HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನೆರಿಯ, ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ರಚನೆಗೆ ಸರಕಾರದ ಅನುಮೋದನೆ

ಸಣ್ಣ ನೀರಾವರಿ ಇಲಾಖೆ ಮೂಲಕ ಸಿಇಒ ಸಲ್ಲಿಸಿದ್ದ 7 ಕೋಟಿ ರೂ. ಅಂದಾಜು ವೆಚ್ಚದ ವರದಿಗೆ ಪುರಸ್ಕಾರ

ಬೆಳ್ತಂಗಡಿ: ನೇತ್ರಾವತಿ ನದಿ ನೀರು ಬತ್ತಿಹೋಗಿ ಭಕ್ತರಿಗೆ ಮತ್ತು ಜನಸಾಮಾನ್ಯರಿಗೆ ಆಗಿರುವ ತೀವ್ರ ತೊಂದರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಪತ್ರದ ಮೂಲಕ ಸರಕಾರದ ಗಮನಕ್ಕೆ ತಂದ ಬೆನ್ನಿಗೇ ಇದೀಗ ಆಡಳಿತದ ಕಡೆಯಿಂದ ಈ ಬಗ್ಗೆ ತುರ್ತು ಕ್ರಮ ಜರುಗಿದೆ.
ನೀರಿನ ಸಮಸ್ಯೆ ಪರಿಹಾರಕ್ಕಾಗಿ ನೆರಿಯ ಮತ್ತು ನೇತ್ರಾವತಿ ನದಿಯಲ್ಲಿ 2 ಕಡೆ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಸರಕಾರ ಶೀಘ್ರ ಅನುಮೋದನೆ ನೀಡಿದೆ.
ಬೆಂಗಳೂರು ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿ.ಪಂ ಸಿಇಒ ಡಾ. ಸೆಲ್ವಮಣಿ ಸಹಿತ ಅಧಿಕಾರಿಗಳ ವಿಶೇಷ ಸಭೆ ನಡೆಸಿದ ಸಿಎಂ ಕುಮಾರಸ್ವಾಮಿ ಅವರು ಉದ್ದೇಶಿತ ಮತ್ತು ಅವರೇ ಪರಿಶೀಲನೆಗೆ ಆದೇಶ ನೀಡಿದ್ದ ಈ ಕಾಮಗಾರಿಗೆ ಆಡಳಿತ ಮಂಜೂರಾತಿ ನೀಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ಅನುಷ್ಠಾನಕ್ಕೂ ಸೂಚಿಸಲಾಗಿದೆ.
ಸ್ಥಳ ಪರಿಶೀಲನ ನಡೆಸಿದ್ದ ಜಿ.ಪಂ ಸಿಇಒ ಡಾ. ಸೆಲ್ವಮಣಿ:
ಧರ್ಮಸ್ಥಳದ ನೀರಿನ ಸಮಸ್ಯೆ ಏರ್ಪಟ್ಟ ಬೆನ್ನಿಗೇ ಸಿಎಂ ಕುಮಾರ ಸ್ವಾಮಿ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಅವರು ಧರ್ಮಾಧಿಕಾರಿಗಳಿಗೆ ಕರೆಮಾಡಿ ಮಾತುಕತೆ ನಡೆಸಿದ್ದರು. ಬಳಿಕ ಅವರ ಸೂಚನೆ ಮೇರೆಗೆ ಜಿ.ಪಂ ಸಿಇಒ ಡಾ. ಸೆಲ್ವಮಣಿ ಅವರು ಧರ್ಮಸ್ಥಳ, ನೇತ್ರಾವತಿ ತೀರ, ಕಲ್ಮಂಜ ಮತ್ತು ನೆರಿಯ ಹೊಳೆಯಿಂದ ನೀರು ಬರುವ ಕುದ್ರಾಯ ಬಳಿ ವೀಕ್ಷಣೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದರು.
ಇದೇ ಹಿನ್ನೆಲೆಯಲ್ಲಿ ಸಿದ್ದ ಪಡಿಸಲಾದ ವರದಿಗೆ ಮಂಜೂರಾತಿ ನೀಡುವ ಕುರಿತು ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣರೆಡ್ಡಿ, ಈ ಹಿಂದಿನ ದ.ಕ ಜಿಲ್ಲಾಧಿಕಾರಿಯಾಗಿದ್ದು ಪ್ರಸ್ತುತ ನಗರ ಮೂಲಭೂತ ಸೌಕರ್ಯ ಅಭಿವೃದ್ದಿ ಮಂಡಳಿ ನಿರ್ದೇಶಕರಾಗಿರುವ ಎ.ಬಿ ಇಬ್ರಾಹಿಂ, ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಜಯರಾಮ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಜ್, ಧರ್ಮಸ್ಥಳ ಕ್ಷೇತ್ರದ ಪ್ರತಿನಿಧಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಿ ಸುರೇಂದ್ರ ಕುಮಾರ್, ಆನಂದ್ ಸಿಂಗ್ ಮೊದಲಾದವರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.