ಮಾಲಾಡಿ ಐಟಿಐ ಶಿಕ್ಷಕ ವಿಕ್ರಂ ಜೈನ್ ಮುಂಡೂರು ಬರ್ಭರ ಹತ್ಯೆ

ಮಚ್ಚಿನಿಂದ ಕೊಚ್ಚಿ ರಸ್ತೆ ಮಧ್ಯೆಯೇ ಕೊಲೆ: ಮೂವರು ಆರೋಪಿಗಳ ಬಂಧನ

ವಿಕ್ರಂ ಜೈನ್

ಮುಂಡೂರು: ಮಹಿಳೆಯ ಜೊತೆ ಪ್ರೇಮ ಪ್ರಕರಣಹಾಗೂ ರಸ್ತೆ ವಿಚಾರದ ದ್ವೇಷದಲ್ಲಿಮೂರು ಮಂದಿ ಸ್ನೇಹಿತರು ಪಾನಮತ್ತರಾಗಿ ಸ್ಥಳೀಯ ನಿವಾಸಿ ಹಾಗೂ ಮಾಲಾಡಿ ಸರಕಾರಿ ಐಟಿಐನ ಉಪನ್ಯಾಸಕನನ್ನು ತಲವಾರಿನಿಂದ ಕಡಿದು, ಚೂರಿಯಿಂದ ಹೊಟ್ಟೆಗೆ ಇರಿದು ಬರ್ಭರವಾಗಿ ಕೊಲೆಗೈದ ಭೀಕರ ಘಟನೆ ಮೇ 27 ರಂದು ತಡರಾತ್ರಿ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ನಡೆದಿದೆ.

ಮುಂಡೂರು ಗ್ರಾಮದ ನಿವಾಸಿ ಹಾಗೂ ಮಾಲಾಡಿ ಸರಕಾರಿ ಐಟಿಐಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ವಿಕ್ರಂ ಜೈನ್ (40ವ) ದುಷ್ಕರ್ಮಿಗಳಿಂದ ಕೊಲೆಯಾದ ಯುವಕರಾಗಿದ್ದಾರೆ. ಇವರ ಸ್ನೇಹಿತರಾದ ಪ್ರಕರಣದ ರೂವಾರಿ ಮುಂಡೂರು ಗ್ರಾಮದ ಉಜ್ರೆಬೈಲು ನಿವಾಸಿ ನಾಗೇಶ್ ಪೂಜಾರಿ(32ವ) ಹಾಗೂ ಪರನೀರು ಮನೆ ನಿವಾಸಿ ಡೀಕಯ್ಯ ನಲ್ಕೆ(39ವ) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಹಂತಕರು ಪರಾರಿಯಾಗಲು ಸಹಕರಿಸಿದ ಮಾಲಾಡಿ ಸಮೀಪದ ಊರ್ಲ ನಿವಾಸಿ ಗಣೇಶ್ ಪೂಜಾರಿ(34.ವ) ಇವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪರನೀರು ನಿವಾಸಿ ಅವಿನಾಶ್ ಪಾಸ್(25ವ) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅವಿನಾಶ್ ಕೊಲೆಯಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಮದ್ಯಸೇವನೆ ಸಮಯದಲ್ಲಿ ಮಾತ್ರ ಅಲ್ಲಿದ್ದು ನಂತರ ಮನೆಗೆ ತೆರಳಿದ್ದರೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.

