ಬಿಸಿಲ ತಾಪಕ್ಕೆ ಕೆಳ್ಕರ ದೇವಳ ಸನಿಹದ ನದಿಯಲ್ಲಿ ಮೀನುಗಳ ಸಾವು

ದಿನೇ ದಿನೇ ಏರುತ್ತಿರುವ ತಾಪಮಾನದ ಹೊಡೆತಕ್ಕೆ ನದಿಗಳಲ್ಲಿ ನೀರು ಬತ್ತಿಹೋಗಿದ್ದು ಪರಿಣಾಮವಾಗಿ ಕೆಳ್ಕರ ದೇಗುಲದ ಸನಿಹ ನದಿ ನೀರು ಬತ್ತಿದ್ದೂ ಮಾತ್ರವಲ್ಲದೆ, ಇರುವ ನೀರು ಬಿಸಿಲ ಬೇಗೆಗೆ ತಾಪವೇರಿ ದೇವರ ಮೀನುಗಳು ದಾರುಣವಾಗಿ ಅಸುನೀಗುತ್ತಿದೆ. ಗುರುವಾಯನಕೆರೆ-ಕಾರ್ಕಳ ಹೆದ್ದಾರಿಯ ಗುಂಡೇರಿಯಿಂದ ಗಿಳಿಕಾಪು -ಬೊಳ್ಳಾಜೆ ರಸ್ತೆಯಲ್ಲಿ ಸಾಗಿ ಕರಂಬಾರು ಗ್ರಾಮದ ಶ್ರೀ ಕೆಳ್ಕರ ಮಹಾಲಿಂಗೇಶ್ವರ ದೇಗುಲದ ಬಳಿ ಈ ಮತ್ಸ್ಯಸಾವು ಕಂಡುಬಂದಿದೆ.
ನದಿಯಲ್ಲಿ ಪೆರುವೊಳು ಜಾತಿಯ ಮೀನುಗಳು ಹೇರಳವಾಗಿದೆ. ಕಳೆದೆರಡು ತಿಂಗಳಿನಿಂದ ಹರಿವು ಕಡಿಮೆಯಾಗಿ ನೀರಿನ ಒರತೆಯಲ್ಲಿ ತೀವ್ರ ಇಳಿಮುಖವಾಗಿದೆ. ತಾಲೂಕಿನಲ್ಲಿ ಶಿಶಿಲದ ಶಿಶಿಲೇಶ್ವರ ದೇಗುಲದ ಪಕ್ಕದ ಕಪಿಲಾ ನದಿಯಲ್ಲಿ ಮತ್ಸ್ಯ ಸಂಕುಲ ಇದ್ದರೆ, ಇನ್ನೊಂದು ಇರುವುದು ಕೆಳ್ಕರೇಶ್ವರನ ಸನ್ನಿಧಿಯಲ್ಲಿ. ಇದು ದೇವರ ಮೀನು ಎಂಬುದಾಗಿ ಜನರಲ್ಲಿ ನಂಬಿಕೆ ಇರುವುದರಿಂದ ಈ ಪರಿಸದರಲ್ಲಿ ಮೀನಿನಬೇಟೆ ನಿಷೇಧವಿದೆ.  ಕಳೆದ ವರ್ಷ ಕೂಡ ಈ ಭಾಗದಲ್ಲಿ ನೀರು ಕಡಿಮೆಯಾಗಿ ಇದೇ ಸ್ಥಿತಿ ಏರ್ಪಟ್ಟಿತ್ತು.
ಲೋಡುಗಟ್ಟಲೆ ಮೀನು:
ಈ ದೇವರಗುಂಡಿಯಲ್ಲಿ ಲೋಡುಗಟ್ಟಲೆ ಮೀನು ಇದ್ದು ಇನ್ನೂ ಕೂಡ ಒಂದು ವಾರ ಮಳೆ ಬಾರದಿದ್ದರೆ ಹೆಚ್ಚಿನ ಮೀನುಗಳಿಗೆ ಪ್ರಾಣಾಪಾಯವಿದೆ ಎಂಬ ಆತಂಕ ಸ್ಥಳೀಯ ಭಕ್ತರಲ್ಲಿದೆ. ಕಳೆದ ವರ್ಷ ಸಿಯಾಳಾಭಿಷೇಕ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು ಎಂದು ಸ್ಥಳೀಯ ಕೃಷಿಕ ಹೊನ್ನಪ್ಪ ಸಾಲಿಯಾನ್ ನೆನಪಿಸಿಕೊಳ್ಳುತ್ತಾರೆ.
ಪೈಪ್ ಮೂಲಕ ನದಿಗೆ ನೀರು:
ಇದೀಗ ಸ್ಥಳೀಯ ನಿವಾಸಿ ಶುಭಕರ ಆಚಾರ್ಯ ಅವರು ಸ್ವಂತ ಕೊಳವೆ ಬಾವಿಯಿಂದ ದಿನಕ್ಕೆರಡು ಬಾರಿ ಸಾಕಷ್ಟು ನೀರನ್ನು ನದಿಗೆ ಬಿಡುತ್ತಿದ್ದಾರೆ. ಸತ್ತ ಮೀನುಗಳಿಗೆ ನದಿಯ ಪರಿಸರದಲ್ಲಿ ದುರ್ವಾಸನೆ ಬರಬಾರದೆಂದು ಆಗಾಗ್ಗೆ ಹೊಂಡ ತೆಗೆದು ಸತ್ತ ಮೀನುಗಳನ್ನು ದಫನ ಕೂಡ ಮಾಡುತ್ತಿದ್ದಾರೆ ಎಂದು ದೇಗುಲದ ಅರ್ಚಕ ನಾರಾಯಣ ಭಟ್ ಗುರಿಪಳ್ಳ ಹೇಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.