ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ: ನಿರ್ದೇಶಕರಾಗಿ ಬಿ. ನಿರಂಜನ್, ಪದ್ಮನಾಭ ಶೆಟ್ಟಿ ಅರ್ಕಜೆ ಅವಿರೋಧ ಆಯ್ಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ 16 ನಿರ್ದೇಶಕರ ಸ್ಥಾನಗಳಿಗೆ ಮೇ 12 ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಮೇ.6 ರಂದು ಎಲ್ಲಾ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಪುತ್ತೂರು ಉಪವಿಭಾಗದಿಂದ ನಾಮಪತ್ರ ಸಲ್ಲಿಸಿದ್ದ ಬೆಳ್ತಂಗಡಿ ತಾಲೂಕಿನ ಹಾಲಿ ನಿರ್ದೇಶಕರಾಗಿರುವ ಬಿ. ನಿರಂಜನ್ ಕುಮಾರ್ ಬಾವಂತಬೆಟ್ಟು ಹಾಗೂ ಪದ್ಮನಾಭ ಶೆಟ್ಟಿ ಅರ್ಕಜೆ ಅವರು ಪುನರಾಯ್ಕೆಯಾಗಿದ್ದಾರೆ. ಮಂಗಳೂರು ಉಪವಿಭಾಗದಿಂದ ಮೂವರು, ಪುತ್ತೂರು ಉಪವಿಭಾಗದಿಂದ ನಾಲ್ವರು, ಕುಂದಾಪುರ ಉಪವಿಭಾಗ ದಿಂದ ಏಳು ಮತ್ತು ಎರಡು ಮಹಿಳಾ ಸ್ಥಾನಗಳು ಸೇರಿದಂತೆ ಒಟ್ಟು 16 ನಿರ್ದೇಶಕರ ಸ್ಥಾನಗಳಿಗೆ ಆಯ್ಕೆ ನಡೆದಿದೆ. ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಒಳಗೊಂಡ ಮಂಗಳೂರು ಉಪವಿಭಾಗ ಹಾಗೂ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕನ್ನು ಒಳಗೊಂಡ ಪುತ್ತೂರು ಉಪವಿಭಾಗ, ಕುಂದಾಪುರ, ಉಡುಪಿ ಮತ್ತು ಕಾರ್ಕಳ ತಾಲೂಕನ್ನು ಒಳಗೊಂಡ ಕುಂದಾಪುರ ಉಪವಿಭಾಗವನ್ನು ಒಳಗೊಂಡಿದೆ.
ಪುತ್ತೂರು ಉಪವಿಭಾಗಕ್ಕೆ ಸೇರಿದ ಬೆಳ್ತಂಗಡಿ ತಾಲೂಕಿನ ಎರಡು ಸ್ಥಾನಗಳಿಗೆ ಹಾಲಿ ನಿರ್ದೇಶಕರಾಗಿರುವ ಬಿ. ನಿರಂಜನ್‌ಕುಮಾರ್ ಬಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ ಮತ್ತು ಸುಧಾಕರ ಪೂಜಾರಿ ಪೆರಿಂಜೆ ನಾಮಪತ್ರ ಸಲ್ಲಿಸಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ ಇರುವ 80 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರುಗಳಲ್ಲಿ 69 ಮಂದಿ ಅಧ್ಯಕ್ಷರುಗಳಿಗೆ ಮತದಾನಕ್ಕೆ ಅವಕಾಶವಿತ್ತು. 11 ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದರು. ಪೆರಿಂಜೆ ಸುಧಾಕರ ಪೂಜಾರಿಯವರು ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ನಿರಂಜನ್ ಹಾಗೂ ಪದ್ಮನಾಭ ಶೆಟ್ಟಿಯವರು ಎರಡು ಸ್ಥಾನಗಳಿಗೆ ಅವಿರೋಧವಾಗಿ ಪುನರಾಯ್ಕೆ ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.