ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಸ್ವಾತಂತ್ರ್ಯದ ಒಂದು ಹೆಜ್ಜೆ ಮಾತ್ರ

Advt_NewsUnder_1
Advt_NewsUnder_1
Advt_NewsUnder_1

ಜನರಿಗೆ ಗ್ರಾಮ ಸ್ವರಾಜ್ಯದ ಆಡಳಿತ ದೊರಕುವುದೇ ನಿಜವಾದ ಸ್ವಾತಂತ್ರ್ಯ: ಮಹಾತ್ಮ ಗಾಂಧಿ

ರಾಹುಲ್ ಗಾಂಧಿಯವರ ಕ್ಷೇತ್ರವಾದ ಅಮೇಠಿ, ಮೋದಿಯವರ ಕ್ಷೇತ್ರವಾದ ವಾರಣಾಸಿಯಲ್ಲಿ ಸ್ಪರ್ಧಿಸ ಬಯಸಿ ಅಲ್ಲಿಗೆ ಹೋಗಿರುವುದು ಅತ್ಯಂತ ಪ್ರಯಾಸದ, ಖರ್ಚು ವೆಚ್ಚದ ಹಾಗೂ ರಿಸ್ಕ್‌ನ ಕೆಲಸವಾಗಿದ್ದರೂ ಅಲ್ಲಿಯ ಜನರ ಸ್ಪಂದನ ಇಡೀ ದೇಶವನ್ನು ಸುತ್ತಿದ ಅನುಭವ ನೀಡಿದೆ. ದೇಶದ ರಾಜಕೀಯದ ಚಿತ್ರಣ ನೀಡಿದೆ. ಆ ಕ್ಷೇತ್ರಗಳಲ್ಲಿ ಸ್ಪರ್ಧಿಸ ಬಯಸಿರುವುದರ ಉದ್ದೇಶದ ಬಗ್ಗೆ ಪತ್ರಿಕೆಯಲ್ಲಿ ಹಲವಾರು ಬಾರಿ ಸಂಪಾದಕೀಯ ಬರೆದಿದ್ದೇನೆ. ಅದನ್ನು ನನ್ನ ಫೇಸ್‌ಬುಕ್‌ನಲ್ಲಿಯೂ ಹಾಕಿದ್ದೇನೆ. ಆದರೂ ಕೆಲವರು ಹೋದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ಅದನ್ನು ನಿವಾರಿಸಲಿಕ್ಕಾಗಿ ಈ ಕೆಳಗೆ ಸಂಕ್ಷಿಪ್ತವಾಗಿ ಉತ್ತರವನ್ನು ನೀಡಲಿದ್ದೇನೆ. ಸಂದರ್ಭ ಒದಗಿ ಬಂದಲ್ಲಿ ಅದನ್ನು ಮತ್ತು ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯದ ಚಿಂತನೆಯನ್ನು ಸಾರ್ವಜನಿಕವಾಗಿ ಚರ್ಚೆಗೆ ವಿಷಯವನ್ನಾಗಿ ಮಾಡಬೇಕೆಂದಿದ್ದೇನೆ.

