ಪುದುವೆಟ್ಟು: ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ಸ್ಥಾಪನೆ

Advt_NewsUnder_1
Advt_NewsUnder_1
Advt_NewsUnder_1

ಪುದುವೆಟ್ಟು: ಇಲ್ಲಿಯ ಬಾರಾಳಿಯಲ್ಲಿ ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದಿಂದ ಶ್ರೀ ನಾರಾಯಣಗುರು ಪುತ್ಥಳಿಯ ಸ್ಥಾಪನೆ ಹಾಗೂ ಗುರುಮಂದಿರ ಉದ್ಘಾಟನಾ ಸಮಾರಂಭವು ಮೇ.24 ರಂದು ಜರುಗಿತು. ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಮನೋಜ್ ಏರಳಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ಶಾಸಕ ಹರಿಶ್ ಪೂಂಜ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘ ಶಕ್ತಿ ಕಲಿಯುಗೇ ಎಂಬ ಕಲ್ಪನೆಯ ಮೂಲಕ ಕೇರಳದ ಮುಖೇನ ದಕ್ಷಿಣ ಭಾಗದಲ್ಲಿ ಸಮಾಜಕ್ಕೆ ಶಕ್ತಿ ನೀಡಿ ವಸುದೈವ ಕುಟುಂಬಕಂ ಎಂಬ ದೃಷ್ಟಿಕೋನವನ್ನು ಸಮಾಜಕ್ಕೆ ನೀಡಿದ ದಾರ್ಶನಿಕರು ಎಂದರು.
ಬೆಳ್ತಂಗಡಿ ತಾಲೂಕುನಲ್ಲಿ ಮೊತ್ತಮೊದಲ ಬಾರಿಗೆ ನಾರಾಯಣ ಗುರುಗಳ ಕಂಚಿನ ಪುತ್ಥಳಿ ಅನಾವರಣ ಮಾಡಿದ ಪುದುವೆಟ್ಟು ನಾರಾಯಣಗುರು ಬಿಲ್ಲವ ವೇದಿಕೆಯನ್ನು ಅಭಿನಂದಿಸಿದ ಅವರು, ಮಂದಿರ ನಿರ್ಮಾಣದಿಂದ ಸಮಾಜದ ಸಂಸ್ಕೃತಿ-ಸಂಸ್ಕಾರ ಉಳಿಸುವ ಕೆಲಸವಾಗಬೇಕು. ಈ ಮೂಲಕ ನಾರಾಯಣಗುರುಗಳ ಸಂದೇಶ ಮಕ್ಕಳಿಗೆ ತಿಳಿಸುವಂತಹ ಮಂದಿರವಾದರೆ ಪುತ್ಥಳಿ ನಿರ್ಮಾಣಕ್ಕೆ ಸಾರ್ಥಕತೆ ಬಂದಂತೆ ಎಂದು ಅವರು ನುಡಿದರು.
ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ಮಾತನಾಡಿ, ಜೀವನದಲ್ಲಿ ಸಂಸ್ಕಾರ ಮತ್ತು ಭಕ್ತಿಯ ಮಾರ್ಗದಲ್ಲಿ ಮುನ್ನಡೆದರೆ ಸಮಾಜದಲ್ಲಿ ಪರಿಪೂರ್ಣನಾಗಲು ಸಾಧ್ಯ. ನಾರಾಯಣ ಗುರುಗಳು ಸಮಾಜದ ದಾರಿದೀಪ. ಅಂದಿನ ಕಾಲದಲ್ಲೇ ಅಸ್ಪೃಶ್ಯತೆ, ಜಾತೀಯತೆಯನ್ನು ಮೆಟ್ಟಿ ನಿಂತವರು. ಅವರ ಸಂದೇಶವನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಅಜರಾಮರವಾಗಿ ಉಳಿಯಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಎಸ್.ಕೆ.ಡಿ.ಆರ್.ಡಿ.ಪಿ. ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಪ್ರಗತಿಪರ ಕೃಷಿಕ ರಮೇಶ್ ಪ್ರಭು, ಬೆಳ್ತಂಗಡಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಬಿಲ್ಲವ ಮಹಾ ಮಂಡಲದ ನಿರ್ದೇಶಕ ಯೋಗೀಶ್ ಕುಮಾರ್ ನಡಕ್ಕರ, ಬೆಳ್ತಂಗಡಿ ನಾರಾಯಣ ಗುರು ಸೇವಾ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಮಿತ್ತಬಾಗಿಲು, ಜಿ.ಪಂ ಸದಸ್ಯೆ ನಮಿತಾ, ಅಭಿನಂದನ್ ಹರೀಶ್ ಕುಮಾರ್, ಬೊಮ್ಮಣ್ಣ ಗೌಡ, ಸುಕುಮಾರನ್ ಎಂ.ಬಿ. ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಗೋಪಾಲಕೃಷ್ಣ ಇರ್ವತ್ರಾಯ ಬೆಂದ್ರಾಳ ಹಾಗೂ ಬಳಗದವರ ನೇತೃತ್ವದಲ್ಲಿ ಶ್ರೀ ನಾರಾಯಣಗುರು ಪುತ್ಥಳಿ ಸ್ಥಾಪನೆಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.