ಪ್ರಾಕೃತಿಕ ವಿಕೋಪ ಎದುರಿಸಲು ತಾಲೂಕು ಆಡಳಿತ ಸರ್ವಸನ್ನದ್ಧ

Advt_NewsUnder_1
Advt_NewsUnder_1
Advt_NewsUnder_1

ಪುನರ್ವಸತಿ -ಗಂಜಿ ಕೇಂದ್ರಕ್ಕೂ ಸಿದ್ಧತೆ: ತಾಲೂಕು ಮಟ್ಟದ ಅಧಿಕಾರಿಗಳ ಸಮನ್ವಯ ಸಮಿತಿ

ಬೆಳ್ತಂಗಡಿ: ತಾಲೂಕಿನಲ್ಲಿ ಮುಂಗಾರು ಋತುವಿನಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಅವಶ್ಯಕತೆಗಳನ್ನು ಪ್ರಸ್ತಾಪಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲ ಇಲಾಖೆಗಳ ಸಹಕಾರ ಕೋರಿ ವಿಶೇಷ ಸಭೆಯು ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಮುಂಗಾರು ಮಳೆ ತಾಲೂಕಿಗೆ ತಡವಾಗಿ ಬರುತ್ತಿದ್ದರೂ ಸಂಭವಿಸಬಹುದಾದ ವಿಕೋಪಗಳನ್ನು ಎದುರಿಸಲು ತಾಲೂಕು ಅಡಳಿತ ಸರ್ವಸನ್ನದ್ಧವಾಗಿದೆ.
ದಿನದ ೨೪ಗಂಟೆಯೂ ಕಾರ್ಯನಿರ್ವಹಿಸುವಂತೆ ಕಂಟ್ರೋಲ್ ರೂಮ್ ತೆರೆದು ಸದಾ ಸಿಬ್ಬಂದಿ ಹಾಜರಿರುವಂತೆ ಕ್ರಮ ಜರುಗಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಲು ಗೃಹರಕ್ಷಕದಳ, ಅಗ್ನಶಾಮಕ ದಳ, ಪೊಲೀಸ್ ಇಲಾಖೆ, ವೈದ್ಯಾಧಿಕಾರಿಗಳು ಒಳಗೊಂಡ ತುರ್ತು ಸಹಾಯ ಪಡೆ ರಚಿಸಿ ೩ ಕಂದಾಯ ಹೋಬಳಿಗಳಿಗೆ ನೋಡೆಲ್ ಅಧಿಕಾರಿಗಳು ನೇಮಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಈಜುಗಾರರ ತಂಡ:
ತುರ್ತು ಸಂದರ್ಭಗಳಲ್ಲಿ ಸೇವೆಗೆ ಲಭ್ಯರಿರುವಂತೆ ಈಜುಗಾರರ ಪಟ್ಟಿ ಸಿದ್ಧಪಡಿಸಿ ಅವರ ಮನೆಯ ದೂರವಾಣಿ ಸಂಖ್ಯೆಯೊಂದಿಗೆ ನಿರಂತ ಸಂಪರ್ಕದಲ್ಲಿರುವಂತೆ ಕ್ರಮವಹಿಸಲು ಸೂಚಿಸಲಾಗಿದೆ. ಖಾಸಗಿ ದೋಣಿ ಹೊಂದಿರುವವರ ಸಂಪರ್ಕವಿರಿಸಿಕೊಂಡು ಅಗತ್ಯ ಕಾರ್ಯಾಚರಣೆಗೆ ಲಭ್ಯರಿರುವಂತೆ ಕೇಳಿಕೊಳ್ಳುವುದು, ಮಿತಿಗಿಂತ ಜಾಸ್ತಿ ನೀರು ಬಂದಲ್ಲಿ ಜನರನ್ನು ಒಯ್ಯದಂತೆ ಸೂಚನೆ ನೀಡುವುದಾಗಿ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಯಿತು.
