ಮೋಹನ ಬೈಪಡಿತ್ತಾಯರಿಗೆ 2018ನೇ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

ಬೆಳ್ತಂಗಡಿ: ಯಕ್ಷಗಾನದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಲ್ಲೊಬ್ಬರಾದ ಮೋಹನ ಬೈಪಡಿತ್ತಾಯ ಅವರಿಗೆ 2018ನೇ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರೆತಿದೆ .
ಬೈಪಡಿತ್ತಾಯ ಅವರು ಹಿಮ್ಮೇಳದ ಭಾಗವತಿಕೆ ಯಿಂದ ಹಿಡಿದು ಚೆಂಡೆ ಮದ್ದಳೆ ಎಲ್ಲ ಪ್ರಕಾರಗಳಲ್ಲೂ ನಿಷ್ಣಾತರು. ಅವರ ಗರಡಿಯಲ್ಲಿ ಪಳಗಿ ಹಿಮ್ಮೇಳ ಕಲಾವಿದರಾಗಿ ನೂರಾರು ವಿದ್ಯಾರ್ಥಿಗಳು ಪ್ರಸಿದ್ಧ ಕಲಾವಿದರಾಗಿ ಖ್ಯಾತಿ ಗಳಿಸಿದ್ದಾರೆ.
ಮೂಲತಃ ಕಡಬದವರಾದ ಅವರು ಪ್ರಸ್ತುತ ಉಜಿರೆ ಓಡಲದಲ್ಲಿ ನೆಲೆಸಿದ್ದು,2011 ರಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ಮುಂಭಾಗ ಯಕ್ಷಗಾನ ಹಿಮ್ಮೇಳ ಕಲಿಕಾ ಕೇಂದ್ರ ಸ್ಥಾಪಿಸಿ ಭಾಗವತಿಕೆಯಿಂದ ಹಿಡಿದು ಅರ್ಥಗಾರಿಕೆಯವರೆಗೆ ಎಲ್ಲ ಪ್ರಕಾರಗಳಲ್ಲೂ ತಮ್ಮ ಅನುಭವವನ್ನು ತರಬೇತಿ ಮೂಲಕ ಸಾಕಾರಗೊಳಿಸುತ್ತಿದ್ದಾರೆ.
ಗುರು ಹರಿನಾರಾಯಣ ಬೈಪಡಿತ್ತಾಯರ ಮೂಲಕ ಹಿಮ್ಮೇಳ ಚತುರರಾಗಿ ಕಡಬದಲ್ಲಿ ಹವ್ಯಾಸಿ ಕಲಾವಿದರಾಗಿ ಆರಂಭಗೊಂಡ ವೃತ್ತಿ ಸೇವೆ ಬಳಿಕ ನಂದಾವರ, ಬಪ್ಪನಾಡು ಮೇಳದಲ್ಲಿ ಭಾಗವತಿಕೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಬೆಳ್ಮಣ್‌ನಲ್ಲಿ ಸಂಭವಿಸಿದ ಅಪಘಾತದ ಬಳಿಕ ಮರುಹುಟ್ಟು ಪಡೆದು 3 ವರ್ಷ ಹವ್ಯಾಸಿ ಕಲಾವಿದರಾಗಿ ತಿರುಗಾಟ ನಡೆಸಿ ಮುಂಬಯಿಯಲ್ಲಿ9 ವರ್ಷಗಳ ಕಾಲ ಹೊರನಾಡು ಕನ್ನಡಿಗರಿಗೆ ಹಿಮ್ಮೇಳ ತರಬೇತಿ ನೀಡಿದ್ದರು.
ಉಡುಪಿ ಕಲಾರಂಗ, ಯಕ್ಷಭಾರತಿ ಕನ್ಯಾಡಿ, ಅರ್ಕುಳ ಸುಬ್ರಾಯ ಪ್ರತಿಷ್ಠಾನ, ಆಂಜನೇಯ ಪುತ್ತೂರು ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸುಮಾರು 200ಕ್ಕೂ ಹೆಚ್ಚು ಕಲಾವಿದರು ಅವರ ಗರಡಿಯಲ್ಲಿ ಪಳಗಿ ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ. ಈಗಲೂ ಕೂಡ ಅವರು ಆಸಕ್ತರಿಗೆ ತರಬೇತಿ ನೀಡುವ ಮೂಲಕ ನಿಜ ಅರ್ಥದಲ್ಲಿ ಗುರುಗಳಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.