HomePage_Banner_
HomePage_Banner_
HomePage_Banner_

ಕಳಿಯ: ವಿದ್ಯುತ್ ಅವಘಡ, ಮಹಿಳೆ ಮೃತ್ಯು

ಮೃತಪಟ್ಟ ಪೂರ್ಣಿಮಾ

ಕಳಿಯ: ಇಲ್ಲಿಯ ಪಂಜಿರ್ಪು ಎಂಬಲ್ಲಿ ವಿದ್ಯುತ್ ಶಾಕ್ ತಗುಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಜೂ.13ರಂದು ಸಂಜೆ ನಡೆದಿದೆ.
ಪಂಜಿರ್ಪು ನಿವಾಸಿ, ಉಜಿರೆಯಲ್ಲಿ ಲಾಂಡ್ರಿ ವೃತ್ತಿ ನಡೆಸುತ್ತಿರುವ ಮೋಹನ ರವರ ಪತ್ನಿ ಪೂರ್ಣಿಮಾ(31.ವ)ವಿದ್ಯುತ್ ಅವಘಡದಿಂದ ಮೃತಪಟ್ಟವರು. ಮನೆಯಿಂದ ಬಾವಿಯ ಪಂಪ್‌ಗೆ ಅಳವಡಿಸಿದ್ದ ವಿದ್ಯುತ್ ವಯರ್‌ಗೆ ಸಿಡಿಲು ಬಡಿದು ಅಂಗಳದಲ್ಲಿ ತುಂಡಾಗಿ ಬಿದ್ದಿದ್ದು, ಅದನ್ನು ಗಮನಿಸಿದ ಪೂರ್ಣಿಮಾರವರು ಮನೆಯಂಗಳಕ್ಕೆ ಇಳಿದಾಗ ವಯರನ್ನು ತುಳಿದು ವಿದ್ಯುತ್ ಶಾಕ್‌ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಜೆ ಈ ಘಟನೆ ವೇಳೆ ಪತಿ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಅತ್ತೆ ಮತ್ತು ಮಕ್ಕಳಿದ್ದು, ಅವರಿಗೆ ವಿಷಯ ತಿಳಿದು ಬಂದು ನೋಡುವಷ್ಟರಲ್ಲಿ ಪೂರ್ಣಿಮಾ ರವರ ಪ್ರಾಣಪಕ್ಷಿ ಅದಾಗಲೇ ಹಾರಿಹೊಗಿತ್ತು.
ಘಟನಾ ಸ್ಥಳಕ್ಕೆ ಕಳಿಯ ಗ್ರಾಮ  ಕರಣಿಕರಾದ  ರವಿ ವಿ.ಎಮ್,  ಬೆಳ್ತಂಗಡಿ ಮೆಸ್ಕಾಂ ಇಲಾಖೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿಗಳು, ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರವಿ ಬಿ.ಎಸ್., ಪ್ರೊಬೆಷನರಿ ಸಬ್‌ಇನ್ಸ್‌ಪೆಕ್ಟರ್ ಭರತ್ ಕುಮಾರ್, ಸಹಾಯಕ ಸಬ್‌ಇನ್ಸ್‌ಪೆಕ್ಟರ್  ಕಲೈಮಾರ್ ಮತ್ತು ಸಿಬ್ಬಂದಿಗಳು, ಕಳಿಯ ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್  ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತಿ ಮೋಹನ್, ಎರಡು ಗಂಡು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.