ಅರಣ್ಯ, ಮೆಸ್ಕಾಂ ಇಲಾಖೆ ಜೊತೆ ಸಮನ್ವಯತೆಗೆ ಕ್ರಮ
ತುರ್ತು ಸಂದರ್ಭ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ಅತೀ ಸಮನ್ವಯದಿಂದ ಇರಬೇಕಾಗಿದ್ದು, ವಿದ್ಯುತ್ ವಯರ್‌ಗಳ ಮೇಲೆ ಮರ ಅಥವಾ ರೆಂಬೆಗಳು ಬಿದ್ದಲ್ಲಿ ಅವುಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ಬೇಕಾದಲ್ಲಿ ಮತ್ತು ತೆರವುಗೊಳಿಸಲು ಇಲಾಖೆ ವಿಳಂಬರಹಿತ ಸೇವೆ ನೀಡಬೇಕು. ವಿವಿಧ ಇಲಾಖೆಗಳೂ ಸಮನ್ವಯತೆಯಿಂದಲೇ ಇರಬೇಕು. ಲೋಕೋಪಯೋಗಿ ಇಲಾಖೆಯವರ ಬಳಿಯೂ ಮರ ತೆರವು ಯಂತ್ರಗಳು ಇಟ್ಟುಕೊಂಡಿರಬೇಕು. ಖಾಸಗಿ ಜಾಗದವರಾದರೂ ಅವರ ಜಾಗದಿಂದ ಮರಗಳು ಸಾರ್ವಜನಿಕ ರಸ್ತ್ತೆಗಳ ಮೇಲೆ ಬಿದ್ದಿದ್ದರೆ ಅವನ್ನು ತೆಗೆಯುವಂತೆ ಕಾಯುವ ಬದಲು ಸರಕಾರಿ ಇಲಾಖೆಯ ವತಿಯಿಂದಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜೆಸಿಬಿ ಮತ್ತು ಕ್ರೈನ್ ಹೊಂದಿರುವವರ ಸಂಪರ್ಕ ಸಂಖ್ಯೆ ಸಂಗ್ರಹಿಸಿಡಬೇಕು ಎಂದು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ.
ಸಾಂಕ್ರಾಮಿಕ ರೋಗಳಾದ ಫ್ಲೇಗ್, ಕಾಲರಾ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಅಗತ್ಯವಾದ ತುರ್ತು ಕ್ರಮ ವಹಿಸಬೇಕು. ಆರೋಗ್ಯ ಇಲಾಖಾ ಸಿಬ್ಬಂದಿಯವರು ಮುಂಗಾರು ಅವಧಿಯಲ್ಲಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಅಗತ್ಯವಿರುವ ಔಷಧಿಗಳನ್ನು ಶೇಖರಿಸಿಟ್ಟುಕೊಂಡಿರಬೇಕು. ಜಾನವಾರುಗಳ ಆರೋಗ್ಯದಲ್ಲೂ ಏರುಪೇರುಗಳು ಬಾರದ ರೀತಿಯಲ್ಲಿ ಪಶುಸಂಗೋಪನೆ ಇಲಾಖೆಯೂ ಮುಂಜಾಗ್ರತಾ ಕ್ರಮ ಕೈಗೊಂಡಿರಬೇಕು ಎಂದು ಇಲಾಖೆಯನ್ನು ಎಚ್ಚರಿಸಲಾಗಿದೆ.
3 ದಿನಗಳೊಳಗೆ ಪರಿಹಾರ:
ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರ ಧನ ನೀಡಿಕೆಯಲ್ಲಿ ವಿಳಂಬಕ್ಕೆ ಅವಕಾಶವಾಗದಂತೆ ೩ ದಿನಗಳೊಳಗೆ ಪರಿಹಾರಧನ ವಿತರಣೆಯಾಗಬೇಕು. ಅನುದಾನ ಕಡಿಮೆ ಇದ್ದಾಗ ಮೇಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿ ಖಾತೆಗಳು ಜನತೆಗೆ ಅನುಕೂಲವಾಗುವ ರೀತಿಯಲ್ಲಿ ತುಂಬಿರುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆಯೂ ಎಚ್ಚರ ವಹಿಸಲು ನಿರ್ಧರಿಸಲಾಗಿದೆ. ತಾಲೂಕು ಸಮನ್ವಯ ಸಮಿತಿ ರಚನೆ:
ವಿಪತ್ತು ನಿರ್ವಹಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ, ಪಿಡಬ್ಲ್ಯುಡಿ ಅಧಿಕಾರಿ, ಮೆಸ್ಕಾಂ ಎಇಇ, ವಲಯ ಅರಣ್ಯ ಅಧಿಕಾರಿ,ತೋಟಗಾರಿಕೆ, ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಸಬ್‌ಇನ್ಸ್‌ಪೆಕ್ಟರ್‌ಗಳು, ತಾ.ಪಂ ಇಒ, ಇವರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. ಹೋಬಳಿ ಮಟ್ಟದ ನೋಡೆಲ್ ಅಧಿಕಾರಿಗಳ ನೇಮಕ ಕೂಡ ಮಾಡಲಾಗಿದ್ದು, ವೇಣೂರು ಹೋಬಳಿಗೆ ತಾ.ಪಂ ಇಒ ಕೆ.ಇ ಜಯರಾಂ, ಬೆಳ್ತಂಗಡಿ ಹೋಬಳಿಗೆ ಪಶುಸಂಗೋಪನೆ ಅಧಿಕಾರಿ ಡಾ. ರತ್ನಾಕರ ಮಲ್ಯ ಮತ್ತು ಕೊಕ್ಕಡ ಹೋಬಳಿಗೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಸಂಧ್ಯಾ ಸಚಿನ್ ನೂಜೋಡಿ ಇವರನ್ನು ನೇಮಿಸಲಾಗಿದೆ.
