ಪ್ರಕರಣದ ತನಿಖೆಗೆ ಚುರುಕು; ವಿಶೇಷ ತಂಡ ರಚನೆ: ಸದ್ಯದಲ್ಲೇ ಆರೋಪಿಗಳ ಪತ್ತೆ ವಿಶ್ವಾಸ
ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಅರಣ್ಯ ಇಲಾಖೆ ಗೋದಾಮಿನಿಂದ ಬೀಗಿ ಮುರಿದು ಅಂದಾಜು8.60 ಲಕ್ಷ ರೂ ಮೌಲ್ಯದ 325 ಕೆ.ಜಿ ಶ್ರೀಗಂಧದ ತುಂಡುಗಳನ್ನು ಕಳವು ಮಾಡಿರುವ ಘಟನೆ ಜು. 13 ರಂದು ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆ ವತಿಯಿಂದ ವಿವಿಧ ಪ್ರಕರಣಗಳ ಸಂದರ್ಭ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಶ್ರೀಗಂಧದ ಕೊರಡುಗಳನ್ನು ಅರಣ್ಯ ಇಲಾಖೆಯ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದು ಇಲ್ಲಿಂದ ಈ ಕಳವು ಘಟನೆ ನಡೆದಿದೆ. ಇದರ ಮೊತ್ತ 8.60 ಲಕ್ಷ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಈ ಗೋದಾಮಿನಲ್ಲಿ ಶ್ರೀಗಂಧದ ಕೊರಡುಗಳ ಜೊತೆಗೆ ಇಲಾಖೆಯ ತಡೆಬೇಲಿ ತಂತಿಗಳನ್ನೂ ದಾಸ್ತಾನಿರಿಸಲಾಗಿದ್ದು ಜು. 13 ರಂದು ಇಲಾಖಾ ಸಿಬ್ಬಂದಿ ತಂತಿಗಳನ್ನು ತೆಗೆಯುವುದಕ್ಕಾಗಿ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಜು. 2 ರಿಂದ ಯಾರೂ ಹೋಗಿರಲಿಲ್ಲ:
ಇಲಾಖಾ ಸಿಬ್ಬಂದಿ ಹೇಳುವ ಪ್ರಕಾರ ಜು. 2ರಂದು ತಂತಿಗಳನ್ನು ತರಲು ಕೊನೆಯ ಬಾರಿಗೆ ಹೋಗಲಾಗಿದೆ. ಆ ಬಳಿಕದ ದಿನಗಳಲ್ಲಿ ಈ ಕೃತ್ಯವಾಗಿರಬಹುದು ಎಂದು ಅಂದಾಜಿಸಬಹುದಾಗಿದೆ. ಕಳ್ಳರು ಬೀಗ ಒಡೆದು ಒಳಹೋಗಿದ್ದು ಬಳಿಕ ಯಾರಿಗೂ ಸಂದೇಹ ಬಾರದಂತೆ ಗಮ್ಮಿನ ಮೂಲಕ ಬೀಗವನ್ನು ಮೊದಲ ಸ್ಥಿತಿಯಲ್ಲೇ ಇಟ್ಟು ಹೋಗಿದ್ದಾರೆ. ವಾಹನ ಗೋದಾಮಿನ ವರೆಗೆ ಹೋಗಲು ಬೇಲಿ ಮತ್ತು ಗೇಟ್ ತಡೆ ಇದ್ದು ಶ್ರೀಗಂಧದ ತುಂಡುಗಳನ್ನು ಗೋದಾಮಿನಿಂದ ಗೇಟಿನವರೆಗೆ ತಂದು ಬಳಿಕ ರಸ್ತೆ ಮೇಲೆ ನಿಲ್ಲಿಸಿದ್ದ ವಾಹನಕ್ಕೆ ತುಂಬಿ ಸಾಗಾಟ ಮಾಡಿರಬಹುದು ಎಂದು ಶಂಕಿಸಲಾಗಿದೆ.
75 ಕೆ.ಜಿ ಉಳಿಸಿ ಹೋಗಿದ್ದಾರೆ:
ಇಲಾಖಾ ಗೋದಾಮಿನಲ್ಲಿ 400ಕೆ.ಜಿ ಯಷ್ಟು ಶ್ರೀಗಂಧ ದಾಸ್ತಾನಿದ್ದು ಈ ಪೈಕಿ ೩೨೫ ಕೆ.ಜಿ ಯಷ್ಟು ಮಾತ್ರ ಕಳವಾಗಿದ್ದು 75 ಕೆ.ಜಿ ಉಳಿಸಿ ಹೋಗಿದ್ದಾರೆ. ಈ ಗೋದಾಮಿನ ಪಕ್ಕದಲ್ಲೆ ಇಲಾಖಾ ವಸತಿಗೃಹವಿದೆ. ಆದರೆ ಫಾರೆಸ್ಟರ್ ಮಾತ್ರ ವಾರದಿಂದ ರಜೆಯಲ್ಲಿ ತೆರಳಿದ್ದುದರಿಂದ ಈ ವೇಳೆಯನ್ನು ಗಮನಿಸಿ ಕಳ್ಳರು ಈ ಕೃತ್ಯವೆಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು:
ಘಟನೆ ಬಗ್ಗೆ ವಿವರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ, ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಅವರು ಘಟನೆಯ ವಿವರವನ್ನು ಜಿಲ್ಲಾ ಪೊಲೀಸ್ ಎಸ್ಪಿ ಅವರಿಗೆ ಮಾಹಿತಿ ನೀಡಿದಾಗ ಬಂದಿರುವ ಪ್ರತಿಕ್ರೀಯೆಯಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.