ಘಟನೆ ವಿವರ: ಉಪನ್ಯಾಸಕ ವಿಕ್ರಂ ಜೈನ್ ಹಾಗೂ ಕೊಲೆ ಆರೋಪಿಗಳು ಒಂದೇ ಗ್ರಾಮದವರಾಗಿದ್ದು, ಸ್ನೇಹಿತರಾಗಿದ್ದಾರೆ. ಮೇ.27ರಂದು ಸಂಜೆ ವಿಕ್ರಂ ಜೈನ್ ಕಾಲೇಜಿನಿಂದ ಮನೆಗೆ ಬಂದು ರಾತ್ರಿ ಬೆಳ್ತಂಗಡಿಯತ್ತ ತೆರಳಿದ್ದರು. ಇದನ್ನು ತಿಳಿದ ಆರೋಪಿಗಳು ತಮಗೆ ಎರಡು ಕ್ವಾರ್ಟರ್ ಮದ್ಯ ತನ್ನಿ ನಾವು ಕೋಟಿಕಟ್ಟೆ ಬಸ್‌ನಿಲ್ದಾಣದ ಬಳಿ ಇರುವುದಾಗಿ ತಿಳಿಸಿದ್ದರು. ಅದರಂತೆ ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಮದ್ಯದಂಗಡಿಯಿಂದ ಮದ್ಯ ಖರೀದಿಸಿಕೊಂಡು ಮನೆಗೆ ಹೋಗುವ ದಾರಿಯ ಕೋಟಿಕಟ್ಟೆಗೆ ಹೋಗಿದ್ದರು. ಕೋಟಿ ಕಟ್ಟೆ ಬಸ್‌ಸ್ಟಾಂಟ್ ಬಳಿ ಅವರು ತನ್ನ ಆಲ್ಟೋ ಕಾರನ್ನು ನಿಲ್ಲಿಸಿ ಅಲ್ಲೇ ಕಾದು ಕುಳಿತ್ತಿದ್ದ ಆರೋಪಿಗಳ ಜೊತೆ ಮದ್ಯ ಸೇವಿಸಿದ್ದರು. ಆರೋಪಿಗಳು ವಿಕ್ರಂ ಅವರಿಗೆ ಚೆನ್ನಾಗಿ ಕುಡಿಸಿ ಅಮೆಲೇರಿಸಿದ್ದರು.
ನಂತರ ಪೂರ್ವನಿಯೋಜಿತವಾಗಿಯೇ ರಾತ್ರಿ ಸುಮಾರು 2.30ರ ಅಂದಾಜಿಗೆ ಆರೋಪಿಗಳು ವಿಕ್ರಂ ಜೈನ್ ಅವರ ಮುಖ ಕುತ್ತಿಗೆ, ಕೈಗೆ ತಲವಾರಿನಿಂದ ಕಡಿದಿದ್ದರು. ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ವಿಕ್ರಂ ಅವರು ತಪ್ಪಿಸಿಕೊಳ್ಳಲು ನಡಕರ ಕಡೆಗೆ ಹೋಗುವ ರಸ್ತೆಯತ್ತ ಓಡಿದ್ದು, ಬೆನ್ನಟ್ಟಿದ್ದ ಆರೋಪಿಗಳು ಹೊಟ್ಟೆಗೆ ಚೂರಿಯಿಂದ ತಿವಿದಿದ್ದರು. ವಿಕ್ರಂ ಜೈನ್ ಅವರು ರಸ್ತೆಯಲ್ಲೇ ಕುಸಿದು ಬಿದ್ದು ಅಲ್ಲೇ ಸಾವನ್ನಪ್ಪಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಗಳು ತಲವಾರನ್ನು ಅಲ್ಲೇ ರಸ್ತೆಯಲ್ಲಿ ಹಾಕಿ, ಹೊಟ್ಟೆಗೆ ಹಾಕಿದ ಚೂರಿಯನ್ನು ಸಹ ಅಲ್ಲೇ ಬಿಟ್ಟು ರಾತ್ರೋರಾತ್ರಿ ಪರಾರಿಯಾಗಿದ್ದರು. ಕೊಲೆ ಬಳಿಕ ಆರೋಪಿಗಳು ಪರಾರಿಯಾಗಲು ನಾಗೇಶ್ ಪೂಜಾರಿಯವರ ಅಣ್ಣ ಮಾಲಾಡಿ ಗ್ರಾಮದ ಊರ್ಲ ನಿವಾಸಿ ಗಣೇಶ್ ಪೂಜಾರಿಯವರ ಮನೆಗೆ ತೆರಳಿದ್ದರು. ರಾತ್ರಿ ಇಡೀ ಅಲ್ಲೇ ತಂಗಿದ್ದು, ಬೆಳಿಗ್ಗೆ 7 ಗಂಟೆಗೆ ಮೂರ್ಜೆ ಮೂಲಕ ಪರಾರಿಯಾಗಿದ್ದರು. ಮರುದಿನ ಬೆಳಿಗ್ಗೆ ಸ್ಥಳೀಯರು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಶವವನ್ನು ಕಂಡು ಇದು ವಿಕ್ರಂ ಜೈನ್ ಅವರೆಂದು ಗುರುತಿಸಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಳ್ತಂಗಡಿ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ .ಜಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು. ಸ್ಥಳದಲ್ಲಿ ಆಲ್ಟೋ ಕಾರು, ಮದ್ಯದ ಬಾಟಲಿ, ತಿಂಡಿ ತಿಂದು ಎಸೆದ ಪ್ಲಾಸ್ಟಿಕ್, ತಲವಾರು, ಓರ್ವ ಆರೋಪಿಯ ಚಪ್ಪಲ್ ಹಾಗೂ ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ಸುಟ್ಟ ಸ್ಥಿತಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸ್ಥಳಕ್ಕೆ ದ.ಕ ಜಿಲ್ಲಾ ಎಸ್‌ಪಿ ಭೇಟಿ
