ಶ್ರದ್ಧಾ ಭಕ್ತಿಯ ದೇವರ ಪ್ರಾರ್ಥನೆಯಿಂದ ಕಷ್ಟಗಳು ನಿವಾರಣೆ: ಡಿ.ಹರ್ಷೇಂದ್ರ ಕುಮಾರ್

ಬೆಳಾಲು ಅನಂತಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ

ಬೆಳಾಲು : ಶ್ರದ್ಧಾ ಭಕ್ತಿಯಿಂದ ದೇವರ ಪ್ರಾರ್ಥನೆಯಿಂದ ಭಕ್ತರ ಕಷ್ಟಗಳು ನಿವಾರಣೆಯಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಮೇ 19 ರಂದು ಬೆಳಾಲು ಅನಂತ್ತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು
ಭಕ್ತರು ದೇವಸ್ಥಾನದಲ್ಲಿ ನಿಷ್ಠೆಯಿಂದ ಪ್ರಾರ್ಥಿಸಿ ತಮ್ಮ ಕಷ್ಟಗಳು ನಿವಾರಣೆಯಾಗುತ್ತದೆ ಎಂದು ದೃಢ ನಂಬಿಕೆ ಇರಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರಾಜ್ಯಾದ್ಯಂತ ದೇವಸ್ಥಾನಗಳ ಜೀರ್ಣೊದ್ಧಾರಕ್ಕೆ ಸಹಕಾರ ನೀಡಿದೆ. ಮುಂದಕ್ಕೆ ಊರವರು ಒಂದೇ ಮನಸ್ಸಿನಿಂದ ಸಂಘಟಿತರಾಗಿ ಮುನ್ನಡೆಸಬೇಕು. ಈ ದೇವಸ್ಥಾನದ ಅಭಿವೃದ್ಧಿಯಲ್ಲಿ ಊರವರು, ಸಮಿತಿಯ ಪದಾಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಧಾರ್ಮಿಕ ಭಾಷಣ ಮಾಡಿದ ಪುತ್ತೂರಿನ ವೇದಮೂರ್ತಿ ಶ್ರೀವತ್ಸ ಕೆದಿಲಾಯರು ಮಾತನಾಡುತ್ತಾ ದೇವಸ್ಥಾನದ ಜೀರ್ಣೊದ್ಧಾರದಲ್ಲಿ ಭಾಗಿಯಾಗುವುದೇ ಒಂದು ಯೋಗ. ಹಿರಿಯರು ನಿರ್ಮಿಸಿದ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದರಿಂದ ನೆಮ್ಮದಿಯಾಗುವುದು. ದೇವಸ್ಥಾನಗಳಲ್ಲಿ ನಿರಂತರ ಭಜನೆ ಸಂಸ್ಕಾರ ಉಳಿಸಿಕೊಳ್ಳುವ ಕಾರ್ಯ ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆನಂದ ಆಚಾರ್ಯ ಶಾಂತಾರಾಮ ಜ್ಯುವೆಲ್ಲರ್‍ಸ್ ಮಾತನಾಡುತ್ತಾ ಈ ಗ್ರಾಮದ ಇದೇ ಪರಿಸರದಲ್ಲಿ ಹುಟ್ಟಿ ಬೆಳೆದ ಜಾಗದಲ್ಲಿ ಊರವರ ಸಹಕಾರದಿಂದ ಅಭಿವೃದ್ಧಿಗೆ ತೊಡಗಿಸಲು ಯೋಗ ಬಂದಿದೆ. ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತಂತ್ರಿಗಳಾದ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್, ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಜೈನ್ ಬೆಳಾಲುಗುತ್ತು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತಾ.ಪಂ ಮಾಜಿ ಅಧ್ಯಕ್ಷ ಎನ್.ಜತ್ತನ್ನ ಗೌಡ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪಿ.ತಿಮ್ಮಪ್ಪ ಗೌಡ ಬನಂದೂರು, ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಯಶೋಧರ ಗೌಡ, ಹೇಮಲತಾ ಜೀವಂಧರ್ ಕುಮಾರ್ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಬೈಲುವಾರು ಸಮಿತಿಯ ಪದಾಧಿಕಾರಿಗಳು, ಉಪಸಮಿತಿ ಸಂಚಾಲಕರುಗಳು, ಪದಾಧಿಕಾರಿಗಳು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಲೆಕ್ಕ ಪರಿಶೋಧಕ ಬೆಳಾಲು ಪ್ರಾ.ಕೃ.ಪ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ಎಳ್ಳುಗದ್ದೆ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶಿವಪ್ರಸಾದ್.ಕೆ ವಂದಿಸಿದರು. ಶಿಕ್ಷಕ ಕೊರಗಪ್ಪ ಟಿ ಮತ್ತು ಗಿರೀಶ್ ಮಂಜೊಟ್ಟು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಠಲ ನಾಯಕ್ ಬಳಗ ವಿಟ್ಲ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರುಗಿತು. ದೇವಸ್ಥಾನದಲ್ಲಿ ರಂಗಪೂಜೆ, ದೇವರ ಭೂತಬಲಿ, ನಿತ್ಯಬಲಿ ಉತ್ಸವ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.