ಉಜಿರೆ: ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕತ್ವದ ಚುನಾವಣೆಯಲ್ಲಿ ರಾಜೇಂದ್ರ ಕುಮಾರ್ ಬಳಗದ ಇಚ್ಚಿಲ ಸುಂದರ ಗೌಡ ಉಜಿರೆ ಅವರು ಸಹಕಾರಿ ಭಾರತಿ ಅಭ್ಯರ್ಥಿ ಸುಂದರ ಹೆಗ್ಡೆ ವೇಣೂರು ಅವರನ್ನು 12-10 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ಆ ಮೂಲಕ 20 ವರ್ಷಗಳ ನಂತರವೂ ಅವರು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಮತ್ತೆ ಚುನಾಯಿತರಾಗಿದ್ದಾರೆ.
ನಿರ್ದೇಶಕತ್ವಕ್ಕಾಗಿ ಈ ಇಬ್ಬರು ಘಟಾನುಘಟಿ ಸಹಕಾರಿಗಳ ಜೊತೆ ನೇರ ಸ್ಪರ್ಧೆ ಏರ್ಪಟ್ಟಿತ್ತು.
ಕೊನೆ ಗಳಿಗೆಯಲ್ಲಿ ಮತದಾನ ನಡೆದು ಸುಂದರ ಗೌಡ ಇಚ್ಚಿಲ ಅವರು 12 ಮತಗಳನ್ನು ಪಡೆದರೆ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿ ಸುಂದರ ಹೆಗ್ಡೆ ವೇಣೂರು ಅವರು 10 ಮತಗಳನ್ನು ಪಡೆದು ಪರಾಭವಗೊಂಡರು.
ಒಂದು ಮತ ತಿರಸ್ಕೃತ: ತಾಲೂಕಿನಲ್ಲಿ ಇರುವ 23 ಮತಗಳ ಪೈಕಿ ಎಲ್ಲಾ ಮತಗಳು ಚಲಾವಣೆಯಾಗಿದೆ. ಆದರೆ ಯಾವುದೋ ಸಹಕಾರಿ ಸಂಘದ ಮತದಾರ ಪ್ರತಿನಿಧಿಯೊಬ್ಬರು ಇಬ್ಬರೂ ಅಭ್ಯರ್ಥಿಗಳಿಗೆ ಮತ ನೀಡಿದ್ದು ಆ ಹಿನ್ನೆಲೆಯಲ್ಲಿ 1 ಮತ ತಿರಸ್ಕೃತಗೊಂಡಿದೆ.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಚುನಾಯಿತರಾಗಿರುವ ಇಚ್ಚಿಲ ಸುಂದರ ಗೌಡ ಅವರು ತಾಲೂಕಿನ ಹಿರಿಯ ಸಹಕಾರಿಗಳಲ್ಲಿ ಒಬ್ಬರು. ಕಳೆದ 20 ವರ್ಷಗಳಿಂದ ಅವರು ಸಹಕಾರಿ ಯೂನಿಯನ್ ನಿರ್ದೇಶಕರಾಗಿದ್ದಾರೆ. ಒಂದು ಅವಧಿಗೆ 5 ವರ್ಷ ಜಿಲ್ಲಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 30 ವರ್ಷಗಳಿಂದ ಉಜಿರೆ ರಬ್ಬರ್ ಸೊಸೈಟಿ, 38 ವರ್ಷಗಳ ಸುದೀರ್ಘ ಅವಧಿಯಿಂದ ಉಜಿರೆ ಸಹಕಾರಿ ಸಂಘದ ಅಧ್ಯಕ್ಷರಾಗಿ, ಟಿಎಪಿಸಿಎಂಎಸ್, ತಾಲೂಕು ಸಹಕಾರಿ ಯೂನಿಯನ್, ಮಾಸ್ ಲಿಮಿಟೆಡ್ ಮಂಗಳೂರು, ಬೆಳ್ತಂಗಡಿ ಎಪಿಎಂಸಿ ನಿರ್ದೇಶಕರಾಗಿ, ನವೋದಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರೂ ಸೇರಿದಂತೆ 9 ರಷ್ಟು ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡವರಾಗಿದ್ದಾರೆ.