ಬೆಳ್ತಂಗಡಿ ರೋಟರಿ ಕ್ಲಬ್: ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ

ಪ್ರಜ್ಞಾವಂತ ನಾಗರಿಕರ ಭಾಗವಹಿಸುವಿಕೆ ಗುಣಾತ್ಮಕ ಅಭಿವೃದ್ದಿಗೆ ಪೂರಕ: ಶಾಸಕ  ಹರೀಶ್ ಪೂಂಜಾ

ಅಭಿವೃದ್ದಿ ಪ್ರಕ್ರಿಯೆಯಲ್ಲಿ ಜನರ ಸಹಭಾಗಿತ್ವ ಅತೀ ಅಗತ್ಯ. ಅಭಿವೃದ್ದಿಯ ಆಶಯಗಳನ್ನು ಸಾಧಿಸಲು ಸಾಮಾಜಿಕ ಹಾಗೂ ಆರ್ಥಿಕ ಯೋಜನೆಗಳು ರೂಪುಗೊಳ್ಳುತ್ತದೆ. ಅಭಿವೃದ್ದಿ ಎಂದರೆ ಸಮಾಜದ ಬಹುತೇಕ ಜನ ಬಯಸುತ್ತಿರುವ ರೀತಿಯಲ್ಲಿ ನಡೆಯುವ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಮತ್ತು ಬೆಳವಣಿಗೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಜನಪ್ರತಿನಿಧಿಗಳೊಂದಿಗೆ ಅಭಿವೃದ್ದಿ ಕಾರ್ಯಗಳಲ್ಲಿ ಕೈಜೋಡಿಸಿದಾಗ ಗುಣಮಟ್ಟದ ಅಭಿವೃದ್ದಿಯ ಕನಸನ್ನು ಸಾಕಾರಗೊಳಿಸಬಹುದು ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ  ಹರೀಶ್ ಪೂಂಜಾ ಅವರು ಅಭಿಪ್ರಾಯಪಟ್ಟರು.
ಶ್ರೀ ಹರೀಶ್ ಪೂಂಜಾ ಅವರು ಇತ್ತೀಚೆಗೆ ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಇತ್ತೀಚೆಗೆ ಆಯೋಜಿಸಿದ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಬೆಳ್ತಂಗಡಿ ರೋಟರಿ ಕ್ಲಬ್ ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹಯೋಗದಲ್ಲಿ ತಾಲೂಕಿನ ೩೮೧ ಅಂಗನವಾಡಿಗಳ ವಸ್ತುಸ್ಥಿತಿಯ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನೊಳಗೊಂಡ ಸಿಡಿಯನ್ನು ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಶಾಸಕರಿಗೆ ಹಸ್ತಾಂತರಿಸಿದರು.
ಬೆಳ್ತಂಗಡಿ ರೋಟರಿಯ ಅಧ್ಯಕ್ಷ ಜಗದೀಶ್ ಪ್ರಸಾದ್ ಅವರು ಮಾತನಾಡುತ್ತಾ ಜನರು ಗ್ರಾಮ ಮಟ್ಟಗಳಲ್ಲಿ ಸಂಘಟಿತರಾಗಿ ಬೆಳವಣಿಗೆಯ ಬಗ್ಗೆ ಜಾಗೃತರಾಗಿ ಯೋಚಿಸಿ ಯೋಜಿಸಿದಾಗ ಸೇರ್ಪಡೆಯುಳ್ಳ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ಬೆಳ್ತಂಗಡಿಯ ನ್ಯಾಯವಾದಿ ಧನಂಜಯ್ ರಾವ್.ಬಿ.ಕೆ ಅತಿಥಿಯವರನ್ನು ಸಭೆಗೆ ಪರಿಚಯಿಸಿದರು. ವೇದಿಕೆಯಲ್ಲಿ ಬೆಳ್ತಂಗಡಿ ರೋಟರಿಯ ನಿಯೋಜಿತ ಅಧ್ಯಕ್ಷ ಜಯರಾಂ, ನಿಯೋಜಿತ ಕಾರ್ಯದರ್ಶಿ ಪ್ರಕಾಶ್ ನಾರಾಯಣ್, ಆನ್ಸ್ ಕ್ಲಬ್ ಅಧ್ಯಕ್ಷೆ ಸರಸ್ವತಿ ಆರ್ ಭಟ್, ಕಾರ್ಯದರ್ಶಿ ಶೈಲಾ ಜಗದೀಶ್ ಉಪಸ್ಥಿತರಿದ್ದರು. ಆನೆಟ್ ಗಾಯತ್ರಿ ಭಿಡೆ ಪ್ರಾರ್ಥಿಸಿ ಕೊನೆಗೆ ರೋಟರಿ ಕಾರ್ಯದರ್ಶಿ ರಾಜೇಂದ್ರ ಕಾಮತ್ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಹಾಗೂ ರೋಟರಿ ಸಮುದಾಯ ದಳದ ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.