ಬೆಳ್ತಂಗಡಿ: ಎತ್ತಿನಹೊಳೆ ಯೋಜನೆ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಮರುಪರಿಶೀಲನೆ ಪೂರ್ಣಗೊಳಿಸಿರುವ ಎನ್ಜಿಟಿ ತೀರ್ಪನ್ನು ಕಾಯ್ದಿರಿಸಿದೆ. ಯೋಜನೆಗೆ ಕರಾವಳಿ ಭಾಗದ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೇ. 13 ರಂದು ಅರ್ಜಿಯ ಮರುಪರಿಶೀಲನೆ ನಡೆಸಿತು. ಅರ್ಜಿದಾರರು ಮತ್ತು ರಾಜ್ಯ ಸರ್ಕಾರಕ್ಕೆ ಒಂದು ವಾರದಲ್ಲಿ ಹೆಚ್ಚುವರಿ ವಾದವನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಿದ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ತೀರ್ಪು ಕಾಯ್ದಿರಿಸಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲಿಸಿದ ಡಿಕೆಶಿ
2017ರ ಅಕ್ಟೋಬರ್ 6 ರಂದು ಹಸಿರು ನ್ಯಾಯಾಧೀಕರಣ ಯೋಜನೆಗೆ ಷರತ್ತು ಬದ್ಧ ಅನುಮತಿ ನೀಡಿತ್ತು. ಆದರೆ ಪೀರದಲ್ಲಿದ್ದ ತಜ್ಞ ಸದಸ್ಯ ರಂಜನ್ ಚಟರ್ಜಿ ಅವರು ಷರತ್ತುಗಳನ್ನು ಪ್ರಕಟಿಸುವ ಮೊದಲೇ ನಿವೃತ್ತರಾಗಿದ್ದರಿಂದ, 2018 ರ ಮಾರ್ಚ್ 20 ರಂದು ಪ್ರಕರಣದ ಮರು ವಿಚಾರಣೆ ಆರಂಭವಾಗಿತ್ತು.
ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಾತ್ರ:
ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಬರ ಪೀಡಿತ ಜಿಲ್ಲೆಗಳಿಗೆ ನೇತ್ರಾವತಿ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲು ನಿಯಮಾನುಸಾರ ಯೋಜನೆ ಕೈಗೊಳ್ಳಲಾಗಿದೆ. ಯೋಜನೆ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಿಂಧುತ್ವವೇ ಪ್ರಶ್ನಾರ್ಹ ಎಂದು ರಾಜ್ಯ ಸರ್ಕಾರದ ಪರವಾಗಿ ವಕೀಲ ಅಶೋಕ್ ದೇವರಾಜ್ ವಾದ ಮಂಡನೆ ಮಾಡಿದರು.
ಎತ್ತಿನಹೊಳೆ ಯೋಜನೆಗೆ ಸರ್ಕಾರದ ಹಸಿರು ನಿಶಾನೆ
ಎತ್ತಿನಹೊಳೆ ಯೋಜನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಪರಿಸರವಾದಿ ಕೆ.ಎನ್ ಸೋಮಶೇಖರ್, ಕಿಶೋರ್ ಕುಮಾರ್, ಪುರುಷೋತ್ತಮ ಚಿತ್ರಾಪುರ ಎಂಬುವವರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ್ದ ಎನ್ಜಿಟಿ 2017ರ ಅಕ್ಟೋಬರ್ 6ರಂದು ಯೋಜನೆಗೆ ಷರತ್ತು ಬದ್ಧ ಅನುಮತಿ ನೀಡಿತ್ತು. ಇದರ ಮರು ಪರುಶೀಲನಾ ಅರ್ಜಿಯ ವಿಚಾರಣೆ ಈಗ ನಡೆಯುತ್ತಿದೆ. ಯೋಜನೆ ಕೈಗೊಳ್ಳುವಾಗ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘನೆ ಮಾಡಲಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇರುವ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಅರ್ಜಿದಾರರು ವಾದಮಂಡಿಸಿದ್ದಾರೆ.
ಏನದು ಎತ್ತಿನ ಹೊಳೆ ಯೋಜನೆ?
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 29 ತಾಲೂಕಿನ ಸುಮಾರು 68 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2014ರ ಫೆ.17 ರಂದು ಯೋಜನೆಗೆ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. 2014 ರ ಮಾರ್ಚ್ 3 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಲ್ಲಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದಾರೆ. ಕರಾವಳಿ ಭಾಗದ ಜನರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ವರ್ಷ ಜೂನ್ 15 ರಿಂದ ಅಕ್ಟೋಬರ್ 31 ರ ತನಕ 135 ದಿನಗಳು ಮಾತ್ರ ಈ ಯೋಜನೆಯಿಂದ ನೀರು ಎತ್ತಲಾಗುತ್ತದೆ. ಕುಡಿಯುವ ನೀರು ಮತ್ತು 527 ಕೆರೆಗಳನ್ನು ತುಂಬಿಸಲು ಒಟ್ಟು 24.01 ಟಿಎಂಸಿ ಅಡಿ ನೀರು ಸಿಗಲಿದೆ ಎಂದು ಅಂದಾಜಿಸಲಾಗಿದೆ.