ಕೊಕ್ಕಡ ಎಂಡೋಪಾಲನಾ ಕೇಂದ್ರದಲ್ಲಿ ಪೋಷಕರ ಸಭೆ

ಕೊಕ್ಕಡ: ಎಂಡೋಸಲ್ಫಾನ್ ಸಂತ್ರಸ್ತರ ಬೇಡಿಕೆಗೆ ವಿರುದ್ಧವಾಗಿ ಸರಕಾರವು ಅನ್ಯಸಂಸ್ಥೆಗೆ ಕೇಂದ್ರದ ನಿರ್ವಹಣೆಯ ಜವಾಬ್ದಾರಿ ಹೊರಿಸಲು ಮುಂದಾದರೆ ಎಂಡೋಪಾಲನಾ ಕೇಂದ್ರದ ಎದುರಲ್ಲೇ ಸಂತ್ರಸ್ತರೊಂದಿಗೆ ಅಮರಣಾಂತ ಸತ್ಯಾಗ್ರಹ ನಡೆಸುತ್ತೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಎಚ್ಚರಿಕೆ ನೀಡಿದರು. ಅವರು ಕೊಕ್ಕಡ ಎಂಡೋಪಾಲನಾ ಕೇಂದ್ರದಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದರು.

ಸರಕಾರದ ನಿರ್ಲಕ್ಷ್ಯದಿಂದಲೇ ಎಂಡೋ ಸಮಸ್ಯೆ ಉಂಟಾಗಿದ್ದು, ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರವನ್ನು ತೆರೆಯುವುದನ್ನು ಬಿಟ್ಟು ಉತ್ತಮ ಸೇವಾ ಮನೋಭಾವನೆಯಿಂದ ಕಾರ್ಯನಿಹಿಸುತ್ತಿರುವ ಸೇವಾ ಭಾರತಿ ಸಂಸ್ಥೆಯನ್ನು ಹೊರಗಿಡುವ ಪ್ರಯತ್ನದ ಹಿಂದೆ ಕೆಲವು ದುಷ್ಟಶಕ್ತಿಗಳ ಕೈವಾಡವಿದೆ. ಜೂ.1ರಂದು ಮಧ್ಯಾಹ್ನ 2 ಗಂಟೆಗೆ ಆರೋಗ್ಯ ಇಲಾಖಾಧಿಕಾರಿಗಳು ಹಾಗೂ ಸಂಸ್ಥೆಯವರನ್ನು ಕರೆದು ಸಂತ್ರಸ್ತರ ಎದುರಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದೆಂದು ಶಾಸಕರು ತಿಳಿಸಿದರು.
ಕೊಕ್ಕಡದ ಎಂಡೋಪಾಲನ ಕೇಂದ್ರವನ್ನು ಮೊದಲಿಗೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ನಡೆಸಲಾಗಿತ್ತು. ಬಳಿಕ ಮಂಗಳೂರಿನ ಸೇವಾಭಾರತಿ ಸಂಸ್ಥೆ ನಡೆಸುತ್ತಿದ್ದು ಇದೀಗ ಟೆಂಡರ್ ಕರೆದ ನೆರಿಯದ ಸಿಯೋನ್ ಸಂಸ್ಥೆಗೆ ನೀಡುವ ಕ್ರಮಕ್ಕೆ ಸರಕಾರ ಮುಂದಾಗಿದೆ. ಆದರೆ ಸೇವಾಭಾರತಿ ಸಂಸ್ಥೆ ಉತ್ತಮ ರೀತಿಯಲ್ಲಿ ಸಂತ್ರಸ್ತರನ್ನು ನೋಡಿಕೊಳ್ಳುತ್ತಿದ್ದು, ಇದೀಗ ಬೇರೆ ಸಂಸ್ಥೆಯ ಹಿನ್ನೆಲೆ ಪರಿಶೀಲಿಸದೇ ಒಪ್ಪಿಸಿದ ಸರಕಾರದ ಕ್ರಮಕ್ಕೆ ಪೋಷಕರು ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದರು.
ಹಲವು ಕಡೆಗಳಲ್ಲಿ ಕೆಲವು ಸಂಸ್ಥೆಗಳು ಇಂತಹ ಕೇಂದ್ರಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಇದೀಗ ಟೆಂಡರ್ ವಹಿಸಿಕೊಂಡ ಸಿಯೋನ್ ಸಂಸ್ಥೆಯ ಬಗ್ಗೆ ಕೂಡ ಸಂತ್ರಸ್ತರು ಅನುಮಾನ ವ್ಯಕ್ತಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಸೇವಾಭಾರತಿ ಹೊರತುಪಡಿಸಿ ಬೇರೆಯವರಿಗೆ ಹಸ್ತಾಂತರಿಸಲು ಎಂಡೋ ಸಂತ್ರಸ್ತರು ಬಿಡುವುದಿಲ್ಲ ಎಂದು ಎಂಡೋ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆಂಗುಡೇಲು ಆಕ್ರೋಶ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.