ಪೊಲೀಸರಿಂದ ದೌರ್ಜನ್ಯ ಬಗ್ಗೆ ಎಸ್‌ಪಿ, ಗೃಹಸಚಿವರು, ಮಾನವಹಕ್ಕು ಆಯೋಗಕ್ಕೆ ದೂರು

ಸಿಎಫ್‌ಐ ರಾಜ್ಯಾಧ್ಯಕ್ಷರಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಖಾಸಗಿ ಕಾಲೇಜು ವಿದ್ಯಾರ್ಥಿಗೆ ಎಬಿವಿಪಿ ಯವರು ದೌರ್ಜನ್ಯ ನಡೆಸಿದ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಸಿಎಫ್‌ಐ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ಮತ್ತು ಬರವಣಿಗೆ ಮೂಲಕ ತಿಳಿಸಿ ನ್ಯಾಯಸಮ್ಮತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಲಾಟಿಚಾರ್ಚ್ ನಡೆಸಿರುವ ಬೆಳ್ತಂಗಡಿ ಪೊಲೀಸರು ಅಲ್ಲಿಂದ ವಶಪಡಿಸಿಕೊಂಡ ನಮ್ಮ ಕಾರ್ಯಕರ್ತರ ಮೇಲೆ ಬಳಿಕ ಠಾಣೆಯಲ್ಲಿ ಮಾನವ ಹಕ್ಕನ್ನೂ ಮೀರಿ ಅನಾನುಷವಾಗಿ ನಡೆದುಕೊಂಡಿರುವ ಬಗ್ಗೆ ನಮ್ಮ ತೀವ್ರ ವಿರೋಧವಿದ್ದು ಇದಕ್ಕೆ ಕಾರಣಕರ್ತರಾದ ಸಿಬ್ಬಂದಿಗಳ ಮೇಲೆ ಎಸ್‌ಪಿ, ಮಾನವಹಕ್ಕು ಆಯೋಗ, ಪೊಲೀಸ್ ದೂರು ಪ್ರಾಧಿಕಾರ ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದೇವೆ ಎಂದು ಸಿಎಫ್‌ಐ ಸಂಘಟನೆ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ಕಾರ್ಯದರ್ಶಿ ಅಶ್ವಾನ್ ಸಾದಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಸ್ಟ್ಯಾಂಡ್‌ನಲ್ಲಿ ಸಾರ್ವಜನಿಕರ ಎದುರೇ ಪೊಲೀಸ್ ಸಿಬ್ಬಂದಿ ಲಾರೆನ್ಸ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಾವು ಮುಸಲ್ಮಾನ ವಿದ್ಯಾರ್ಥಿಗಳು ಉಪವಾಸವಿದೆ ಎಂದರೂ ಕಾನೂನನ್ನು ಮೀರಿ ದೌರ್ಜನ್ಯ ನಡೆಸಲಾಗಿದೆ. ಬಳಿಕ ಠಾಣೆಯಲ್ಲಿ ಎಸ್‌ಐ ರವಿ, ಸಿಬ್ಬಂದಿಗಳಾದ ಸಂದೀಪ್ ಮತ್ತು ಆನಂದ್ ಎಂಬವರು ತೀರಾ ಅಮಾನವೀಯವಾಗಿ ದೌರ್ಜನ್ಯ ನಡೆಸಿ, ಆಸ್ಪತ್ರೆ ದಾಖಲಾಗಿ ಕೇಸು ನೀಡದಂತೆಯೂ ಬೆದರಿಸಿದ್ದಾರೆ. ಮೆಡಿಕಲ್ ಚೆಕಪ್ ಮಾಡಿಸಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಪೊಲೀಸರ ಈ ಅಟ್ಟಹಾಸಕ್ಕೆ ಸ್ಥಳೀಯ ಶಾಸಕರು ಪ್ರಚೋದನೆ ಮಾಡುವ ಕೆಲಸ ಮಾಡಿದ್ದಾರೆ. ಅವರ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಮಧ್ಯಪ್ರವೇಶಿಸಿ ತಿಳಿಗೊಳಿಸಬೇಕಾದ ಶಾಸಕರು ಫೋನ್ ಮೂಲಕ ಪೊಲೀಸರಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ಕಾರ್ಯಕರ್ತರು ಗಮನಿಸಿದ್ದಾರೆ ಎಂದು ಆಪಾದಿಸಿದರು. ಘಟನೆ ಬಗ್ಗೆ ಸೂಕ್ತ ಕ್ರಮ ಆಗದಿದ್ದರೆ ಬೃಹತ್ ವಿದ್ಯಾರ್ಥಿ ಶಕ್ತಿ ಪ್ರದರ್ಶನದ ಮೂಲಕ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ಸಿಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ನೌಫಲ್, ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿ.ಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.