ಸ್ಥಳಕ್ಕೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮೀಪ್ರಸಾದ್, ಬಂಟ್ವಾಳ ಪ್ರಭಾರ ಡಿವೈಎಸ್‌ಪಿ ನಟರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿ ತನಿಖೆ ನಡೆಸಿದರು. ಮಂಗಳೂರಿನಿಂದ ಬೆರಳಚ್ಚು ತಜ್ಞರು ಬಂದು ತನಿಖೆ ನಡೆಸಿದರು. ಸ್ಥಳಕ್ಕೆ ಶ್ವಾನದಳವನ್ನು ತರಿಸಿದಾಗ ವಿಕ್ರಮ್ ಜೈನ್ ಮೃತದೇಹ ಇದ್ದ ಸ್ಥಳದಿಂದ ರಸ್ತೆಯಲ್ಲೇ ಸ್ವಲ್ಪ ದೂರ ಹೋಗಿ ನಿಂತಿತು. ಆರೋಪಿಗಳು ಕೊಲೆಗೈದ ನಂತರ ಯಾವುದೋ ವಾಹನದಲ್ಲಿ ತೆರಳಿರಬಹುದೆಂದು ಸಂಶಯಿಸಲಾಗಿತ್ತು.
ವಿಕ್ರಮ್ ಜೈನ್ ಅವರು ತನ್ನ ವೃದ್ಧ ತಾಯಿ ಜೊತೆ ವಾಸ್ತವ್ಯವಿದ್ದು, ನೂತನ ಮನೆಯನ್ನು ನಿರ್ಮಿಸುತ್ತಿದ್ದಾರೆ. ಮೃತರ ಸಹೋದರ ಪುತ್ತೂರಿನ ಕ್ಯಾಂಪ್ಕೋದಲ್ಲಿ ಉದ್ಯೋಗಿಯಾಗಿರುವ ವಿಜಯಕುಮಾರ್ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ302 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳ ಮಹಜರು:
ಬಂಧಿತ ಇಬ್ಬರು ಆರೋಪಿಗಳನ್ನು ಮೇ.29ರಂದು ಬೆಳಗ್ಗೆ ಪೊಲೀಸರು ಘಟನೆ ನಡೆದ ಮುಂಡೂರು ಗ್ರಾಮದ ಕೋಟಿಕಟ್ಟೆಗೆ ಕರೆದೊಯ್ದು ಮಹಜರು ನಡೆಸಿದರು. ಕೊಲೆ ನಡೆದ ಸ್ಥಳ ಹಾಗೂ ಮದ್ಯಸೇವಿಸಿದ ಸ್ಥಳದಲ್ಲಿ ಹಾಗೂ ಆರೋಪಿಗಳು ವಾಹನ ನಿಲ್ಲಿಸಿದ ಜಾಗದ ಮಹಜರು ನಡೆಸಿ ಪೂರಕ ತನಿಖಾ ಮಾಹಿತಿ ದಾಖಲಿಸಿಕೊಳ್ಳಲಾಯಿತು.
ಬಾಂಬೆಗೆ ಪರಾರಿಯಾಗಲು ಯತ್ನ
ವಿಕ್ರಂ ಅವರನ್ನು ಕೊಲೆಗೈದ ಆರೋಪಿಗಳು ಬಾಂಬೆಗೆ ಪರಾರಿಯಾಗಿ ಅಲ್ಲಿ ತಲೆಮರೆಸಿಕೊಳ್ಳಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ವಿವಿಧ ಸುಳಿವುಗಳನ್ನು ಪಡೆದುಕೊಂಡು ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಗಿಳಿದರು. ಆರೋಪಿಗಳು ಮಂಗಳೂರಿನಿಂದ ಬಾಂಬೆಗೆ ಮತ್ಸ್ಯಗಂಧ ರೈಲಿನಲ್ಲಿ ಹೋಗುತ್ತಿರುವ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಬೈಂದೂರು ರೈಲ್ವೆ ಸ್ಟೇಷನ್‌ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೆಂದು ವರದಿಯಾಗಿದೆ. ಆರೋಪಿಗಳನ್ನು ಒಂದು ದಿನದೊಳಗೆ ಬಂಧಿಸಿದ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಸ್ತೆಯುದ್ದಕ್ಕೂ ಅಲ್ಲಲ್ಲಿ ಬಿದ್ದ ರಕ್ತ
ಕೊಲೆ ನಡೆದ ಕೋಟಿಕಟ್ಟೆ ಬಸ್‌ನಿಲ್ದಾಣದ ಬಳಿಯಿಂದ ಬದ್ಯಾರ್‌ಗೆ ಬರುವ ರಸ್ತೆಯಲ್ಲಿ ಸ್ವಲ್ಪ ದೂರದವರೆಗೆ ರಸ್ತೆಯಲ್ಲಿ ಅಲ್ಲಲ್ಲಿ ರಕ್ತದ ಕಲೆ ಕಂಡು ಬಂದಿದೆ. ತಲವಾರಿನಿಂದ ಕಡಿಯುವಾಗ ಅಥವಾ ಚೂರಿ ಇರಿತದ ವೇಳೆ ಆರೋಪಿಯೋರ್ವನ ಕೈಗೂ ಗಾಯವಾಗಿ ಬೈಕ್‌ನಲ್ಲಿ ಹೋಗುವ ವೇಳೆ ರಕ್ತ ರಸ್ತೆಗೆ ಬಿದ್ದರಬಹುದೆಂದು ಶಂಕಿಸಲಾಗಿತ್ತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.