HomePage_Banner_
HomePage_Banner_
HomePage_Banner_

ಕುದುರೆಗಳ ಕಾಟಕ್ಕೆ ಸಾರ್ವಜನಿಕರು ಸುಸ್ತು!

ದ.ಕ. ಜಿಲ್ಲೆಯಲ್ಲಿ ಕುದುರೆಯ ಖರಪುಟಗಳ ಸದ್ದು ಕೇಳುವುದು ತೀರಾ ವಿರಳ. ಕುದುರೆಗಳನ್ನು ಸಾಕುವುದು ಇನ್ನೂ ವಿರಳ. ಆದರೆ ಇತ್ತೀಚೆಗೆ ಕೆಲವರು ವಿಶೇಷ ಎಂಬಂತೆ ಖರೀದಿಸಿರುವುದರಿಂದ ಅಲ್ಲಲ್ಲಿ ಕಾಣಸಿಗುತ್ತಿದೆ. ಆದರೆ ಕೆಲ ಮಾಲೀಕರು ಮಾತ್ರ ಈ ಕುದುರೆಗಳನ್ನು ಮೇಯಲು ರಸ್ತೆಗೆ ಬಿಟ್ಟು ಅಪಾಯ ಸೃಷ್ಟಿಸುತ್ತಿದ್ದಾರೆ. ಗುರುವಾಯನಕೆರೆ- ಉಪ್ಪಿನಂಗಡಿಯ ಪಿಲಿಗೂಡಿನಿಂದ ಹಲೇಜಿ ಎಂಬ ಪ್ರದೇಶಗಳಲ್ಲಿ ಎರಡು ಕುದುರೆಗಳು ನಿತ್ಯ ಓಡಾಡುವವರಿಗೆ ಕಾಣಸಿಗುತ್ತಿವೆ. ರಾತ್ರಿ- ಹಗಲು ಎನ್ನದೆ ಸದಾ ರಸ್ತೆ ಬದಿಯಲ್ಲಿ ಓಡಾಡಿಕೊಂಡಿದ್ದು ವಾಹನ ಚಾಲಕರಿಗೆ ಗೊಂದಲ ಮೂಡಿಸುತ್ತಿವೆ. ಈ ಕುದುರೆಯ ಕುತ್ತಿಗೆಗೆ ಹಗ್ಗವನ್ನೂ ಬಿಗಿದಿದ್ದು, ಕಟ್ಟಿ ಹಾಕಲು ಬಳಸುವ ಹಗ್ಗ ಉದ್ದನೆ ರಸ್ತೆಯಲ್ಲಿ ಹರಡಿಕೊಂಡಿರುತ್ತದೆ. ಇದು ವಾಹನ ಸವಾರರಿಗೆ ಹೆಚ್ಚು ಅಪಾಯಕಾರಿಯಾಗಿದೆ.

ಪ್ರಾಣಭಯ:
ರಸ್ತೆಯಲ್ಲಿ ಮೇಯುತ್ತಾ ಒಂದು ಬದಿಯಿಂದ ಮತ್ತೊಮದು ಬದಿಗೆ ಒಂದು ದೊಡ್ಡ ಕುದುರೆ ಹಾಗೂ ಮರಿ ಕುದುರೆ ಓಡಾಡುತ್ತಿರುವುದರಿಂದ ವಾಹನ ಚಾಲಕರು ಕೆಲವು ಬಾರಿ ಗೊಂದಲಕ್ಕೀಡಾಗುತ್ತಿದ್ದಾರೆ. ಈ ಕುದುರೆಗಳು ಕಂದು ಬಣ್ಣದ್ದಾಗಿರುವುದರಿಂದ ಮಂದ ಬೆಳಕಿನ ಹಾಗೂ ರಾತ್ರಿ ಬೆಳಕಿನಲ್ಲಿ ಕೂಡಲೇ ಕಾಣಿಸುವುದಿಲ್ಲ. ಈ ಮೂಲಕ ವಾಹನ ಸವಾರರಿಗೆ ಪ್ರಾಣಭಯ ಮೂಡಿಸುತ್ತಿವೆ. ನಾಯಿ, ಬೆಕ್ಕು, ಆಡುಗಳು ರಸ್ತೆಯಲ್ಲಿ ಓಡಾಡುವುದು ಸಾಮಾನ್ಯ, ಆದರೆ ಕುದುರೆ ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ದ್ವಿ-ಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕಾದ ವಾತಾವರಣ ಸೃಷ್ಠಿಯಾಗಿದೆ. ಬರೀ ವಾಹನ ಸವಾರರಿಗಷ್ಟೇ ಅಲ್ಲ, ದೊಡ್ಡ ವಾಹನಗಳಾದ ಲಾರಿ, ಟಿಪ್ಪರ್ ವೇಗವಾಗಿ ಬಂದು ಗಮನಿಸದಿದ್ದರೆ ಕುದುರೆಗಳ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಜೊತೆಗೆ ಸ್ಥಳೀಯ ಸರಕಾರಿ ಶಾಲೆಯಲ್ಲಿ ಮಕ್ಕಳೇ ನೆಟ್ಟು ಬೆಳೆಸಿದ ಬಸಳೆಯನ್ನೂ ತಿಂದು ಹಾಕಿವೆ.