ತುರ್ತು ಸಹಾಯಪಡೆಗೆ ತಮ್ಮಣ್ಣ ಗೌಡ ಪಾಟೀಲ್ ಇಂಜಿನಿಯರ್, ತಾರಾಕೇಸರಿ ಅಕ್ಷರದಾಸೋಹ, ಶಿವಶಂಕರ್ ಮೆಸ್ಕಾಂ ಎಇಇ, ಸುಬ್ಬಯ್ಯ ನಾಯ್ಕ ಆರ್‌ಎಫ್‌ಒ, ಬಿಇಒ ರಮೇಶ್, ಆಹಾರ ನಿರೀಕ್ಷಕರು, ಅಗ್ನಿ ಶಾಮಕ ಠಾಣಾಧಿಕಾರಿ, ಆರೋಗ್ಯಾಧಿಕಾರಿ, ನಗರ ಪಂಚಾಯತ್ ಮುಖ್ಯಾಧಿಕಾರಿ, ಗೃಹರಕ್ಷಕದಳದ ಘಟಕಾಧಿಕಾರಿ, ಇವರುಗಳನ್ನೊಳಗೊಂಡ ೩ ವಿಭಾಗಗಳ ಹೋಬಳಿ ಮಟ್ಟದ ಸಹಾಯಪಡೆ ರಚನೆ ಮಾಡಲಾಗಿದೆ. ಈ ಕೆಳಕಂಡ ಎಲ್ಲಾ ವ್ಯವಸ್ಥೆಗಳ ಮೇಲೆ ತಾಲೂಕು ಆಡಳಿತದ ಪರವಾಗಿ ತಹಶಿಲ್ದಾರ್ ಗಣಪತಿ ಶಾಸ್ತ್ರಿಯವರು ನಿಗಾ ಇಡಲಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಚರಂಡಿ ಸ್ವಚ್ಚತೆ ಕಾರ್ಯ ಈಗಾಗಲೇ ನಡೆಸಲಾಗುತ್ತಿದೆ. ಜಿ.ಪಂ ಮತ್ತು ಲೋಕೋಪಯೋಗಿ ರಸ್ತೆಗಳ ಅಗತ್ಯ ಇರುವಲ್ಲಿ ರಸ್ತೆ ಚರಂಡಿ ಸುಸ್ಥಿತಿಗೆ ತರಲು ಇದೇ ಮೊದಲ ಬಾರಿಗೆ ತಾಲೂಕಿನ ಜೆಸಿಬಿ-ಹಿಟಾಚಿ ಮಾಲಕರ ಸಭೆ ನಡೆಸಿ ಸಹಕಾರ ಕೋರಲಾಗಿದ್ದು ಸ್ಪಂದನೆ ದೊರೆತಿದೆ. ಸದ್ಯದಲ್ಲೇ ಪಿಡಿಒ, ಮೆಸ್ಕಾಂ, ಅರಣ್ಯ ಮೊದಲಾದ ಪ್ರಮುಖ ಇಲಾಖೆಗಳ ಅಧಿಕಾರಿ ಸಭೆ ಕರೆದು ಮಳೆಗಾಲದ ತುರ್ತು ಕಾರ್ಯಾಚರಣೆಗೆ ಸೂಕ್ತ ನಿರ್ದೇಶನ  ನೀಡಲಾಗುವುದು. ಯಾವುದೇ ಸಂದರ್ಭ ಜನತೆಗೆ ತೊಂದರೆಯಾಗದಂತೆ 24 ಗಂಟೆ ಕಾರ್ಯಾಚರಿಸಲು  ಕಾರ್ಯಪಡೆ ಮೂಲಕ ಕ್ರಮ ಕೈಗೊಳ್ಳಲಾಗುವುದು.

ಹರೀಶ್ ಪೂಂಜ, ಶಾಸಕರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.