ಬೆಳ್ತಂಗಡಿ: ವೃದ್ಧರನ್ನು ಮತ್ತು ಅಸಹಾಯರಕನ್ನು ಗುರಿಯಾಗಿಸಿ ಅವರನ್ನು ಸಂತೈಸುವ ದೃಷ್ಟಿಯಿಂದ ರೋಟರಿ ಕ್ಲಬ್ ಈ ವರ್ಷ ವಿಶೇಷ ಆದ್ಯತೆಯಲ್ಲಿ ಕೆಲಸ ಮಾಡಲಿದೆ. ಅಂತೆಯೇ ಜೀವ ಉಳಿಸಿ ಎಂಬ ಶಿರೋನಾಮೆಯಡಿ ಕ್ಯಾನ್ಸರ್ನಂತಹಾ ಮಾರಕ ಕಾಯಿಲೆ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು, ತಪಾಸಣೆ ಮತ್ತು ರೋಗ ಪತ್ತೆ ಶಿಬಿರಗಳನ್ನು ಕೈಗೊಂಡು ರೋಗ ಪೂರ್ವ ಎಚ್ಚರಿಕೆ ನೀಡುವುದು ನಮ್ಮ ಈ ವರ್ಷದ ಗುರಿ. ನಮ್ಮ ನೂತನ ಪದಾಧಿಕಾರಿ ಮಂಡಳಿಯ ಪದಗ್ರಹಣ ಸಮಾರಂಭ ಜು. 4 ರಂದು ಬೆಳ್ತಂಗಡಿ ಎಸ್ಡಿಎಂ ಕಲಾಭವನದಲ್ಲಿ ಜರುಗಲಿದೆ ಎಂದು ಈ ವರ್ಷದ ನಿಯೋಜಿತ ಅಧ್ಯಕ್ಷ ಜಯರಾಮ್ ಎಸ್ ಪತ್ರಿಕಾಗೊಷ್ಟಿಯಲ್ಲಿ ತಿಳಿಸಿದರು.
49 ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಕ್ಲಬ್ ನಿಂದ ಸೌರಶಕ್ತಿ ಅಭಿಯಾನ, ನಿಸ್ಸಹಾಯಕರಿಗೆ ಆರ್ಥಿಕ ನೆರವು, ಶುದ್ಧ ಕುಡಿಯುವ ನೀರು, ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಧನ ಸಹಾಯ, ಸ್ವಚ್ಚತಾ ಆಂದೋಲನ, ಮತ ಜಾಗೃತಿ, ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ, ಮೊದಲಾದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಮುಂದೆಯೂ ಕ್ಲಬ್ನಿಂದ ಈ ಎಲ್ಲಾ ಕಾರ್ಯಕ್ರಮಗ ಮುಂದುವರಿಕೆ ಮತ್ತು ಹೊಸ ಯೋಜನೆಗಳ ಅನುಷ್ಠಾನ ನಡೆಯಲಿದೆ ಎಂದರು. ರೋಟರಿ ರಾಜ್ಯಪಾಲ ರಂಗನಾಥ್ ಭಟ್, ಸಹಾಯಕ ರಾನ್ಯಪಾಲ ರಿತೇಶ್ ಬಾಳಿಗಾ, ನಿವೃತ ಮೇಜರ್ ಜನರಲ್ ಎಂ.ವಿ ಭಟ್ ಮೊದಲಾದವರು ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತ ಅಧ್ಯಕ್ಷ ಜಗದೀಶ್ಪ್ರಸಾದ್, ಕಾರ್ಯದರ್ಶಿ ರಾಜೇಂದ್ರ ಕಾಮತ್, ನಿಯೋಜಿತ ಕಾರ್ಯದರ್ಶಿ ಪ್ರಕಾಶ್ನಾರಾಯಣ್, ಪೂರ್ವಾಧ್ಯಕ್ಷ ಯಶವಂತ ಪಟವರ್ಧನ್ ಉಪಸ್ಥಿತರಿದ್ದರು.