ಮೋದಿಯವರಿಗಾಗಲಿ, ರಾಹುಲ್ ಗಾಂಧಿಯವರಿಗಾಗಲಿ ಮತವಲ್ಲ. ನಮ್ಮ ಪ್ರತಿನಿಧಿಗಾಗಿ ನಮ್ಮ ಮತ: ಭಾರತಕ್ಕೆ ಸ್ವಾತಂತ್ರ್ಯ ಅಂದರೆ ಬ್ರಿಟಿಷರನ್ನು ಓಡಿಸುವುದು ಮಾತ್ರವಲ್ಲ. ಹಳ್ಳಿಗಳಿಗೆ ಸ್ವಯಂ ಆಡಳಿತದ ಗ್ರಾಮ ಸ್ವರಾಜ್ಯ ದೊರಕಿ ಎಲ್ಲರಿಗೂ ಸಮಾನ ಅವಕಾಶ, ನ್ಯಾಯ ದೊರಕಿ ಅತ್ಯಂತ ದುರ್ಬಲ ವ್ಯಕ್ತಿಯೂ ಸ್ವತಂತ್ರನಾಗಿ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತಾಗುವುದೇ ನಿಜವಾದ ಸ್ವಾತಂತ್ರ್ಯ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಇಲ್ಲದಿದ್ದರೆ ಬ್ರಿಟೀಷರ ಸ್ಥಾನದಲ್ಲಿ ಜನಪ್ರತಿನಿಧಿಗಳು ಕುಳಿತು ಅವರ ರಾಜ್ಯವೇ ಮುಂದುವರಿಯುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆ ಆಗದೆ ನಿಜವಾದ ಸ್ವಾತಂತ್ರ್ಯ ದೊರಕಬೇಕಾದರೆ ನಮ್ಮ ಮತದಾನ ನಮ್ಮ ಪ್ರತಿನಿಧಿಯನ್ನು ಗೆಲ್ಲಿಸಿ ಕೆಲಸ ಮಾಡಿಸಲಿಕ್ಕೆ, ಅವನಿಗೆ ಜವಾಬ್ದಾರಿಯನ್ನು ಕೊಡಲಿಕ್ಕೆ ಆಗಬೇಕು. ಜನಪರವಾಗಿ ಕೆಲಸ ಮಾಡದಿದ್ದರೆ ಅವನನ್ನು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡು ಹಿಂದಕ್ಕೆ ಕರೆಸಲಿಕ್ಕೂ ನಮಗೆ ಶಕ್ತಿ ಕೊಡುವಂತಾಗಬೇಕು. ಅಂದರೆ ಮತದಾನ (ಕೇಂದ್ರದಲ್ಲಿದ್ದವರನ್ನು ಗೆಲ್ಲಿಸಲಿಕ್ಕಾಗಿ) ರಾಹುಲ್ ಗಾಂಧಿಯವರಿಗೆ, ಮೋದಿಯವರಿಗೆ ಎಂದಾಗಬಾರದು. ಅವರನ್ನು ಕೇಳುವ ಶಕ್ತಿಯೂ ನಮಗಿರುವುದಿಲ್ಲ. ಮಾತ್ರವಲ್ಲ ಅವರಿಗಾಗಿ ಮತ ಎಂದು ಹೇಳಿದರೆ ನಮ್ಮ ಪ್ರತಿನಿಧಿ ಕೆಲಸ ಮಾಡದಿದ್ದರೆ ಆತನನ್ನು ಕೇಳುವ ಶಕ್ತಿ ನಮಗೆ ಇರುವುದಿಲ್ಲ. ಹೊಣೆಗಾರನನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆತ ನಮ್ಮ ಕೆಲಸ ಮಾಡದೆ, ನಾಯಕರ ಸೇವೆ ಮಾಡುವುದಕ್ಕೆ ಆದ್ಯತೆ ನೀಡುತ್ತಾನೆ ಯಾಕೆಂದರೆ ಅವನಿಗೆ ಸೀಟು ಕೊಟ್ಟದ್ದು ಮಾತ್ರವಲ್ಲ, ಗೆಲ್ಲಿಸಿದ್ದೂ ಅವರ ಮತದಿಂದಲೇ ಎಂದಾಗುತ್ತದೆ. ಅದಕ್ಕಾಗಿ ಮತದಾರರು ತಮ್ಮ ಮತವನ್ನು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕಾಗಿ ಪ್ರತಿನಿಧಿಗೆ ನೀಡುವ ಆದ್ಯತೆ ಬರಬೇಕೆಂದು ವಾದಿಸಿದ್ದೇನೆ. ಮತದಾರರು ಆ ರೀತಿಯ ನಿರ್ಣಯ ತೆಗೆದುಕೊಂಡರೆ ನಾಯಕರೂ ಬದಲಾಗುತ್ತಾರೆ. ಮತ್ತೆ ನಮಗೆ ನೀಡಿ ಎಂದು ಕೇಳದೆ ಕ್ಷೇತ್ರಕ್ಕೆ ಪಕ್ಷದಿಂದ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ಆತನ ಕೆಲಸದ ಮೇಲೆ ಮತ ನೀಡುವಂತೆ ಕೇಳುವಂತಾಗುತ್ತದೆ. ಆತ ಕೆಲಸ ಮಾಡದಿದ್ದರೆ, ನಾವೇ ಜವಾಬ್ದಾರಿ ಎಂದು ಹೇಳುತ್ತಾ ಆತನಿಗೆ ನೀಡುವ ಮತ ನಮಗೆ ಸಲ್ಲುತ್ತದೆ ಎಂದು ಹೇಳುವಂತಾಗುತ್ತದೆ. ಅದು ಮತದಾನ ನೀಡುವವರಿಗೆ ಸಿಗುವ ಜಯ ಎಂದು ಹೇಳಿದರೆ ತಪ್ಪಾಗುತ್ತದೆಯೇ?

