ಮುಂಡಾಜೆ: ಇಲ್ಲಿನ ಪರಮುಖ ನಿವಾಸಿ, ಕೆನರಾ ಬ್ಯಾಂಕ್ ನಿವೃತ ಅಧಿಕಾರಿ, ಪ್ರಸ್ತುತ ಕೃಷಿಕರಾಗಿದ್ದ ಮೋಹನ್ ನಾಯ್ಕ (66ವ.) ಅವರು ಜು. 10 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾತ್ರಿ 10 ಗಂಟೆ ವೇಳೆಗೆ ಮನೆಯಲ್ಲಿ ಟಿ.ವಿ ವೀಕ್ಷಿಸುತ್ತಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಉಜಿರೆ ಖಾಸಗಿ ಅಸ್ಪತ್ರೆಗೆ ಕರೆತಂದು ಮಂಗಳೂರಿಗೆ ಕರೆದುಕೊಂಡು ಹೋಗುವವರಿದ್ದರು. ಈ ಮಧ್ಯೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರಿಗೂ ತೋರಿಸಿದಾಗ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದರಿಂದ ಅಲ್ಲಿಂದ ಮತ್ತೆ ಮನೆಗೆ ಕರೆತರಲಾಯಿತು.
ಕೆನರಾ ಬ್ಯಾಂಕ್ನಲ್ಲಿ ಮನೇಜರ್ ಹುದ್ದೆವರೆಗೆ ಭಡ್ತಿ ಹೊಂದಿದ್ದ ಮೋಹನ್ ನಾಯ್ಕ್ ಅವರು ಅನೇಕ ಕಡೆಗಳಲ್ಲಿ ಕರ್ತವ್ಯ ಸಲ್ಲಿಸಿ ಬಳಿಕ ಸ್ವಯಂ ನಿವೃತಿ ಪಡೆದಿದ್ದರು. ಆ ಬಳಿಕ ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ಪೂರ್ಣಪ್ರಮಾಣದ ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಸೋಮಂತಡ್ಕ ಪೇಟೆಯಲ್ಲಿದ್ದ ಅವರ ಜಾಗದಲ್ಲಿ ಹಳೆ ಕಟ್ಟಡ ಕೆಡವಿ 20 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿರುವ ಭರತ್ ಕಾಂಪ್ಲೆಕ್ಸ್ ಕಟ್ಟಿಸಿ ಕಳೆದ ವರ್ಷ ಉದ್ಘಾಟನೆಗೊಳಿಸಿದ್ದರು.
ಮೃತರು ಪತ್ನಿ, ನಿವೃತ ಉಪತಹಶಿಲ್ದಾರ್ ರೇವತಿ, ಪುತ್ರ ಭರತ್, ಪುತ್ರಿ ಜ್ಯೋಸ್ನಾ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಗೌರವಾರ್ಥ ಸೋಮಂತಡ್ಕದ ಅವರ ವಾಣಿಜ್ಯ ಮಳಿಗೆಯ ಎಲ್ಲಾ ವ್ಯಾಪಾರಸ್ತರು ಇಂದು ಸ್ವಯಂ ಪ್ರೇರಿತ ಬಂದ್ ನಡೆಸಿ ಶೋಕಾಚರಣೆಯಲ್ಲಿ ಭಾಗಿಯಾದರು.