ಬೆಳ್ತಂಗಡಿ: 2015 ನೇ ಇಸವಿಯಲ್ಲಿ ಕೊಯ್ಯೂರು ಕ್ರಾಸ್ ರಸ್ತೆ ಬಳಿ ನಿಂತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬರನ್ನು ಪರಿಚಿತ ವ್ಯಕ್ತಿ ಮತ್ತು ಅವರ ಸಂಗಡಿಗರೊಬ್ಬರು ಸೇರಿ ಕಾರಿನಲ್ಲಿ ಕರೆದುಕೊಂಡು ಹೋಗಿ ಕಾಡಿನಲ್ಲಿ ಆಕೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣವನ್ನು ಗ್ಯಾಂಗ್ ರೇಪ್ ಎಂದು ಪರಿಗಣಿಸಿದ ನ್ಯಾಯಾಲಯ ಆರೋಪಿಗಳಿಬ್ಬರಿಗೂ ತಲಾ20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.
ಆರೋಪಿಗಳಾದ ಸಚಿನ್ ಕುಮಾರ್ ಮತ್ತು ಕೆ. ಟಿ ಮ್ಯಾಥ್ಯೂ ಯಾನೆ ಮನು ಎಂಬವರೇ ಇದೀಗ ಶಿಕ್ಷೆಗೊಳಗಾಗಿರುವ ಆರೋಪಿಗಳು.
2015 ರಲ್ಲಿ ಸದ್ರಿ ವಿದ್ಯಾರ್ಥಿನಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಹೋಗುವ ದಾರಿ ಮಧ್ಯೆ ಕೊಯ್ಯೂರು ಕ್ರಾಸ್ ಬಳಿ ನಿಂತಿದ್ದ ವೇಳೆ ಮೊದಲೇ ಪರಿಚಿತರಾಗಿದ್ದ ಸಚಿನ್ ಕುಮಾರ್ ಅವರು ಸಂಗಡಿಗ ಮ್ಯಾಥ್ಯೂ ಅವರ ಜೊತೆ ಮಾರುತಿ ಓಮ್ನಿ ಕಾರಿನಲ್ಲಿ ಬಂದು ಆಕೆಯನ್ನು ಮನೆಗೆ ಬಿಡುವುದಾಗಿ ಕುಳ್ಳಿರಿಸಿಕೊಂಡು ಮುಂದೆ ಹೋಗುತ್ತಿದ್ದಂತೆ ಪಕ್ಕದ ಕಾಡಿಗೆ ಕರೆದುಕೊಂಡು ಹೋಗಿ ಆಕೆಗೆ ಲೈಂಗಿನ ದೌರ್ಜನ್ಯ ಎಸಗಿದ್ದರು. ಸದ್ರಿ ಪ್ರಕರಣದ ತನಿಖೆ ಕೈಗೊಂಡಿದ್ದ ಆಗಿನ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಲಿಂಗಪ್ಪ ಪೂಜಾರಿ ಬಿ.ಆರ್ ಅವರು ತನಿಖಾಧಿಕಾರಿ ವೆಂಕಟೇಶ್ ನಾಯ್ಕ ಅವರನ್ನೊಳಗೊಂಡ ತಂಡದ ಮೂಲಕ ಮಹತ್ವ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದೀಗ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ದೀರ್ಘ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. ಇದು ಕಳೆದ 4 ವರ್ಷಗಳ ಅವಧಿಯಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ದಾಖಲಿಸಿಕೊಂಡ ಪ್ರಕರಣಗಳಲ್ಲಿ 3 ಕೊಲೆ ಆರೋಪ ಮತ್ತು 2 ಅತ್ಯಾಚಾರ ಪ್ರಕರಣಗಳು ಶಿಕ್ಷೆಗೊಳಗಾಗುವಂತಾಗಿದ್ದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.