ಮೋದಿ, ರಾಹುಲ್‌ರವರ ವಿರುದ್ಧ ನನ್ನ ಸ್ಪರ್ಧೆಯಾಗಿರಲಿಲ್ಲ. ಗ್ರಾಮ ಸ್ವರಾಜ್ಯದ ಜನಜಾಗೃತಿಗಾಗಿ ಅಲ್ಲಿ ನನ್ನ ಸ್ಪರ್ಧೆಯಾಗಿತ್ತು: ಈ ವಿಚಾರವನ್ನು ದೇಶದ ಅತ್ಯುನ್ನತ ನಾಯಕರಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ದೇಶದ ಪ್ರಧಾನಿ ಮೋದಿಯವರ ಗಮನಕ್ಕೆ ತರಲು ಅವರು ಸ್ಪರ್ಧಿಸುವ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದೆ. ಅವರನ್ನು ಗೆಲ್ಲಿಸುವ ಅಲ್ಲಿಯ ಮತದಾರರಿಗೆ ಗ್ರಾಮ ಸ್ವರಾಜ್ಯದ ಚಿಂತನೆಯನ್ನು ಹಂಚುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೇನೆ. ಆ ಮೂಲಕವಾದರೂ ರಾಹುಲ್ ಗಾಂಧಿ ಮತ್ತು ಮೋದಿಯವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ರಾಹುಲ್ ಗಾಂಧಿ ಮತ್ತು ಮೋದಿಯವರ ವಿರುದ್ಧವೂ ನನ್ನ ಸ್ಪರ್ಧೆಯಾಗಿರಲಿಲ್ಲ. ಯಾರನ್ನೂ ಗೆಲ್ಲಿಸಲು ಅಥವಾ ಸೋಲಿಸಲಿಕ್ಕಾಗಿಯೂ ಆಗಿರಲಿಲ್ಲ. ಅಲ್ಲಿ ದೊರಕುವ ಮತಗಳಿಗಾಗಿಯೂ ಅಲ್ಲ. ಜನತೆಗೆ ಮತ್ತು ನಾಯಕರಿಗೆ ಗ್ರಾಮ ಸ್ವರಾಜ್ಯದ ವಿಷಯ ತಲುಪಿದರೆ ಅದನ್ನೇ ಜಯವೆಂದು ಪರಿಗಣಿಸಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ವಿಚಾರವನ್ನು ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಗಳಲ್ಲಿ ಪ್ರಾರಂಭಿಸಿ ದೇಶಕ್ಕೆ ಅಲ್ಲದಿದ್ದರೂ ಕರ್ನಾಟಕ ರಾಜ್ಯಕ್ಕೆ ಹರಡಬೇಕೆಂಬ ಆಶಯ ನನ್ನದು. ಅದಕ್ಕೆ ಪ್ರೋತ್ಸಾಹ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯ ಓದುಗರಿಂದ ದೊರಕಿ ರಾಜ್ಯಾದ್ಯಂತ ಹರಡಲಿ ಎಂಬ ಆಶಯದಿಂದ ಈ ಲೇಖನವನ್ನು ಮತ್ತು ನನ್ನ ಪ್ರಯತ್ನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.