣೂರು ಪಿ.ಎಸ್.ಐ ನಾಗರಾಜ್ ನೇತೃತ್ವ ವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರು ವೇಣೂರು ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿರುತ್ತಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.