ಮೇಜರ್ ನರಸಿಂಹ ಪ್ರಭು ಲೆಫ್ಟಿನೆಂಟ್ ಕರ್ನಲ್ ಆಗಿ ಭಡ್ತಿ

ಬೆಳ್ತಂಗಡಿ: ಉಜಿರೆಯ ಮೇಜರ್ ನರಸಿಂಹ ಪ್ರಭು ಮೂರ್ಜೆ ಅವರು ಸಿಕ್ಕಿಂನ ಸುಕ್‌ನಾದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಭಡ್ತಿ ಹೊಂದಿದ್ದಾರೆ.
29 ವರ್ಷಗಳ ಸುದೀರ್ಘ ಸೇವೆಯನ್ನು ಹೊಂದಿರುವ ಇವರು ಕಾರ್ಯಕ್ಷೇತ್ರದಲ್ಲಿ ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಸಿಕ್ಕಿಂ, ಗುಜರಾತ್, ದೆಹಲಿ, ಹಾಗೂ ಮಿಲಿಟರಿ ಕಾಲೇಜ್ ಆಫ್ ಟೆಲಿಕಮಿನಿಕೇಶನ್ ಮಧ್ಯಪ್ರದೇಶದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
2 ಬಾರಿ ಭಾರತದ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಂದ ಪಾರ್ಚ್‌ಮೆಂಟ್ ಪ್ರಶಸ್ತಿ ಪಡೆದಿದ್ದಾರೆ.
ಉಜಿರೆ ಮೂರ್ಜೆ ವಾಸುದೇವ ಪ್ರಭು ಮತ್ತು ಮನೋರಮಾ ಪ್ರಭು ದಂಪತಿ ಪುತ್ರರಾಗಿರುವ ನರಸಿಂಹ ಪ್ರಭು ಅವರು ಪ್ರಾಥಮಿಕ, ಪ್ರೌಢ ಮತ್ತು ಪ. ಪೂ ಶಿಕ್ಷಣವನ್ನು ಉಜಿರೆ ಎಸ್‌ಡಿ ಎಂ ಶಿಕ್ಷಣ ಸಂಸ್ಥೆಗಳಲ್ಲಿ ಪೂರೈಸಿದ್ದಾರೆ. ಬಳಿಕ ಐಟಿಐ ಶಿಕ್ಷಣವನ್ನು ವೇಣೂರು ಎಸ್‌ಡಿಎಂ ಐಟಿಐ ಯಲ್ಲಿ ಪೂರೈಸಿರುತ್ತಾರೆ. ಈ ಮಧ್ಯೆ ಅವರು ಎನ್‌ಸಿಸಿ ಯಲ್ಲಿ ಸಿ ಸರ್ಟಿಫಿಕೆಟ್ ಕೂಡ ಹೊಂದಿದವರಾಗಿದ್ದಾರೆ. ಪ್ರಸ್ತುತ ಅವರು ಭೂಸೇನೆಯ ಅಂಗವಾದ ಕೋರ್ ಆಫ್ ಸಿಗ್ನಲ್ಸ್ ನಲ್ಲಿ ಟೆಲಿ ಕಮ್ಯುನಿಕೇಶನ್ ವಿಭಾಗದ ತಾಂತ್ರಿಕ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರತರಾಗಿದ್ದಾರೆ. ಪದೋನ್ನತಿ ಹೊಂದಿರುವ ಅವರಿಗೆ ಮುಂದಿನ ಅಧಿಕಾರ ನಿಯೋಜನೆ ಬಾಕಿ ಇರುತ್ತದೆ.

ಅವರ ಪತ್ನಿ ಪ್ರತಿಮಾ ಪ್ರಭು ಸಿಕ್ಕಿಂನ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದು, ಪುತ್ರಿ ಪ್ರಿಯಾ ಪ್ರಭು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾರೆ. ಪುತ್ರ ಪ್ರೀತಮ್ ಪ್ರಭು 6ತರಗತಿಯಲ್ಲಿ ಕಲಿಯುತ್ತಿದ್ದಾರೆ. ಈಗಾಗಲೇ ಬೆಳ್ತಂಗಡಿ ತಾಲೂಕಿನವರಾಗಿರುವ ಮುಂಡಾಜೆ ನಿವಾಸಿ ಎಂ.ವಿ ಭಟ್ ಅವರು ಮಿಲಿಟರಿಯಲ್ಲಿ ಉನ್ನತ ಹುದ್ದೆಯಾಗಿರುವ ಮೇಜರ್ ಜನರಲ್ ಆಗಿ ನಿವೃತ್ತರಾಗಿದ್ದಾರೆ. ಅಂತೆಯೇ ಮುಂಡಾಜೆಯ ನಿತಿನ್ ಭಿಡೆ ಅವರು ಪ್ರಸ್ತುತ ಕರ್ನಲ್ ಆಗಿ ಒರಿಸ್ಸಾದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇದೀಗ ಮೂರ್ಜೆ ನರಸಿಂಹ ಪ್ರಭು ಅವರು ಲೆಫ್ಟಿನೆಂಟ್ ಕರ್ನಲ್ ಆಗಿ ಪದೋನ್ನತಿ ಹೊಂದುವ ಮೂಲಕ ಮಿಲಿಟರಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ ತಾಲೂಕಿನ ಮೂರನೇ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.