ಮನೆಯಲ್ಲಿ ಸಾಕುತ್ತಿಲ್ಲ:
ಸದಾ ರಸ್ತೆಯಲ್ಲಿ ಓಡಾಡುವ ಈ ಕುದುರೆಗಳನ್ನು ಅದರ ಮಾಲಿಕರು ಚಿಂತೆಯೇ ಇಲ್ಲವೆಂಬಂತೆ ರಸ್ತೆಗೆ ಬಿಟ್ಟಿದ್ದಾರೆ. ಕುದುರೆಗಳ ಮಾಲೀಕರ ಯಾರು ಎಂಬುದೂ ತಿಳಿದಿಲ್ಲ. ಕನಿಷ್ಠ ದಿನಕ್ಕೆ ಒಂದು ಹೊತ್ತಾದರೂ ಈ ಮೂಕ ಪ್ರಾಣಿಗಳಿಗೆ ಆಹಾರವನ್ನೂ ನೀಡುವ ಪರಿಜ್ಞಾನವನ್ನೂ ಅವರು ತೋರುತ್ತಿಲ್ಲ. ಆದ್ದರಿಂದ ಆಹಾರಕ್ಕಾಗಿ ದಿನವಿಡೀ ರಸ್ತೆಯಲ್ಲಿ ತಿರುಗಾಡುತ್ತಿವೆ. ಆಹಾರ ನೀಡಲು ಸಾಧ್ಯವಾಗದಿದ್ದರೆ ಖರೀದಿಸುವುದು ಏಕೆ? ರಸ್ತೆಗೆ ಬಿಡುವುದು ಏಕೆ? ಒಂದು ವೇಳೆ ಅಪಾಯ ಸಂಭವಿಸಿದರೆ ಇದಕ್ಕೆ ಕುದುರೆಗಳ ಮಾಲೀಕರೇ ನೇರ ಹೊಣೆ ಎಂದು ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಸಂಭಾವ್ಯ ಅಪಾಯ ನಡೆಯುವ ಮುನ್ನ ಕುದುರೆಯ ಮಾಲೀಕರಿಗೆ ಮನೆಯಲ್ಲಿಯೇ ಸಾಕುವಂತೆ ಅಥವಾ ಗೋಶಾಲೆಗೆ ನೀಡುವಂತೆ ಸಂಬಂಧಿಸಿದ ಇಲಾಖೆಗಳು ಸೂಚನೆ ನೀಡಬೇಕು ಎಂದೂ ಕೋರುತ್ತಿದ್ದಾರೆ.ಅಪಾಯ ನಡೆಯುವ ಮುನ್ನ ಸಂಬಧಿಸಿದ ಇಲಾಖೆಗಳು ಎಚ್ಚೆತ್ತು, ಸಂಬಂಧಪಟ್ಟವರಿಗೆ ಸೂಕ್ತ ಸೂಚನೆ ನೀಡುವ ಕಾರ್ಯವನ್ನು ನಡೆಸಿದಲ್ಲಿ ಹಲವು ಜೀವಗಳನ್ನು ಉಳಿಸಬಹುದು. ಮುಖ್ಯವಾಗಿ ಈ ಪ್ರಾಣಿಗಳನ್ನು ಸಾಕುವ ಮಾಲಕರಿಗೆ ಅರಿವು ಮೂಡಿಸಿ ಸಂಭಾವ್ಯ ಅಪಾಯ ತಪ್ಪಿಸಬೇಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.